ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

ಇಂದು ಪ್ರಜಾಧ್ವನಿ ಯಾತ್ರೆ ನಿಮ್ಮ ಊರಿಗೆ ಬಂದಿದೆ. ಕರಾವಳಿಯ ಜನ ಶಿಕ್ಷಣದಲ್ಲಿ ಮುಂದೆ ಇದ್ದಾರೆ. ರಾಜಕೀಯವಾಗಿ ಪ್ರಬುದ್ಧರು. ಈ ಭಾಗದ ಜನ ಸಾಹಸ ಪ್ರವೃತ್ತಿ ಉಳ್ಳವರು. ದೇಶದ ಅನೇಕ ರಾಜ್ಯ ಅನೇಕ ದೇಶಗಳಲ್ಲಿ ವ್ಯಾಪಾರ ವಹಿವಾಟು, ಹೊಟೇಲ್ ವ್ಯವಹಾರ ಮಾಡುತ್ತಿರುವವರು ಕರಾವಳಿಯ ಜನರು. ಆದರೆ ಇತ್ತೀಚೆಗೆ ಈ ಭಾಗದ ಯುವಕರು, ಬಿಜೆಪಿಯ ದುರುದ್ದೇಶಪೂರ್ವ ಗಹಿಂದುತ್ವಕ್ಕೆ ಬಲಿಯಾಗುತ್ತಿರುವುದು ನೋವಿನ ವಿಚಾರ.

ಬಿಜೆಪಿಯವರು ಹಿಂದೂಗಳ ಪರವಾಗಿರುವವರಲ್ಲ. ಹಿಂದುತ್ವದ ಪರವಾಗಿರುವವರು. ನಾನು ಕೂಡ ಅಪ್ಪಟ ಹಿಂದೂ, ಡಿ.ಕೆ. ಶಿವಕುಮಾರ್, ಸುರ್ಜೆವಾಲ, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೋಯ್ಲಿ ಇವರೆಲ್ಲರೂ ಅಪ್ಪಟ ಹಿಂದೂಗಳೇ. ಆದರೆ ನಾವು ಹಿಂದುತ್ವವಾದಿಗಳಲ್ಲ, ಹಿಂದೂ ಧರ್ಮ , ಹಿಂದೂಗಳ ಪರವಾಗಿರುವವರು. ಅಂದರೆ ಮನುಷ್ಯತ್ವದ ಪರವಾಗಿರುವವರು ಎಂದರ್ಥ. ಮನುಷ್ಯ, ಮನುಷ್ಯನನ್ನು ದ್ವೇಷಿಸಬಾರದು, ಪ್ರೀತಿಸಬೇಕು. ಯಾವುದೇ ಧರ್ಮ, ಜಾತಿಯವರಾದರೂ ಎಲ್ಲರೂ ಮನುಷ್ಯರು. ಯಾವ ಧರ್ಮ ಮನುಷ್ಯರನ್ನು ಕೊಲ್ಲು, ಹಿಂಸೆ ನೀಡು ಎಂದು ಹೇಳುತ್ತದೆಯೇ? ಈ ಬಿಜೆಪಿಯವರು ಹಿಂದೂ ಹೆಸರಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ.

