ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ – ಡಿ.ಕೆ. ಶಿವಕುಮಾರ್

ಉಡುಪಿ: ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ – ಡಿ.ಕೆ. ಶಿವಕುಮಾರ್.

ನಾನು ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ಕಾರಣ, ಈ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಮೊದಲ ಬಾರಿಗೆ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರಿಗೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿತ್ತು. ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಆದರೆ ಅವರ ಜತೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರು ಹೋಗಿಲ್ಲ. ಹೀಗಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ.

ತಂದೆ, ತಾಯಿ ಹಾಗೂ ಮಗನಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿತ್ತು. ಇದಕ್ಕಿಂತ ಹೆಚ್ಚಿನದನ್ನು ಕಾಂಗ್ರೆಸ್ ಏನು ನೀಡಲು ಸಾಧ್ಯ? 2023ರ ಚುನಾವಣೆಯಲ್ಲಿ ಆತ ಯಾವುದೇ ಪಕ್ಷದಿಂದ ನಿಂತರೂ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿ, ಆತನನ್ನು ಸೋಲಿಸುವ ಕೆಲಸ ಮಾಡಬೇಕು. ಆತ ನಮ್ಮ ಪಕ್ಷದಲ್ಲಿದ್ದಾಗ ವೇದಿಕೆ ಮೇಲೆ ಕೂರುತ್ತಿದ್ದರು. ಈಗ ಬಿಜೆಪಿಗೆ ಹೋಗಿ ಕೆಳಗೆ ಕೂರುವ ಸ್ಥಿತಿ ಬಂದಿದೆ.

ನಾವಿಂದು ಕೃಷ್ಣನ ಪಾದಕ್ಕೆ ಬಂದಿದ್ದೇವೆ. ನಾರಾಯಣ ಗುರುಗಳ ಭೂಮಿಗೆ ಬಂದಿದ್ದೇವೆ. ಈ ಪ್ರದೇಶಕ್ಕೆ ಅದರದೇ ಆದ ಇತಿಹಾಸವಿದೆ. ಈ ಎರಡು ಜಿಲ್ಲೆ ಅತಿ ಹೆಚ್ಚು ವಿದ್ಯಾವಂತ, ಬುದ್ದಿವಂತರಿರುವ ಜಿಲ್ಲೆ. ಈ ದೇಶಕ್ಕೆ ಆರ್ಥಿಕವಾಗಿ ಶಕ್ತಿ ನೀಡಿರುವ ಜಿಲ್ಲೆ. ಉಡುಪಿಯ ಒಂದು ಪಂಚಾಯ್ತಿಯಲ್ಲಿ 3 ಮೆಡಿಕಲ್ ಕಾಲೇಜು ಇದ್ದು, ಅಷ್ಟರ ಮಟ್ಟಿಗೆ ಶೈಕ್ಷಣಿಕವಾಗಿ ಬೆಳೆಸಲಾಗಿದೆ.

ನಾವು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದು, ರಾಜ್ಯದ ಎಲ್ಲ ಜನರ ಸಮಸ್ಯೆ ಅರಿತು, ನಿಮ್ಮ ನೋವು, ಅಭಿಪ್ರಾಯ ತಿಳಿದು ಪರಿಹಾರ ನೀಡಲು ಬಂದಿದ್ದೇವೆ. ಈ ಜಿಲ್ಲೆಯಲ್ಲಿ ನಾವು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತಿದ್ದೆವು. ಆದರೆ ಈಗ ಎರಡೂ ಜಿಲ್ಲೆಗಳಲ್ಲಿ ಕೇವಲ ಓರ್ವ ಶಾಸಕರು ಮಾತ್ರ ಇದ್ದಾರೆ. ಈ ವಿಚಾರಕ್ಕೆ ನಮ್ಮ ಮನಸಿಗೆ ನೋವಿದೆ. ನಾವು ನುಡಿದಂತೆ ನಡೆದಿದ್ದೇವೆ. ಉದ್ಯೋಗ ಸೃಷ್ಟಿಗೆ ಖಾಸಗಿಕರಣ ಬಿಟ್ಟು ರಾಷ್ಟ್ರೀಕರಣ ಮಾಡಿ ಎಲ್ಲ ಸಂಘ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದರು. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ.

ಇತಿಹಾಸ ಮರೆತರೆ ಯಾರೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಕಾಂಗ್ರೆಸ್ ಬ್ಯಾಂಕ್ ರಾಷ್ಟ್ರೀಕರಣದಿಂದ ಜನರ ಬದುಕು ಕಟ್ಟುವ ಬಗ್ಗೆ ಆಲೋಚಿಸಿತ್ತು. ಆದರೆ ಬಿಜೆಪಿ ಜನರ ಬದುಕು ಬಿಟ್ಟು ಭಾವನೆ ವಿಚಾರವಾಗಿ ರಾಜಕಾರಣ ಮಾಡಿ ಎಲ್ಲ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿದೆ.

ಆಸ್ಕರ್ ಫರ್ನಾಂಡೀಸ್ ಅವರು ಈ ಭಾಗದಲ್ಲಿ ಒಂದು ಕಾರ್ಖಾನೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು. ನಾನು ಸಹಕಾರ ಸಚಿವನಾಗಿದ್ದಾಗ ಸಹಾಯ ಮಾಡಿದ್ದೆ. ಈಗ ಎಲ್ಲವನ್ನು ಮಾರಿಕೊಂಡು ಸ್ಕ್ರಾಪ್ ಮಾರಲು ಮುಂದಾಗಿದ್ದಾರಂತೆ. ಎಲ್ಲೆಡೆ ಅರ್ಜಿ ಹಾಕುವ ನಿರಾಣಿ ಅವರು ಇಲ್ಲಿಗೆ ಯಾಕೋ ಅರ್ಜಿ ಹಾಕಿಲ್ಲ. ಇದು ಬಿಜೆಪಿಯ ವ್ಯವಹಾರ.

ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಅವರು 600 ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ರೈತರ ಆದಾಯ ಡಬಲ್ ಮಾಡುತ್ತೇವೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಈ ಭಾಗದ ಮೀನುಗಾರರಿಗೆ ಏನೆಲ್ಲಾ ಮಾತು ಕೊಟ್ಟಿದ್ದರು, ಯಾವುದನ್ನೂ ಈಡೇರಿಸಿಲ್ಲ. ಈ ಭಾಗದ ಮೀನುಗಾರರು ನನಗೆ ಒಂದು ಮನವಿ ನೀಡಿದ್ದಾರೆ. ಅವರು ಸೀಮೆಎಣ್ಣೆ ಕೇಳುತ್ತಿದ್ದಾರೆ. ಈಗ ನೀಡಲಾಗುತ್ತಿರುವ 300 ಲೀಟರ್ ಸೀಮೆಎಣ್ಣೆ ಅನ್ನು 500 ಲೀಟರ್ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಈಗಿನ ಸರ್ಕಾರ ಕೇವಲ 75 ಲೀಟರ್ ನೀಡಲು ಮುಂದಾಗಿದೆ. ಇಂತಹ 10 ಬೇಡಿಕೆಗಳನ್ನು ಅವರು ನಮಗೆ ನೀಡಿದ್ದಾರೆ. ಇವುಗಳನ್ನು ಈಡೇರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಇತ್ತೀಚೆಗೆ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ 10 ಲಕ್ಷ ಕೋಟಿ ಹೂಡಿಕೆ ಬಂದಿದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸದಾನಂದ ಗೌಡರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಈ 10 ಲಕ್ಷ ಕೋಟಿ ಬಂಡವಾಳದಲ್ಲಿ ಮಂಗಳೂರು, ಉಡುಪಿ, ಶಿವಮೊಗ್ಗದಲ್ಲಿ ಹೂಡಿಕೆ ಮಾಡಲು ಎಷ್ಟು ಹಣ ಬಂದಿದೆ? ಎಂದು. ನಿಮ್ಮ ಆಡಳಿತ ನೋಡಿ ಯಾರೊಬ್ಬರೂ ಈ ಭಾಗಗಳಲ್ಲಿ 1 ಲಕ್ಷ ಕೋಟಿ ಬಂಡವಾಳ ಹಾಕಲು ಯಾರೂ ಮುಂದೆ ಬಂದಿಲ್ಲ. ಅದಕ್ಕೆ ಕಾರಣ ನೀವು ಜನರ ಭಾವನೆ ಜತೆ ಆಟವಾಡುತ್ತಿರುವುದು.

ನನಗೆ ಈ ಭಾಗದ ಅನೇಕ ಶಿಕ್ಷಣ ಸಂಸ್ಥೆಗಳ ಸ್ನೇಹಿತರಿದ್ದಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಹೊರ ರಾಜ್ಯ, ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಆದರೆ ಕೋಮುಗಲಭೆ ವಿಷ ಬೀಜ ಬಿತ್ತುತ್ತಿರುವುದನ್ನು ನೋಡಿ ಹೆಚ್ಚಿನ ಜನ ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ.

