ಧೃವನಾರಾಯಣ ಅವರ ಶ್ರದ್ದಾಂಜಲಿ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು.

ಧೃವನಾರಾಯಣ ಅವರ ಶ್ರದ್ದಾಂಜಲಿ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು.

ನಾನು ನನ್ನ ಸಹೋದರ ಆರ್. ಧೃವನಾರಾಯಣ ಅವರಿಗೆ ಇಂದು ಈ ವೇದಿಕೆಯಲ್ಲಿ ನುಡಿ ನಮನ ಸಲ್ಲಿಸುವುದಿಲ್ಲ. ಮೇ 17 ರ ನಂತರ ಅವರ ಬದುಕು, ಭಾವನೆ, ಸೇವೆ, ವ್ಯಕ್ತಿತ್ವದ ಬಗ್ಗೆ ನುಡಿ ನಮನ ಸಲ್ಲಿಸುತ್ತೇನೆ. ಇಲ್ಲಿ ಭಾವುಕವಾಗಿ ಮಾತನಾಡಲು ನನಗೆ ಇಷ್ಟವಿಲ್ಲ. ಧೃವನಾರಾಯಣ ಅವರ ರಾಜಕೀಯ ಬದುಕು ಹಾಗೂ ಅವರ ಸಾಧನೆಯ ಪುಸ್ತಕ ಬರೆಯದಿದ್ದರೂ ಅವರ ಸಾಧನೆಯ ಪುಸ್ತಕದ ಮುನ್ನುಡಿ ಬರೆಯುತ್ತೇನೆ. ವಿದ್ಯಾರ್ಥಿ ನಾಯಕ ಕಾಲದಿಂದಲೂ ನಾನು, ಧೃವನಾರಾಯಣ ಅವರು ಸುಮಾರು 42 ವರ್ಷಗಳ ಸ್ನೇಹ, ಸಹೋದರತ್ವ ಸಂಬಂಧವನ್ನು ಹೊಂದಿದ್ದೇವು. ನಾನು ನನ್ನ ಕುಟುಂಬದ ಸದಸ್ಯನನ್ನು ಕಳೆದುಕೊಂಡಿರುವ ನೋವನ್ನು ಅನುಭವಿಸಿದ್ದರೂ ಈಗ ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಕೆಲ ತಿಂಗಳ ಹಿಂದಷ್ಟೇ ಡಾ. ಪುನೀತ್ ರಾಜಕುಮಾರ್ ಅವರ ಸಾರ್ಥಕ ಬದುಕು ನೆನೆದು ಹಾಗೂ ಅವರ ಸಾವಿನಿಂದ ಜನ ಹೇಗೆ ದುಃಖ ಪಟ್ಟರೋ ಅದೇ ರೀತಿ ಕಾಂಗ್ರೆಸ್, ಮೈಸೂರು, ಚಾಮರಾಜನಗರ ಭಾಗದ ಜನ ಧೃವನಾರಾಯಣ ಅವರ ಸಾವಿಗೆ ದುಖಃ ಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾನು ಎಷ್ಟೇ ಹುಡುಕಿದರೂ ಧೃವನಾರಾಯಣ ಅವರ ಸ್ಥಾನವನ್ನು ತುಂಬುವ ಮತ್ತೊಬ್ಬ ನಾಯಕನನ್ನು ಪಡೆಯಲು ಸಾಧ್ಯವಿಲ್ಲ. ಸರಳತೆ, ಸದ್ಭಾವನೆ, ನಾಯಕತ್ವವಿರುವ ಅವರಂತ ಮತ್ತೊಬ್ಬ ವ್ಯಕ್ತಿ ನಮಗೆ ಸಿಗುವುದಿಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಈ ಹಿಂದೆ ರಾಜಶೇಖರ್ ಮೂರ್ತಿ ಅವರ ಜತೆಯಲ್ಲಿ ಬಿಜೆಪಿಗೆ ಹೋಗುವ ಪರಿಸ್ಥಿತಿ ಬಂದಾಗ ನಾನು ಒತ್ತಡ ಹಾಕಿ ಅಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಸಂತೇಮರಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೃಷ್ಣಾ ಅವರ ಅನುಮತಿ ಪಡೆದು ಬಿ ಫಾರ್ಮ್ ಕಳುಹಿಸಿಕೊಡಲಾಗಿತ್ತು. ನಂತರ ಆ ಚುನಾವಣೆ ಈ ದೇಶಕ್ಕೆ ಒಂದು ಇತಿಹಾಸ ಸೃಷ್ಟಿಸಿತು. ಕೇವಲ 1 ಮತಗಳ ಅಂತರದಲ್ಲಿ ಗೆದ್ದು ಇತಿಹಾಸ ಬರೆದರು. ನಾನು ಈ ಸಂದರ್ಭದಲ್ಲಿ ಧೃವನಾರಾಯಣ ಅವರ ಎರಡು ಚುನಾವಣೆಯನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಒಂದು ಅವರು ಒಂದು ಮತದಿಂದ ಗೆದ್ದ ಚುನಾವಣೆ, ಮತ್ತೊಂದು ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಸೋತ ಚುನಾವಣೆ. ಈ ಲೋಕಸಭೆ ಚುನಾವಣೆಯಲ್ಲಿ ಅವರು ಸಾವಿರದಷ್ಟು ಮತಗಳಿಂದ ಸೋಲನುಭವಿಸಿದ್ದರು. ಈ ಕ್ಷೇತ್ರದಲ್ಲಿ ಎರಡೂವರೆ ಸಾವಿರ ಬೂತ್ ಗಳಿದ್ದು, ಒಂದೊಂದು ಬೂತ್ ನಲ್ಲಿ ಒಂದು ಮತ ಹೆಚ್ಚಿಗೆ ಬಿದ್ದಿದ್ದರೂ ಧೃವನಾರಾಯಣ ಅವರು ಡಿ.ಕೆ. ಸುರೇಶ್ ಅವರ ಜತೆಯಲ್ಲಿ ಸಂಸದರಾಗಿ ಸಂಸತ್ತಿನಲ್ಲಿ ಕೂರಬಹುದಾಗಿತ್ತು. ನೀವು ಯಾಮಾರಿದಿರೋ, ಅವರ ಹಣೆಬರಹದಲ್ಲಿ ಇರಲಿಲ್ಲವೋ, ಅವರು ಆಗ ಸೋಲನುಭವಿಸಬೇಕಾಯಿತು. ಈಗ ಸಾವನುಭವಿಸಿದ್ದಾರೆ.

ಧೃವನಾರಾಯಣ ಅವರ ಸಾವಿನ ಸುದ್ದಿ ಕೇಳಿದಾಗ ನನಗೆ ದುಃಖ ತಡೆಯಲು ಆಗಲಿಲ್ಲ. ಈಗಲೂ ಆ ನೋವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಂತಿಮ ದರ್ಶನಕ್ಕೆ ಎಐಸಿಸಿ ಅಧ್ಯಕ್ಷರು ಆಗಮಿಸಿದ್ದರು. ಧೃವನಾರಾಯಣ ಅವರು ಯಾವ ರೀತಿ ಜನರ ಪ್ರೀತಿ ವಿಶ್ವಾಸ ಸಂಪಾದಿಸಿದ್ದರು ಎಂಬುದಕ್ಕೆ ಸಾಕ್ಷಿಯಾಗಿತ್ತು. ಧೃವನಾರಾಯಣ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಮುನ್ನ ಅವರಿಗೆ ಎಐಸಿಸಿ ಕಾರ್ಯದರ್ಶಿ ಸ್ಥಾನ ದೊರೆತಿತ್ತು. ನಾನು ಅವರಿಗೆ ಈ ವಿಚಾರ ತಿಳಿಸಿದಾಗ, ನನಗೆ ಈ ಜವಾಬ್ದಾರಿ ಬೇಡ ಎಂದು ಹೇಳಿದರು. ನಂತರ ನಮ್ಮ ನಾಯಕರೆಲ್ಲರೂ ಸೇರಿ ಚರ್ಚೆ ಮಾಡಿ ಅವರ ಬಯಕೆ ಕೇಳಿದಾಗ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಬೇಕು ಎಂದು ಕೇಳಿದರು. ನನ್ನ ಬದುಕಿನಲ್ಲಿ ಡಿ.