ಹಿಂದುತ್ವ ಎಂದರೆ, ಮನುವಾದ, ಮನುಷ್ಯತ್ವ ವಿರೋಧಿ ವಾದ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಅನೇಕ ಜನ ಕರಾವಳಿ ಭಾಗದಲ್ಲಿ ಹತ್ಯೆಯಾಗಿದ್ದರೆ ಅದರಲ್ಲಿ ಸತ್ತಿರುವವರು ಹಿಂದುಳಿದ ಜಾತಿಗೆ ಸೇರಿರುವವರು. ಯಾರಾದರೂ ಕೂಡ ಆರ್ ಎಸ್ ಎಶ್ ಪ್ರಮುಖ ನಾಯಕ, ಶಾಸಕ ನ ಮಗ ಕೊಲೆ ಆಗಿದ್ದಾರಾ? ಕೊಲೆ ಮಾಡುವವರು, ಕೊಲೆ ಆಗುವವರು, ಜೈಲಿಗೆ ಹೋಗುವವರು ಹಿಂದುಳಿದ ವರ್ಗದ ಜನ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡುತ್ತಾರೆ. ನಿಮಗೆ ಪರೇಶ್ ಮೇಸ್ತಾ ಎಂಬಾತ ಆಕಸ್ಮಿಕವಾಗಿ ಸತ್ತಿದ್ದು, ಅದನ್ನು ಕೊಲೆ ಎಂದು ಬಿಂಬಿಸಿ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದು ಲೋಕಸಭಾ ಸದಸ್ಯರು. ಇವರು ಲೋಕಸಭಾ ಸದಸ್ಯರಾಗಲು ಲಾಯಕ್ಕಾ, ನಾಲಾಯಕ್ಕಾ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದೆ, ಅದರ ತನಿಖೆ ವರದಿಯಲ್ಲಿ ಏನಿದೆ? ಪರೇಶ್ ಮೇಸ್ತಾ ಸಾವು ಸಹಜ. ಅದು ಕೊಲೆಯಲ್ಲ ಎಂದು ಹೇಳಿದೆ. ಸಿಬಿಐ ಯಾರ ನಿಯಂತ್ರಣದಲ್ಲಿದೆ ಅಮಿತ್ ಶಾ, ಮೋದಿ ಅವರ ನಿಯಂತ್ರಣದಲ್ಲಿ. ಅದನ್ನು ನೀವು ವಿವಾದ ಮಾಡುತ್ತೀರಲ್ಲಾ, ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ?

ಬಿಜೆಪಿ ಅಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆಯವನು, ನಾನು ಅವನ್ನು ವಿದೂಶಕ ಎನ್ನುತ್ತೇನೆ. ಅವನು ಬಿಜೆಪಿ ಅಧ್ಯಕ್ಷನಾಗಲು ಲಾಯಕ್ಕಲ್ಲಾ. ಆತ ಇತ್ತೀಚೆಗೆ ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾನೆ. ನೀವು ಈ ಹೇಳಿಕೆ ಕೇಳಿದ ಮೇಲೂ ಎಚ್ಛೆತ್ತುಕೊಳ್ಳದಿದ್ದರೆ ಏನು ಹೇಳಬೇಕು? ಈ ಕರಾವಳಿ ಪ್ರದೇಶದ ಜನರನ್ನು ಹೇಗೆ ಮನವಿ ಮಾಡಬೇಕು? ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಅವರ ಮಾತಿಗೆ ಮರುಳಾಗಬೇಡಿ, ಅವರು ನಿಮ್ಮ ದಾರಿ ತಪ್ಪಿಸುತ್ತಾರೆ. ನಿಮ್ಮ ಭವಿಷ್ಯ ನಾಶ ಮಾಡುತ್ತಾರೆ. ಇಲ್ಲಿ ಹಿಂದುಳಿದ ಜಾತಿ, ಬಡವರು ಇದ್ದಾರೆ.

ನಾವು ಮೀನುಗಾರರಿಗೆ ದಿನಕ್ಕೆ ನಾಡದೋಣಿಗಳಿಗಾಗಿ 300 ಲೀಟರ್ ಸೀಮೆಎಣ್ಣೆ ನೀಡುತ್ತಿದ್ದೆವು. ಬಿಜೆಪಿಯವರು ಬಂದು ಅದನ್ನು ಯಾಕೆ ನಿಲ್ಲಿಸಿದ್ದಾರೆ? ಬಿಜೆಪಿಯವರಿಗೆ ನೀವು ಪ್ರಶ್ನಿಸಬೇಕು. ನಾನು ಈ ವಿಚಾರವಾಗಿ ಸದನದಲ್ಲಿ ಪ್ರಶ್ನೆ ಮಾಡಿದೆ. ಆಗ ಶ್ರೀನಿವಾಸ್ ಪೂಜಾರಿ ಅವರು ನಾಳೆಯಿಂದಲೇ ಆರಂಭಿಸುತ್ತೇವೆ ಎಂದರು. ಅಧಿವೇಶನ ಮುಗಿದು ಎಷ್ಟು ದಿನವಾಯಿತು, ಇದುವರೆಗೂ ಕೊಟ್ಟಿದ್ದಾರಾ?