ಈ ಸರ್ಕಾರದ ಆಡಳಿತದಲ್ಲಿ ಅಮಾಯಕ ಅಲ್ಪಸಂಖ್ಯಾತರು, ಬಿಜೆಪಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಕೊಲೆಯಾಗಿದ್ದಾರೆ, ಇಲ್ಲಿ ಕೇವಲ ಅಮಾಯಕರು ಮಾತ್ರ ಬಲಿಯಾಗುತ್ತಿದ್ದು, ಬಿಜೆಪಿ ನಾಯಕರ ಮಕ್ಕಳು ಯಾಕೆ ಪಕ್ಷ ಸಂಘಟನೆ ಮಾಡಲು ತ್ರಿಶೂಲ, ದೊಣ್ಣೆ ಹಿಡಿದು ಮುಂದೆ ಬರುತ್ತಿಲ್ಲ? ಕೇವಲ ಬಡವರ ಮಕ್ಕಳನ್ನು ಮಾತ್ರ ಬಲಿ ಕೊಡುತ್ತಿದ್ದಾರೆ.

ನಾನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಗೆ ಒಂದು ಮನವಿ ಮಾಡಿಕೊಳ್ಳುತ್ತೇನೆ. ಬಿಜೆಪಿಯವರು ಡಬಲ್ ಇಂಜಿನ್ ಸರ್ಕಾರ, ಅಚ್ಛೇ ದಿನ ಎಂದು ಹೇಳಿದರು, ನಿಮಗೆ ಯಾವ ಅಚ್ಛೇ ದಿನ ಬಂದಿದೆ ಹೇಳಿ? ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದರು, ಹಾಕಿದ್ದಾರಾ? ನಿಮ್ಮ ಬದುಕಿನಲ್ಲಿ ಬದಲಾವಣೆ ಮಾಡುತ್ತೇನೆ ಎಂದರು. 400 ರೂ. ಇದ್ದ ಅಡುಗೆ ಸಿಲಿಂಡರ್ ಬೆಲೆ 1100 ಆಗಿದೆ. ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಉಜ್ವಲ ಯೋಜನೆ ಜಾಹೀರಾತಿನಲ್ಲಿ ಮೋದಿ ಅವರ ಫೋಟೋ ಹಾಕಿಕೊಂಡಿದ್ದರು. ಅಡುಗೆ ಎಣ್ಣೆ ಲೀಟರ್ ಗೆ 90 ರಿಂದ 240 ಆಗಿದೆ. ಉಪ್ಪು, ಮೊಸರು ಎಲ್ಲದರ ಮೇಲೆ ತೆರಿಗೆ ಹಾಕಿದ್ದಾರೆ.

ಕೋವಿಡ್ ಸಮಯದಲ್ಲಿ ಎಲ್ಲ ವರ್ಗದ ಜನ 2 ವರ್ಷ ನರಳಾಡಿದ್ದಾರೆ. ಯಾರಿಗೂ ಈ ಸರ್ಕಾರ ನೆರವು ನೀಡಲಿಲ್ಲ. ನಾನು ಹಾಗೂ ಸಿದ್ದರಾಮಯನವರು ಈ ವರ್ಗದ ಜನರಿಗೆ ತಿಂಗಳಿಗೆ 10 ಸಾವಿರ ಪ್ರೋತ್ಸಾಹ ಧನ ನೀಡಿ ಎಂದು ಹೋರಾಟ ಮಾಡಿದೆವು. ಆಗ ಕೆಲ ಚಾಲಕರಿಗೆ ಒಂದು ತಿಂಗಳು ಮಾತ್ರ 5 ಸಾವಿರ ಕೊಟ್ಟರು. ಬೀದಿ ವ್ಯಾಪಾರಿಗಳಿಗೆ ನೆರವು ನೀಡಿ ಎಂದರೆ ನೀಡಲಿಲ್ಲ, ಹೆಣದ ಮೇಲೆ, ಔಷಧಿ ಮೇಲೆ ಙಣ ಮಾಡಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಆರೋಪದ ಬಗ್ಗೆ ಪ್ರಧಾನಿಗೆ ಪತ್ರ ಬರೆದರು. ಬಿಜೆಪಿ ನಾಯಕರು ಕೋವಿಡ್ ಸಲಕರಣೆ ಖರೀದಿಯಲ್ಲಿ 300% ಕಮಿಷನ್ ಪಡೆದಿದ್ದಾರೆ. ಈ ಸರ್ಕಾರಕ್ಕೆ 40% ಸರ್ಕಾರ ಎಂಬ ಬ್ರ್ಯಾಂಡ್ ಬಂದಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಆದರೂ ಸೌಜನ್ಯಕ್ಕಾದರೂ ಒಬ್ಬ ಮಂತ್ರಿ ಹೋಗಿ ಅಲ್ಲಿನ ಜನರಿಗೆ ಸಾಂತ್ವನ ಹೇಳಲಿಲ್ಲ. ಜಿಲ್ಲಾ ಮಂತ್ರಿ, ಇಲಾಖಾ ಮಂತ್ರಿ, ಜಿಲ್ಲಾಧಿಕಾರಿ ಸಾಂತ್ವನ ಹೇಳಲಿಲ್ಲ. ಬೆಳಗಾವಿಯ ಸಂಸದ ಸುರೇಶ್ ಅಂಗಡಿ ಕೋವಿಡ್ ನಿಂದ ಸತ್ತರು. ಅವರ ಮೃತದೇಹವನ್ನು ಅವರ ಊರಿಗೆ ತರಲು ಈ ಸರ್ಕಾರದಿಂದ ಸಾಧ್ಯವಾಗಲಿಲ್ಲ.