ಕೆ. ಸುರೇಶ್ ಅವರು ಹೇಗೆ ನನಗೆ ಶಕ್ತಿಯಾಗಿದ್ದಾರೋ ಅದೇ ರೀತಿ ನಾನು ಪಕ್ಷದ ಅಧ್ಯಕ್ಷನಾದ ನಂತರ ಪಕ್ಷದ ಸಂಘಟನೆ ವಿಚಾರದಲ್ಲಿ ಧ್ರುವನಾರಾಯಣ ಅವರು ಎಲ್ಲ ರೀತಿಯ ಜವಾಬ್ದಾರಿ ಪಡೆದು ಎಲ್ಲ ಜಿಲ್ಲೆಗಳ ಸಮಸ್ಯೆಯನ್ನು ಬಗೆಹರಿಸಿಕೊಂಡು ನನಗೆ ಶಕ್ತಿಯಾಗಿದ್ದರು. ಪಕ್ಷಕ್ಕೆ ಹಾಗೂ ಈ ಭಾಗದ ಜನರಿಗೆ ಆಸ್ತಿಯಾಗಿದ್ದರು. ಮಹಾತ್ಮಾ ಗಾಂಧಿ ಅವರು ಈ ಭಾಗದ ಬದನವಾಳು ಗ್ರಾಮಕ್ಕೆ ಬಂದಿದ್ದ ಇತಿಹಾಸವಿದೆ. ಭಾರತ ಜೋಡೋ ಯಾತ್ರೆ ಸಮಯದಲ್ಲಿ ಈ ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೋಗಬೇಕು ಎಂದು ಚರ್ಚೆ ಮಾಡಿದಾಗ ಗಾಂಧಿ ಜಯಂತಿಯನ್ನು ಬದನವಾಳು ಗ್ರಾಮದಲ್ಲಿ ಆಚರಿಸಲು ಧ್ರುವನಾರಾಯಣ ಅವರು ಸಲಹೆ ನೀಡಿದರು. ಅವರ ಸಲಹೆಯಂತೆ ಬದನವಾಳು ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ಮಧ್ಯೆ 40 ವರ್ಷಗಳಿಂದ ಇರುವ ಭಿನ್ನಾಭಿಪ್ರಾಯವನ್ನು ತೊಡೆದು ಹಾಕಿ ಅವರನ್ನು ಒಂದುಗೂಡಿಸಬೇಕು ಎಂದು ಸಲಹೆ ನೀಡಿದರು. ನಂತರ ಎರಡೂ ಸಮುದಾಯಗಳ ಕೇರಿಯ ನಡುವೆ ಹಾಳಾಗಿದ್ದ ರಸ್ತೆಯನ್ನು ಮರುನಿರ್ಮಾಣ ಮಾಡಿ ಅದಕ್ಕೆ ಭಾರತ ಜೋಡೋ ರಸ್ತೆ ಎಂದು ನಾಮಕರಣ ಮಾಡಲಾಯಿತು. ಅಲ್ಲದೆ ರಾಹುಲ್ ಗಾಂಧಿ ಅವರು ಈ ಎರಡೂ ಸಮುದಾಯಗಳನ್ನು ಒಟ್ಟಿಗೆ ಕೂರಿಸಿ ಅವರ ಜತೆ ಊಟ ಮಾಡಿ ಅವರ ನಡುವೆ ಬಾಂಧವ್ಯ ಬೆಸೆಯುವ ಸಲಹೆ ಕೊಟ್ಟರು. ಇದು ಧೃವನಾರಾಯಣ ಅವರ ಇತಿಹಾಸ. ಇದು ಮಾನವೀಯತೆಯ ಸಾಧನೆ. ಸಮಾಜಕ್ಕೆ ಇದಕ್ಕಿಂತ ಬೇರೆ ಯಾವ ಕೊಡುಗೆ ನೀಡಲು ಸಾಧ್ಯ? ಹುಟ್ಟು ಸಾವಿನ ಮಧ್ಯ ಪುಟ್ಟ ಜೀವನವನ್ನಿಟ್ಟು, ಕೊಡಬಾರದಷ್ಟು ಜವಾಬ್ದಾರಿ ಕೊಟ್ಟು, ಮರೆಯಲಾಗದ ಬಾಂಧವ್ಯವಿಟ್ಟಿದ್ದಾರೆ. ಇದನ್ನು ದೂರ ಮಾಡಿಕೊಂಡಾಗ ಆಗುವ ನೋವು ಮರೆಯಲು ಅಸಾಧ್ಯ. ನಾನು ಇಂದು ದರ್ಶನ್ ಧೃವನಾರಾಯಣ್ ಅವರಿಗೆ ಮತ ನೀಡಿ ಎಂದು ಕೇಳುವುದಿಲ್ಲ. ದರ್ಶನ್ ಅವರಿಗೆ ನಾವು ಟಿಕೆಟ್ ನೀಡಿಲ್ಲ. ಅವರಿಗೆ ಟಿಕೆಟ್ ಕೊಡಿಸಿದವರು ನೀವು. ನಿಮ್ಮ ನೋವು, ದುಃಖ, ದುಮ್ಮಾನ, ಕೂಗು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಳಿದೆ. ಹೀಗಾಗಿ ದರ್ಶನ್ ಅವರಿಗೆ ಟಿಕೆಟ್ ಸಿಕ್ಕಿದೆ. ದರ್ಶನ್ ಎಂದೂ ಶಾಸಕರಾಗಬೇಕು ಎಂದು ಅರ್ಜಿ ಹಾಕಿದವರಲ್ಲ. ಈ ಚುನಾವಣೆ ನಿಮ್ಮ ಚುನಾವಣೆ, ನಿಮ್ಮ ಹೋರಾಟ, ನಿಮ್ಮ ಜವಾಬ್ದಾರಿ. ಈಗ ಒಳ್ಳೆಯವರಿಗೆ ಕಾಲವಿಲ್ಲ. ದೇವರು ಕ್ರೂರಿ ಎಂದು ಅನಿಸುತ್ತಿದೆ. ನಾನು ದೇವರ ಮೇಲೆ ನಂಬಿಕೆ ಇಟ್ಟಿರುವವನು. ಆದರೂ ಧೃವನಾರಾಯಣ ಅವರಂತಹ ಮನುಷ್ಯನನ್ನು ಇಷ್ಟು ಬೇಗ ಕರೆಸಿಕೊಳ್ಳಬಾರದಿತ್ತು. ನಾನು ಸಹಕಾರಿ ಸಚಿವನಾಗಿದ್ದಾಗ ಅಧಿಕಾರಿಯೊಬ್ಬರು ನನಗೆ ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವತಿ ಮಾನವಃ । ಯಮಸ್ಯ ಕರುಣಾ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ ।। ಇದರ ತಾತ್ಪರ್ಯ ಹೀಗೆ: ‘ಮನಸ್ಸು ಚಂಚಲ, ಹಣವೂ ಅಸ್ಥಿರ; ಮನುಷ್ಯನ ಜೀವನವೂ ಶಾಶ್ವತವಲ್ಲ; ಯಮನಿಗೆ ಕರುಣೆ ಎಂಬುದೇ ಇಲ್ಲ. ಹೀಗಾಗಿ ಧರ್ಮವನ್ನು ಬೇಗ ಆಚರಿಸಬೇಕು. ನಾವು ಯಾರಿಗಾದರೂ ನೆರವು ಮಾಡಬೇಕಾದರೆ, ತಕ್ಷಣ ಮಾಡಬೇಕು. ಒಂದು ಕೈನಿಂದ ಇನ್ನೊಂದು ಕೈಗೆ ಸಹಾಯ ಮಾಡುವ ಕ್ಷಣದಲ್ಲಿ ನಮ್ಮ ಮನಸ್ಸು ಚಂಚಲವಾಗಿರುತ್ತದೆ ಹೀಗಾಗಿ ನಾವು ಸಹಾಯ ಮಾಡಬೇಕು ಎಂದು ಅನಿಸಿದ ತಕ್ಷಣ ಮಾಡಿಬಿಡಬೇಕು ಎಂದು ಆ ಅಧಿಕಾರಿ ನನಗೆ ಹೇಳಿದ್ದ. ಅದಾದ ಮರುದಿನವೇ ನನಗೆ ಕರೆ ಬಂದು ಆ ಅಧಿಕಾರಿ ಹೃದಯಾಘಾತದಿಂದ ಕೊನೆಯೊಸಿರೆಳೆದಿದ್ದಾರೆ ಎಂಬ ವಿಷಯ ಬಂದಿತು. ನಾವು ಧೃವನಾರಾಯಣ ಅವರಿಗೆ ಕೊಟ್ಟ ಪ್ರತಿಯೊಂದು ಜವಾಬ್ದಾರಿಯನ್ನು ಪಕ್ಷದ ಹಿತಕ್ಕಾಗಿ ಬಹಳ ಜವಾಬ್ದಾರಿಯುತವಾಗಿ ಹಾಗೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುವಾಗ ನಾನು ಯಾವುದಾದರೂ ಹೆಸರನ್ನು ಆ ಸ್ಥಾನಕ್ಕೆ ಸೂಚಿಸಬೇಕಾದರೆ ಅದು ಧೃವನಾರಾಯಣ ಅವರು. ಅವರಿಗೆ ಆ ಶಕ್ತಿ, ತಾಳ್ಮೆ, ನಾಯಕತ್ವ, ಸಾಮರ್ಥ್ಯವಿತ್ತು. ನಾನು ಇಂದು ಅವರಿಗೆ ಧನ್ಯವಾದ ಹೇಳುವುದಿಲ್ಲ. ಮೇ 17ರ ನಂತರ, ಚುನಾವಣೆ ನಂತರ ನಾನು ಅವರಿಗೆ ಹಾಗೂ ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655.

Leave a Reply

Your email address will not be published. Required fields are marked *