ಬಿಜೆಪಿಯವರು 500 ಲೀಟರ್ ಸೀಮೆಎಣ್ಣೆ ನೀಡುವುದಾಗಿ ಹೇಳಿದ್ದರು. ಕಳೆದ 10 ತಿಂಗಳಿಂದ ಒಂದೇ ಒಂದು ಲೀಟರ್ ಸೀಮೆಎಣ್ಣೆ ನೀಡದವರು 500 ಲೀಟರ್ ನೀಡುತ್ತಾರಾ? ನೀವು ಅದನ್ನು ನಂಬುತ್ತೀರಾ? ಅದಕ್ಕೆ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಮನುವಾದಿಗಳು, ಪುರೋಹಿತಶಾಹಿಗಳು ದೇಶಕ್ಕೆ ಶಾಪ ಎಂದಿದ್ದಾರೆ. ಇದು ನಾನು ಹೇಳಿರುವುದಲ್ಲ, ವಿವೇಕಾನಂದರು ಹೇಳಿದ್ದಾರೆ. ವಿವೇಕಾಂನಂದರ ಜನ್ಮದಿನ ಆಚರಿಸಲು ಯುವಜನೋತ್ಸವ ಕಾರ್ಯಕ್ರಮ ಮಾಡುತ್ತಾರೆ. ಅದನಕ್ಕಾಗಿ ಮೋದಿ ಅವರು ಹುಬ್ಬಳ್ಳಿಗೆ ಆಗಮಿಸಿದ್ದರು. ನಾನು ಮೋದಿ ಅವರನ್ನು ಕೇಳಬಯಸುತ್ತೇನೆ, ನೀವು ಯುವಜನೋತ್ಸವ ಆಚರಿಸಲು ದೆಹಲಿಯಿಂದ ಬಂದಿದ್ದಿರಿ. ನೀವು ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದಿರಿ. ಅದನ್ನು ಕೊಟ್ಟರೆ? 9 ವರ್ಷ ಆಯಿತು, 18 ಕೋಟಿ ಉದ್ಯೋಗ ನೀಡಬೇಕಿತ್ತು, ನೀಡಿದರಾ?

ಈ ದೇಶದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ ಎಂದು ನಾನು ಹೇಳಿದೆ. ಈ ವಿಚಾರ ಹೇಳಿದರೆ ನನ್ನ ಮೇಲೆ ಕೋಪ ಮಾಡಿಕೊಂಡು ಸಿದ್ದರಾಮಯ್ಯ ಹಿಂದೂ ವಿರೋಧಿ ಎನ್ನುತ್ತಾರೆ. ಅವರ ಪ್ರಕಾರ ಹಿಂದುಗಳೆಂದರೆ ಸಾರ್ವಕರ್ ಹಾಗೂ ಗೋಡ್ಸೆ. ನಾವು ಶೇ.95ರಷ್ಟು ಹಿಂದೂಗಳು ಯಾರು? ಗಾಂಧಿ ಕೊಂದ ಗೋಡ್ಸೆ, ಮತಾಂದ. ಗಾಂಧಿ ಅವರು ಅಪ್ಪಟ ಹಿಂದೂ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ ಅವರನ್ನೇ ಕೊಂದು ಹಾಕಿದ್ದೀರಿ. ಹಿಂದೂ ಧರ್ಮ ಸುಧಾರಣೆಗೆ ಪ್ರಯತ್ನಪಟ್ಟವರು ವಿವೇಕಾನಂದರು. ಇವರಿಗೇನಾದರೂ ಮನುಷ್ಯತ್ವ ಇದೆಯಾ? ನೀವು ಅವರ ಹಿಂದೆ ಹೋಗುತ್ತೀರಾ? ಹಿಂದೂತ್ವವನ್ನು ಆರಂಭಿಸಿದವರು ಸಾರ್ವಕರ್. ಹಿಂದೂಮಹಾಸಭಾದಲ್ಲಿ ಹಿಂದುತ್ವ ಹುಟ್ಟುಹಾಕಿದ ಸಾರ್ವಕರ್, ಬ್ರಿಟೀಷರಿಗೆ ಐದು ಬಾರಿ ಕ್ಷಮಾಪಣೆ ಪತ್ರ ಬರೆದುಕೊಟ್ಟು, ಬ್ರಿಟೀಷರಿಂದ ಮಾಸಾಶನ ಪಡೆದಿದ್ದರು. ನೀವು ಇವರ ಹಿಂದೆ ಹೋಗುತ್ತೀರಾ?

ಇದೇ ಜನ ಸಂವಿಧಾನ ರಚನೆಯಾದಾಗ, ಸಂಸತ್ತಿನಲ್ಲಿ ಚರ್ಚೆ ಆಗುವಾಗ ಹೊರಗಡೆ ನಿಂತು ಅಂಬೇಡ್ಕರ್ ಅವರನ್ನು ವಿರೋಧಿಸಿದವರು ಇದೇ ಹಿಂದುತ್ವವಾದಿಗಳು. ಇವರ ಮಾತನ್ನು ನೀವು ಕೇಳುತ್ತೀರಾ? ದಾರಿ ತಪ್ಪಿರುವ ಯುವಕರಲ್ಲಿ ಮನವಿ ಮಾಡುತ್ತೇನೆ, ನೀವು ಇವರ ಮಾತಿಗೆ ಮರುಳಾಗಬೇಡಿ. ಅವರು ಮಂಗಳೂರು ಉಡುಪಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟಿದ್ದಾರೆ. ನೀವು ಇಂತಹವರ ಮಾತು ಕೇಳುತ್ತೀರಾ? ಇವರು ಹಿಂದುತ್ವದ ರಕ್ಷಕರಂತೆ, ನಾನು ಹಿಂದೂಗಳಲ್ಲವೇ? ಇವರು ಆರ್ ಎಸ್ಎಸ್ ತರಬೇತಿ ಪಡೆದು ಯುವಕರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ವಿರೋಧ ಮನುವಾದ, ಹಿಂದುತ್ವಕ್ಕೆ ಹೊರತು, ಹಿಂದೂ ಧರ್ಮದ ವಿರುದ್ಧವಲ್ಲ.

ಮನುವಾದಿಗಳು ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂದು ಹೇಳುತ್ತಾರೆ. ಇದು ಸಾಧ್ಯವೇ? ಈ ದೇಶದಲ್ಲಿ ಅನೇಕ ಜಾತಿ ಧರ್ಮ, ಭಾಷೆಗಳಿವೆ, ಎಲ್ಲರೂ ಮನುಷ್ಯರಾಗಿ ಒಟ್ಟಾಗಿ ಸಾಗಬೇಕು. ಅದನ್ನೇ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಹಕ್ಕು, ಸಮಾನ ಅವಕಾಶ ಎಂದು ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿರುವವರು ಆರ್ ಎಸ್ಎಸ್ ನವರು. ಇವರ ಗುರು ಗೋಲ್ವಾಲ್ಕರ್ ಅವರು ಚಿಂತನ ಗಂಗಾ ಎಂಬ ಪುಸ್ತಕದಲ್ಲಿ ಸಂವಿಧಾನದ ಬಗ್ಗೆ ಬರೆದಿದ್ದಾರೆ. ಆರ್ ಎಸ್ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಸಾರ್ವಕರ್ ಸಂವಿಧಾನದ ಬಗ್ಗೆ ಏನು ಬರೆದಿದ್ದಾರೆ ಎಂದು ಓದಿ. ಯಾರಿಗೆ ಸಂವಿಧಾನದಲ್ಲಿ ಗೌರವವಿಲ್ಲ, ಯಾರು ಸಂವಿಧಾನದ ರೀತಿ ನಡೆದುಕೊಳ್ಳುವುದಿಲ್ಲ ಅವರು ಬಡವರು, ರೈತರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ವಿರೋಧಿಗಳು. ಇವರಿಗೆ ಮನುಷ್ಯತ್ವ ಇರುವುದಿಲ್ಲ.

ನಾರಾಯಣ ಗುರುಗಳು, ವಿವೇಕಾನಂದರು, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಇದನ್ನೇ ಹೇಳಿದ್ದರಾ? ಈ ಮಹನೀಯರು ಹೇಳಿದ್ದರ ಮೇಲೆ ನಂಬಿಕೆ ಇರುವವರು ನಾವು. ಆದರೆ ಬಿಜೆಪಿಯವರು ಈ ಮಹನೀಯರು ಹೇಳಿರುವುದರ ವಿರುದ್ಧವಾಗಿರುವವರು. ನಾವು ಮನುಷ್ಯತ್ವದ ಪರವಾಗಿದ್ದರೆ, ಇವರು ಮನುಷ್ಯತ್ವದ ದ್ವೇಷಿಗಳು. ನಾವು ಬಡವರಿಗಾಗಿ ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಕ್ಷೀರಧಾರೆ, ಅನ್ನ ಭಾಗ್ಯ, ಶಾದಿ ಭಾಗ್ಯ, ಪಶು ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಪರಿಶಿಷ್ಟರಿಗೆ ಜನಸಂಖ್ಯೆ ಅನುಗುಣವಾಗಿ ಕಾನೂನು ನೀಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ? ಕೇವಲ ಲೂಟಿ, ಲೂಟಿ, ಲೂಟಿ.

ನೇಮಕಾತಿಯಲ್ಲಿ ಲೂಟಿ, 40% ಕಮಿಷನ್ ಲೂಟಿ, ಬಡ್ತಿಯಲ್ಲಿ ಲೂಟಿ, ಪೋಸ್ಟಿಂಗ್ ನಲ್ಲಿ ಲೂಟಿ ಮಾಡಿದ್ದಾರೆ. ಹೊಟೇಲ್ ಗಳಲ್ಲಿ ಪದಾರ್ಥಗಳಿಗೆ ದರ ನಿಗದಿ ಮಾಡಿದಂತೆ ಎಲ್ಲೆಡೆ ಲಂಚ ದರ ನಿಗದಿ ಮಾಡಿದ್ದಾರೆ. ವಿಧಾನಸೌಧದ ಗೋಡೆಗಳಿಗೆ ಕಿವಿ ಕೊಟ್ಟರೆ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತವೆ. ಇಂತಹ ಸರ್ಕಾರ ಬೇಕಾ? ನೀವು ರಾಜಕೀಯ ಪ್ರಬುದ್ಧರಾಗಿರುವುದರಿಂದ ಕೈಮುಗಿದು ಪ್ರಾರ್ಥಿಸುತ್ತೇನೆ, ದಯಮಾಡಿ ಮತದಾನ ಮಾಡುವಾಗ ಒಮ್ಮೆ ಯೋಚಿಸಿ. ಬಿಜೆಪಿ, ಮನುವಾದಿಗಳಿಗೆ ಯಾವುದೇ ಸಿದ್ಧಾಂತವಿಲ್ಲ. ಮನುಷ್ಯರನ್ನು ದ್ವೇಷಿಸಿ ಧರ್ಮ, ಜಾತಿ ಗಳ ನಡುವೆ ದ್ವೇಷ ಹಚ್ಚುವುದು. ಇದರಲ್ಲಿ ಇವರು ಬರುವುದಿಲ್ಲ. ಹಿಂದುಳಿದ ವರ್ಗದ ಮಕ್ಕಳನ್ನು ಕಳುಹಿಸುತ್ತಾರೆ. ಅವರು ಕೊಲೆ ಮಾಡಿ ಜೈಲಿಗೆ ಹೋದರೆ, ನಂತರ ಅವರು ಬಂದಾಗ ಇವರೇ ಹಾರ ಹಾಕಿ ಕರೆದುಕೊಂಡು ಬರುತ್ತಾರೆ. ಬಿಜೆಪಿಯವರು ಎಂತಹ ಮಾನಗೆಟ್ಟವರು.

ನಾವೆಲ್ಲರೂ ಕಾರ್ಯಕ್ರಮ ಘೋಷಣೆ ಮಾಡಿದರೆ, ಇವರು ಲವ್ ಜಿಹಾದ್ ಎನ್ನುತ್ತಾರೆ. ನಿಮಗೆ ಅಭಿವೃದ್ಧಿ ಆಗುವುದು, ಮೀನುಗಾರರಿಗೆ ಸೀಮೆಎಣ್ಣೆ ಸಿಗುವುದು ಬೇಕಾ, ನಿಮ್ಮ ಮಕ್ಕಳನ್ನು ಜೈಲಿಗೆ ಕಳುಹಿಸುವುದು ಬೇಕಾ ನಿರ್ಧರಿಸಿ. ನಾರಾಯಣ ಗುರುಗಳ ಜಯಂತಿ ಮಾಡಿದ್ದು ಯಾರು? ಅದ್ಯಯನ ಪೀಠ ಮಾಡಿದ್ದು ಯಾರು? ಕೋಟಿ ಚನ್ನಯ್ಯ ಅವರ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ಅನುದಾನ ನೀಡಿದವರು ಯಾರು? ಕಾಂಗ್ರೆಸ್ ಸರ್ಕಾರವಲ್ಲವೇ? ಆದರೂ ಬಿಜೆಪಿಯವರ ಹಿಂದೆ ಹೋಗುತ್ತೀರಾ? ಅವರು ನಿಮಗಾಗಿ ಏನು ಮಾಡಿದ್ದಾರೆ ಹೇಳಿ ನೋಡೋಣ.

2013ರಲ್ಲಿ ನಾವು ಪಾದಯಾತ್ರೆ ಮಾಡಿದ್ದೆವು. ಕಾಂಗ್ರೆಸ್ ನಡಿಗೆ ಸೌಹಾರ್ದದ ಕಡೆಗೆ ಎಂದು ಮಾಡಿದ್ದೆವು. ಈಗಲೂ ನಾವು ಎಲ್ಲ ಜಾತಿ, ಧರ್ಮದವರು ಅಣ್ಣತಮ್ಮಂದಿರಂತೆ ಇರಬೇಕು ಎಂದು ನಂಬಿದ್ದೇವೆ. ಆಗ ಮಾತ್ರ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಆಗಿ ಯುವಕರಿಗೆ ಉದ್ಯೋಗ ನೀಡಬಹುದಾಗಿದೆ. ನಾವು ಆಗ ಮಂಗಳೂರಿನಲ್ಲಿ 7 ಉಡುಪಿಯಲ್ಲಿ 3 ಸ್ಥಾನಗಳನ್ನು ಗೆದ್ದಿದ್ದೆವು. ಇಲ್ಲಿದ್ದ ಆಸಾಮಿಯೊಬ್ಬ ನಮ್ಮ ಪಕ್ಷದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಪಕ್ಷ ಬಿಟ್ಟಿದ್ದ ನಂತರ ಮತ್ತೆ ಪಕ್ಷಕ್ಕೆ ವಾಪಸ್ ಬಂದ, ಈಗ ಮತ್ತೆ ಬಿಜೆಪಿಗೆ ಹೋಗಿ, ಅಲ್ಲಿ ಆರ್ ಎಸ್ಎಸ್ ನವರಿಗಿಂತ ಹೆಚ್ಚಾಗಿ ಮೋದಿಯನ್ನು ಹೊಗಳುತ್ತಿದ್ದಾನೆ. ಬಿಜೆಪಿಯವರು ಏನಾದರೂ ಅವನಿಗೆ ಟಿಕೆಟ್ ಕೊಟ್ಟರೆ ಅವನನ್ನು ಸೋಲಿಸಿ ಎಂದು ಕೇಳಿಕೊಳ್ಳುತ್ತೇನೆ. ಇಂತಹವರು ಇರಬೇಕಾ? ಬಿಜಪಿಯವರು ಆಪರೇಶನ್ ಕಮಲ ಮಾಡಿ ಶಾಸಕರಿಗೆ ದುಡ್ಡು ಕೊಟ್ಟು ಖರೀದಿ ಮಾಡುವುದರಲ್ಲಿ, ನಿಸ್ಸೀಮರು.