ಎಲ್ಲಿದೆ ಮಾನವೀಯತೆ? ಸಂಸ್ಕೃತಿ? ಧರ್ಮ? ಅಂತ್ಯಸಂಸ್ಕಾರ ಮಾಡುವಾಗಲೂ ಲಂಚ ಹೊಡೆದರು. ಹಾಸಿಗೆ ವಿಚಾರದಲ್ಲೂ ಹಗರಣ ಮಾಡಿದರು. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಬೆಡ್ ಧಂದೆ ಬಗ್ಗೆ ಮಾತನಾಡಿದರು, ಅದನ್ನು ಮಾಡಿದವರು ಯಾರು?

ನಿಮ್ಮ ಬದುಕು ಬದಲಾವಣೆ ಹೇಗೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಚರ್ಚೆ ಮಾಡಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ನಿಮಗೆ ಸಹಾಯ ಮಾಡಲು ಗೃಹಜ್ಯೋತಿ ಎಂಬ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಪ್ರತಿ ತಿಂಗಳು ನೀಡಲು ತೀರ್ಮಾನಿಸಿದ್ದೇವೆ. ಹಾಸನದಲ್ಲಿ ಒಬ್ಬ ಶಾಸಕರಿಲ್ಲದಿದ್ದರೂ ಸಾವಿರಾರು ಜನರು ಭವ್ಯ ಸ್ವಾಗತ ಕೋರಿ ನಮಗೆ ಬೆಂಬಲ ನೀಡಿದರು. ಅದು ರಾಜ್ಯದಲ್ಲಿ ಬದಲಾವಣೆ ಬಯಸಿರುವುದರ ಸಂಕೇತ. ಇನ್ನು ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಬೇಕು ಎಂದು ಕೇಳಿದಾಗ 8 ಸಾವಿರಕ್ಕೂ ಹೆಚ್ಚು ಸಲಹೆ, ಅಭಿಪ್ರಾಯಗಳು ಬಂದವು. ಅವುಗಳ ಬಗ್ಗೆ ಚರ್ಚಿಸಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಎಂಬ ಯೋಜನೆಯನ್ನು ಪ್ರಕಟಿಸಿದ್ದೇವೆ. ಇವೆರಡು ಕಾಂಗ್ರೆಸ್ ಪಕ್ಷದ ಎರಡು ಗ್ಯಾರೆಂಟಿ ಯೋಜನೆಗಳಾಗಿವೆ.

ನಾವು ಘೋಷಣೆ ಮಾಡಿದ ನಂತರ ಬಿಜೆಪಿಯವರು ಘೋಷಣೆ ಮಾಡುತ್ತಿದ್ದಾರೆ. ಮೂರುವರೆ ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡಿದ್ದರಲ್ಲಾ ಯಾಕೆ ಮಾಡಲಿಲ್ಲ? ನೀವು ಯಾವುದಾದರೂ ಓರ್ವ ಬಡವರಿಗೆ ಸಹಾಯ ಮಾಡಿದ್ದೀರಾ? ಕೇವಲ ಕೋಮುದ್ವೇಷ, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿದ್ದೀರಿ. ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದ್ದ ಜಿಲ್ಲೆ ಇಂದು ತಮ್ಮ ಸ್ಥಾನಗಳಲ್ಲಿ ಕುಸಿಯುತ್ತಿವೆ. ಇದಕ್ಕಾಗಿ ಬಿಜೆಪಿಗೆ ಮತ ಹಾಕಬೇಕಾ?

ಬಿಜೆಪಿ ಕಳೆದ ಬಾರಿ ಕೊಟ್ಟಿದ್ದ 600 ಭರವಸೆಗಳಲ್ಲಿ ಕೇವಲ 50 ಮಾತ್ರ ಈಡೇರಿದೆ. ಸಿದ್ದರಾಮಯ್ಯನವರು 165 ಭರವಸೆ ಕೊಟ್ಟು 159 ಭರವೆಸೆ ಈಡೇರಿಸಿದರು. ಇನ್ನು 30 ಹೆಚ್ಚಿನ ಕಾರ್ಯಕ್ರಮ ನೀಡಿದ್ದೇವೆ. ಅವರ ಯೋಜನೆ ಬಗ್ಗೆ ನಾವು ದಿನನಿತ್ಯ ಪ್ರಶ್ನೆ ಕೇಳುತ್ತಿದ್ದರೂ ಅದಕ್ಕೆ ಉತ್ತರ ನೀಡುತ್ತಿಲ್ಲ. ಇವರ ದುರಾಡಳಿತ ನೋಡಿ ನಾವು ಬಿಜೆಪಿಯ ಪಾಪದ ಪುರಾಣವನ್ನು ಬಿಡುಗಡೆ ಮಾಡಿದ್ದೇವೆ. ಇದನ್ನು ನೀವು ಪ್ರತಿ ಮನೆಗೂ ತಲುಪಿಸಬೇಕು.

ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ನಾನು ಹೇಳಿದ್ದನೇ? ಅವರದೇ ಪಕ್ಷದ ಶಾಸಕ ಹೇಳಿದ್ದು, ಇದುವರೆಗೂ ಆತನಿಗೆ ನೊಟೀಸ್ ನೀಡಿಲ್ಲ ಯಾಕೆ? ಪಿಎಸ್ಐ ಹಗರಣ ಮಾಡಿದ್ದರು, ಅದರಲ್ಲಿ ಹಗರಣ ಬಯಲಿಗೆ ತಂದರೋ ಅವರಿಗೆ ನೊಟೀಸ್ ನೀಡುತ್ತೀರಿ, ನಿಮ್ಮ ಸಂಸದ ಪ್ರತಾಪ್ ಸಿಂಹ ಉಪಕುಲಪತಿ ಹುದ್ದೆಗೆ 5-6 ಕೋಟಿ ಲಂಚ ನೀಡಬೇಕು ಎಂದು ಹೇಳಿದರೂ ಯಾಕೆ ನೊಟೀಸ್ ನೀಡಿಲ್ಲ?

ಬಿಜೆಪಿ ಮಂತ್ರಿ, ಶಾಸಕರು ದಿನನಿತ್ಯ ಕುಣಿಯುತ್ತಿದ್ದಾರೆ. ನಾನು ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಕುಮಾರಸ್ವಾಮಿ ಅವಿಶ್ವಾಸ ನಿರ್ಣಯ ಮಂಡಿಸಿದಾಗ ನಾನು ಸದನದಲ್ಲಿ ಡಿವಿಜಿ ಅವರ ಸಾಲುಗಳನ್ನು ಉಲ್ಲೇಖಿಸಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।
ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।
ಉದ್ಧರಿಸುವೆನು ಜಗವನೆನ್ನುತಿಹ ಸಖನೆ,
ನಿನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ ।।’

ಅದೇ ರೀತಿ ಯಡಿಯೂರಪ್ಪನವರೆ, ಸದಾನಂದಗೌಡರೇ, ಶೋಭಕ್ಕನವರೇ ನೀವು ಯಾರನ್ನು ಉದ್ಧಾರ ಮಾಡಿದ್ದೀರಿ ಎಂದು ನಿಮ್ಮ ಪಕ್ಷದವರನ್ನು ನಿಲ್ಲಿಸಿಕೊಂಡು ಹೇಳಿ. ಇಂತಹ ವರ್ಗಕ್ಕೆ ನ್ಯಾಯ ಒದಗಿಸಿದ್ದೇವೆ, ಇಂತಹ ಸಮಾಜಕ್ಕೆ ಸಮಾನತೆ ನೀಡಿದ್ದೇವೆ ಎಂದು ಹೇಳಿ ನೋಡೋಣ.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬರುತ್ತಾರೆ. ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಈ ಜಿಲ್ಲೆಯಲ್ಲಿ ನಾವು ಎಲ್ಲ ಸೀಟು ಗೆಲ್ಲುತ್ತೇವೆ. ನಾವು ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ನಿಮ್ಮ ಸೇವಕರಾಗಿ ದುಡಿಯುತ್ತೇವೆ.

ಉಡುಪಿಯಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಯು ಟಿ ಖಾದರ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *