ಬೆಂಗಳೂರು : ಈ ಬಾರಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ತಾಲೂಕು ಮಟ್ಟದಲ್ಲೇ ಪ್ರಶ್ನೆ ಪತ್ರಿಕೆ ತಯಾರಿ.
ಈ ಬಾರಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ತಾಲೂಕು ಮಟ್ಟದಲ್ಲಿ ತಯಾರಾಗಲಿದ್ದು ಈವರೆಗೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಪ್ರಶ್ನೆ ಪತ್ರಿಕೆ ತಯಾರಿಯ ಜವಾಬ್ದಾರಿಯನ್ನು 2022-23ರ ಸಾಲಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಪೂರ್ವ ಸಿದ್ಧತಾ ಪರೀಕ್ಷೆಯನ್ನು ಬಿಇಒಗಳ ಹಂತದಲ್ಲಿ ನಡೆಸಲು ಅನುಮೋದನೆ ನೀಡಿದ್ದು, ಈ ಹಿನ್ನಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿಯಿಂದ ಮಾದರಿ ಪ್ರಶ್ನೆ ಪತ್ರಿಕೆಯನ್ನು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ ಗೆ ಅಪ್ಲೋಡ್ ಮಾಡಿದ ನಂತರ ಅದೇ ಮಾದರಿ ಪ್ರಶ್ನೆ ಪತ್ರಿಕೆ ಬಿಇಒಗಳು ತಮ್ಮ ಹಂತದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮುದ್ರಣ ಮಾಡಿ ತಾಲೂಕು ಹಂತದ ಸ್ಟ್ರಾಂಗ್ ರೂಮ್ನಲ್ಲಿ ಗೌಪ್ಯತೆ ಮತ್ತು ಸುರಕ್ಷಿತವಾಗಿಡಬೇಕು. ಬಿಗಿ ಭದ್ರತೆಯೊಂದಿಗೆ ಆಯಾ ವಿಷಯದ ಪರೀಕ್ಷಾ ದಿನದಂದು ಶಾಲೆಗಳಿಗೆ ವಿತರಣೆ ಮಾಡಿ ಜಿಲ್ಲಾ ಉಪ ನಿರ್ದೇಶಕರ ನೇತೃತ್ವದಲ್ಲಿ ಪರೀಕ್ಷೆ ನಡೆಸಬೇಕೆಂದು ಸೂಚಿಸಿದೆ.
ಈ ಹಿಂದೆ ಅಂದರೆ 2018ಕ್ಕೆ ಮೊದಲು ಶಿಕ್ಷಕರ ಸಂಘದಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿತ್ತು. ನಂತರ ಶಿಕ್ಷಕರ ಒತ್ತಾಯದ ಮೇರೆಗೆ ಅದನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಸೂಚಿಸಿತ್ತು.
ಪ್ರತಿ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವಾಗಿ 60 ರೂ.ಗಳನ್ನು ಮಾತ್ರ ಸಂಗ್ರಹಿಸಿ ಈ ಶುಲ್ಕವನ್ನು ಶಾಲಾ ಮುಖ್ಯೋಪಾಧ್ಯಾಯರು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಬಿಇಒಗಳು ಪರೀಕ್ಷಾ ಶುಲ್ಕ ಸ್ವೀಕರಿಸಿದ ಮತ್ತು ಪರೀಕ್ಷಾ ಖರ್ಚು ವೆಚ್ಚಗಳ ಕುರಿತು ಲೆಕ್ಕಪತ್ರ ನಿರ್ವಹಿಸಿ ತಪಾಸಣಾ ಸಮಯದಲ್ಲಿ ಹಾಜರುಪಡಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.