ಬಿಜೆಪಿಯವರ ಲಂಚದ ಕಿರುಕುಳ ತಾಳಲಾರದೇ ನಮ್ಮನ್ನು ಕಾಪಾಡಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದರು. ಈ ಸರ್ಕಾರ 40% ಕಮಿಷನ್ ಕೇಳುತ್ತಿದ್ದು, ಗುಣಮಟ್ಟದ ಕಾಮಗಾರಿ ಅಸಾಧ್ಯ. ದಯಮಾಡಿ ಬೊಮ್ಮಾಯಿ ಅವರಿಗೆ ಹೇಳಿ ಎಂದು ಪತ್ರ ಬರೆದಿದ್ದರು. ಈ ಸರ್ಕಾರ ಸ್ಯಾಂಟ್ರೋ ರವಿ ಅಂತಹವರನ್ನು ಬಿಟ್ಟು ಕೆಂಪಣ್ಣನಂತಹವರನ್ನು ಜೈಲಿಗೆ ಹಾಕಿಸುತ್ತಾರೆ. ಸ್ಯಾಂಟ್ರೋ ರವಿ ಬಂಧನವಾದ ನಂತರ ಆತ ಎಲ್ಲಿ ಇವರ ಬಂಡವಾಳ ಬಾಯಿ ಬಿಡುತ್ತಾನೋ ಎಂದು ಇವರು ಪೊಲೀಸ್ ವಶಕ್ಕೆ ನೀಡುವಂತೆ ಕೇಳಲೇ ಇಲ್ಲ. ಗೃಹಮಂತ್ರಿ ಅರಗ ಜ್ಞಾನೇಂದ್ರನಿಗೆ ಜ್ಞಾನ ಎಲ್ಲಿದೆಯೋ ಗೊತ್ತಿಲ್ಲ. ರಾಜ್ಯ ಕಂಡ ಅತ್ಯಂತ ಅಪ್ರಯೋಜಕ ಸಚಿವ. ಇಂತಹ ಅನೇಕ ಕ್ರಿಮಿನಲ್ ಜತೆ ಸೇರಿಕೊಂಡಿದ್ದಾರೆ.

ಬಿಜೆಪಪಿಯವರು ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾರೆ. ದೇಶದಲ್ಲಿ ಭಯೋತ್ಪಾದನೆ ಶುರುವಾಗಿದ್ದೇ ಮಹಾತ್ಮಾ ಗಾಂಧಿ ಅವರ ಕೊಲೆಯಾದ ನಂತರ.ದೇಶದ ಮೊದಲ ಭಯೋತ್ಪಾದಕ ಯಾರು ಎಂದರೆ ಗೋಡ್ಸೆ. ನಾವು ಎಲ್ಲ ಭಯೋತ್ಪಾದಕರ ವಿರುದ್ಧ ನಿಲ್ಲುತ್ತೇವೆ. ಅವರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸುವವರು ಕಾಂಗ್ರೆಸ್. ಭಯೋತ್ಪಾದನೆಗೆ ಕಾಂಗ್ರೆಸ್ ಪಕ್ಷ ಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡಿದೆ.

ದ್ವೇಷ ರಾಜಕಾರಣ, ಭ್ರಷ್ಟಾಚಾರ, ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರು ಇಂತಹ ಯಾತ್ರೆ ಮಾಡಿದ್ದಾರಾ? ಯಾರಾದರೂ ಸ್ವಾತಂತ್ರ್ಯ ಹೋರಾಟಕ್ಕೆ ಸತ್ತಿರುವ ಬಿಜೆಪಿ ಅಥವಾ ಆರ್ ಎಸ್ಎಸ್ ಒಬ್ಬ ನಾಯಕನ್ನ್ನು ತೋರಿಸಿ ನಾನು ನಿಮಗೆ ಶರಣಾಗುತ್ತೇನೆ. ದೇಶದಲ್ಲಿ ಸ್ವಾತಂತ್ರ್ಯ ತರಲು ಪ್ರಾಣ, ಮನೆ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿರುವವರು ಕಾಂಗ್ರೆಸಿಗರೇ ಹೊರತು ಆರ್ ಎಸ್ಎಸ್ ಅಥವಾ ಜನಸಂಘದವರಲ್ಲ.

ಬಿಜೆಪಿಯವರು ಮಾತೆತ್ತಿದರೆ ಸಿದ್ದರಾಮಯ್ಯ ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು ಎಂದು ಹೇಳುತ್ತಾರೆ. ಅದಕ್ಕೆ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಗೃಹಮಂತ್ರಿಯಾಗಿದ್ದಾಗ 5-9-2020ರಲ್ಲಿ ಪತ್ರ ಬರೆದಿದ್ದೆ. ನನ್ನ ಅವಧಿಯಲ್ಲಿ ಯಾವ ಪಿಎಫ್ಐ ಹಾಗೂ ಎಸ್ ಡಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದೇನೆ ಪಟ್ಟಿ ನೀಡಿ ಎಂದು ಕೇಳಿದೆ. ಅವರು ಕೊಟ್ಟಿರುವ ಪಟ್ಟಿಯಲ್ಲಿ ವಿದ್ಯಾರ್ಥಿಗಳು, ದಲಿತರು, ದಲಿತ ಸಂಘಟನೆ ರೈತರು, ರೈತ ಸಂಘಟನೆಗಳ ಪಟ್ಟಿಯನ್ನು 16-9-2020ರಂದು ಕೊಟ್ಟರು. ನಾನು ಮತ್ತೆ ಅರಗ ಜ್ಞಾನೇಂದ್ರ ಅವರಿಗೆ 13-6-2022ರಲ್ಲಿ ಪತ್ರ ಬರೆದು ಪಟ್ಟಿ ಕೇಳಿದೆ. ಇವತ್ತಿನವರೆಗೂ ಅವರು ಪಟ್ಟಿ ನೀಡಲು ಆಗಿಲ್ಲ. ಕೇವಲ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಎಸ್ ಡಿಪಿಐ ಜತೆ ಸ್ನೇಹ ಸಂಬಂಧ ಹೊಂದಿದ್ದರೆ ಅದು ಬಿಜೆಪಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ನಾವು ಅಧಿಕಾರಕ್ಕೆ ಬಂದರೆ ಪಿಎಫ್ಐ ಹಾಗೂ ಎಸ್ ಡಿಪಿಐ ನಿಷೇಧ ಮಾಡುತ್ತೇವೆ ಎಂದಿದ್ದರು. ಆದರೆ ಕೇವಲ ಪಿಎಫ್ ಐ ರದ್ದು ಮಾಡಿರುವುದು ಯಾಕೆ? ಪಿಎಫ್ಐ ಆರ್ ಎಸ್ಎಸ್, ಎಸ್ ಡಿಪಿಐ ಬಿಜೆಪಿ ಇದ್ದಂತೆ. ಇವರು ಮತ ವಿಭಜನೆ ಆಗಲಿ ಎಂದು ಎಸ್ ಡಿಪಿಐ ಅನ್ನು ಇಟ್ಟುಕೊಂಡಿದ್ದಾರೆ. ನಾವು ಇವರ ಹತ್ತಿರ ಪಾಠ ಕಲಿಯಬೇಕಾ? ಈ ದೇಶದಲ್ಲಿ ನೂರಕ್ಕೆ ನೂರರಷ್ಟು ಜಾತ್ಯಾತೀತ ಪಕ್ಷ ಇದ್ದರೆ, ಅದು ಕಾಂಗ್ರೆಸ್ ಪಕ್ಷ ಮಾತ್ರ. ನಾವು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಅವರು ಹೇಳೋದು ಮಾತ್ರ ಬದನೆಕಾಯಿ. ಆದರೆ ಆಚರಣೆ ಇಲ್ಲ. ಆದರೆ ಕಾಂಗ್ರೆಸ್ ಹೇಳಿದಂತೆ ನಡೆಯುತ್ತದೆ. ಕೊಟ್ಟ ವಚನವನ್ನು ಉಳಿಸಿಕೊಳ್ಳುತ್ತದೆ. ನಾವು ಕೊಟ್ಟ ವಚನ ಎಷ್ಟೇ ಕಷ್ಟವಾದರೂ ಅದರ ಪರಿಪಾಲನೆಗೆ ಪ್ರಯತ್ನಿಸುತ್ತೇವೆ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *