
ಮೈಸೂರು : ದಿನಾಂಕ 26.01.2023 ರಂದು 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರು ನೀಡಿದ ಸಂದೇಶ.
ಜಿಲ್ಲೆಯ ಎಲ್ಲಾ ಸಮಸ್ತ ನಾಗರಿಕರಿಗೆ 74ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಬಂಧುಗಳೇ,
1947ರ ಆಗಸ್ಟ್ 15 ರಂದು ಸ್ವಾತಂತ್ರ‍್ಯ ಪಡೆಯುವುದರೊಂದಿಗೆ 300 ವರ್ಷಗಳ ದಾಸ್ಯದ ಸರಪಳಿ ಕಳಚಿಕೊಂಡಿರುವ ಭಾರತ 1950 ರ ಜನವರಿ 26ರಂದು ಸಂವಿಧಾನವನ್ನು ಜಾರಿಗೆ ತಂದು ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದ್ದು, ಈಗ ಇತಿಹಾಸವಾಗಿದೆ.
ನಮ್ಮ ಗಣರಾಜ್ಯದ ಇಂದಿನ ಅಸ್ತಿತ್ವಕ್ಕೆ ನಮ್ಮ ಸಂವಿಧಾನವೇ ತಳಹದಿ. ವಿಶ್ವದಲ್ಲಿಯೇ ಅತ್ಯಂತ ಸುಧೀರ್ಘವಾದ ಅತ್ಯಂತ ಸುಸಂಬದ್ಧವಾದ ಸಂವಿಧಾನ ನಮ್ಮದು. ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕಟ್ಟಿಕೊಟ್ಟದ್ದು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದ ಹಿರಿಯರ ತಂಡ. ಅವರ ಅವಿರತ ಪ್ರಯತ್ನದ ಫಲವಾಗಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಹೇಳಿದಂತೆ ನ್ಯಾಯವೆಂದರೆ ಸ್ವಾತಂತ್ರ‍್ಯ, ಸಮಾನತೆ ಮತ್ತು ಸೌಹಾರ್ದ. ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ದೃಢವಾಗುವುದು ಇದರಿಂದಲೇ ಎಂಬ ನಂಬಿಕೆ ನಮ್ಮದು.
ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು ಮನ ಧನಗಳಿಂದ ತ್ಯಾಗಗೈದ, ಬಲಿದಾನ ನೀಡಿದ ನಾಯಕರನ್ನು ಅಸಂಖ್ಯಾತ ಯೋಧರನ್ನು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಹೆಮ್ಮೆಯ ಸಾಧಕರಿಗೆ ಅಭಿನಂದನೆಗಳು.
ರಾಜಕೀಯ, ಸಾಹಿತ್ಯ, ಸಮಾಜಸೇವೆ ಸಾರ್ವಜನಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ಹಾಗೂ ತಮ್ಮ ಸರಳತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಇನ್ಫೋಸಿಸ್ ಫೌಂಡೇಷನ್ ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಖಾದರ್ ವಲ್ಲಿ ದೂದೇಕುಲ, ರಾಣಿ ಮಾಚಯ್ಯ, ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಶಾ ರಶೀದ್ ಅಹಮದ್ ಕ್ವಾದ್ರಿ, ಸುಬ್ಬರಾಮನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ರಾಜ್ಯದ ಗರಿಮೆಯನ್ನು ಹೆಚ್ಚಿಸಿದೆ.
ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಭಾರತದ ಸಾರ್ವಭೌಮತೆಗೆ ಧಕ್ಕೆ ತಾರದಂತೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅಭಿವೃದ್ಧಿಯೆಡೆಗೆ ಸಾಗುತ್ತಿರುವ ರಾಜ್ಯ ನಮ್ಮ ಕರ್ನಾಟಕ. ಇಂದು ಕರ್ನಾಟಕದ ಸಾಧನೆ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ.
ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ‘ಸರ್ವರಿಗೂ ಸಮಬಾಳು – ಸರ್ವರಿಗೂ ಸಮಪಾಲು’ ಎಂಬ ತತ್ವದಲ್ಲಿ ನಂಬಿಕೆ ಇರಿಸಿದ್ದು ಹಲವು ಹೊಸ ಯೋಜನೆಗಳ ಮೂಲಕ ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದೆ.
ರೈತಾಪಿ ಕುಟುಂಬದ ವಿದ್ಯಾರ್ಥಿನಿಯರಿಗಾಗಿ ರೈತ ವಿದ್ಯಾನಿಧಿ ಯೋಜನೆ, 58ಕ್ಕೂ ಅಧಿಕ ನಾಗರಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ಜನಸೇವಕ ಎಂಬ ವಿನೂತನ ಕಾರ್ಯಕ್ರಮ, ಸುಮಾರು 100ರಷ್ಟು ನಾಗರಿಕ ಸೇವೆಗಳನ್ನು ರಾಜ್ಯದ 8,791 ಗ್ರಾಮಒನ್ ಕೇಂದ್ರಗಳಲ್ಲಿ ಒದಗಿಸುವ ವಿಶೇಷ ಯೋಜನೆ, 33 ಇಲಾಖೆಗಳ ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳ ನಿವಾರಣೆಗೆ ಜನಸ್ಪಂದನ ವ್ಯವಸ್ಥೆ, ಸ್ವತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಮೃತಗ್ರಾಮ ಪಂಚಾಯಿತಿ ಯೋಜನೆ, ರೈತ ಉತ್ಪಾದಕ ಸಂಸ್ಥೆಗಳು, ಆರೋಗ್ಯ ಮೂಲ ಸೌಕರ್ಯ ಉನ್ನತೀಕರಣಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ.
ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡುವ ಮೂಲಕ ಗ್ರಾಮೀಣ ಜನರಿಗೆ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ 2 ವರ್ಷಗಳಿಂದ ಸರಳವಾಗಿ ದಸರಾ ಆಚರಿಸಲಾಗಿದ್ದು, ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದೇ ಪ್ರಥಮ ಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟಿಸಿದ್ದು, ದಸರೆಗೆ ಮತ್ತಷ್ಟು ಮೆರುಗು ನೀಡಿತು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಾಂಸ್ಕೃತಿಕ ನಗರದ ಕೀರ್ತಿ ಮತ್ತಷ್ಟು ಹೆಚ್ಚಾಯಿತು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ ನಿರ್ಮಾಣ ಚುರುಕುಗೊಂಡಿದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ನಗರಗಳ ಬೈಪಾಸ್ ಕಾಮಗಾರಿ ಮುಕ್ತಾಯಗೊಂಡಿದೆ. ಈ ಎಕ್ಸ್ಪ್ರೆಸ್ ವೇ ಕಾಮಗಾರಿಯಿಂದ ಬೆಂಗಳೂರಿನಿಂದ ಮೈಸೂರನ್ನು ಕೇವಲ 90 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಒತ್ತಾಸೆಯ ‘ಸ್ವಚ್ಛ ಭಾರತ’ ಪರಿಕಲ್ಪನೆಯ ಸಾಕಾರಕ್ಕಾಗಿ ನಾವು ದೃಢ ಹೆಜ್ಜೆ ಇರಿಸಿದ್ದೇವೆ. ನಮ್ಮ ಗ್ರಾಮೀಣ ಪರಿಸರವನ್ನು ಸ್ವಚ್ಛ ಸುಂದರವಾಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲು ಈಗಾಗಲೇ ಚಾಲನೆ ನೀಡಲಾಗಿದೆ.
ಗ್ರಾಮ ಪಂಚಾಯತ್‌ಗಳಲ್ಲಿ ಸ್ವಂತ ಮನೆ ಇಲ್ಲದ ಎಲ್ಲಾ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡುವ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿಯನ್ನು ತಮ್ಮ ಮುಂದಿಡುತ್ತಿದ್ದೇನೆ.
ಕೃಷಿ ಇಲಾಖೆ
2022ನೇ ಸಾಲಿನಲ್ಲಿ ವಾರ್ಷಿಕ ವಾಡಿಕೆ ಮಳೆಯು 837.2 ಮಿ.ಮೀ ಇದ್ದು, ವಾಸ್ತವವಾಗಿ 1317.7ಮಿ.ಮೀ ಮಳೆ ಆಗಿರುತ್ತದೆ. 2022ನೇ ವರ್ಷದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ 480.5 ಮಿ.ಮೀ ಹೆಚ್ಚು ಮಳೆಯಾಗಿರುತ್ತದೆ. 2022-23ರ ಮುಂಗಾರು ಹಂಗಾಮಿನಲ್ಲಿ 16,745 ಕ್ವಿಂಟಾಲ್ ದೃಢೀಕೃತ ಬಿತ್ತನೆ ಬೀಜವನ್ನು ಸರಬರಾಜು ಮಾಡಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಒಟ್ಟಾರೆ 15,055 ಕ್ವಿಂಟಾಲ್ ಬೀಜಗಳನ್ನು ವಿತರಣೆ ಮಾಡಲಾಗಿರುತ್ತದೆ. ಒಟ್ಟು 53,887 ಫಲಾನುಭವಿಗಳಿಗೆ ರೂ. 198 ಲಕ್ಷ ಸಹಾಯಧನ ನೀಡಲಾಗಿದೆ.
ರಾಜ್ಯ ವಲಯ ಮತ್ತು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಯೋಜನೆಗಳಡಿ ಜಿಲ್ಲೆಗೆ ರೂ.530 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ರೂ.516 ಲಕ್ಷ ವೆಚ್ಚ ಭರಿಸಿ ಶೇಕಡ 97 ರಷ್ಟು ಪ್ರಮಾಣದ ಪ್ರಗತಿ ಸಾಧಿಸಲಾಗಿದೆ. ಇದರಿಂದ 417 ಜನ ರೈತರಿಗೆ ರಿಯಾಯಿತಿ ದರಗಳಲ್ಲಿ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ.
ರೈತರ ಮಕ್ಕಳು ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾಭ್ಯಾಸ ಪಡೆಯಲು ಪ್ರೋತ್ಸಾಹಿಸಲು ಮಾನ್ಯ ಮುಖ್ಯಮಂತ್ರಿಗಳು ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಕಾರ್ಯಕ್ರಮವನ್ನು ಘೋಷಣೆ ಮಾಡಿರುತ್ತಾರೆ. ವಿದ್ಯಾರ್ಥಿಗಳಿಗೆ ರೂ.2,500 ರಿಂದ ರೂ.11 ಸಾವಿರಗಳವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ದಿನಾಂಕ 31.12.2022 ರವರೆಗೆ ಮೈಸೂರು ಜಿಲ್ಲೆಯ 53,119 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರೂ. 2,824 ಲಕ್ಷ ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮುಖಾಂತರ ವರ್ಗಾಯಿಸಲಾಗಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆ
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2022-23 ನೇ ಸಾಲಿಗೆ ಸರಕಾರದಿಂದ 33 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನಿಗದಿಯಾಗಿತ್ತು. ಅದರಂತೆ ಜನವರಿ-20 ರ ಅಂತ್ಯಕ್ಕೆ 23.88 ಲಕ್ಷ ಮಾನವ ದಿವಸಗಳ ಸೃಜನೆ ಮಾಡಿ ಸಾಧನೆ ಮಾಡಲಾಗಿದೆ. ಜಲ ಶಕ್ತಿ ಯೋಜನೆಯಡಿ 8,484 ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗಿದೆ. 401 ಕೆರೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 190 ಕೆರೆಗಳನ್ನು ಸಮಗ್ರ ಅಭಿವೃದ್ಧಿ ಪಡಿಸಲಾಗಿದೆ. ಉಳಿದಿರುವ 211 ಕೆರೆ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.
ಸ್ವಚ್ಛ ಭಾರತ್ ಮಿಷನ್
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಇಲ್ಲಿಯವರೆಗೆ 3,95,807 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ವರ್ಷ 4,373 ಶೌಚಾಲಯ ನಿರ್ಮಾಣ ಗುರಿಯನ್ನು ಹೊಂದಲಾಗಿದೆ. 256 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ವ್ಯವಸ್ಥೆ, ವಾಹನ ಮತ್ತು ಕಸದ ಬುಟ್ಟಿ ವಿತರಣೆಯಾಗಿರುತ್ತದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಬೂದು ನೀರು ನಿರ್ವಹಣೆಯಿಂದಾಗಿ ರೂ.546 ಲಕ್ಷಗಳನ್ನು 41 ಅಮೃತ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ. ವೈಯಕ್ತಿಕ ಇಂಗು ಗುಂಡಿ, ಒಳ ಚರಂಡಿ ಸಂಸ್ಕರಣಾ ಕಾಮಗಾರಿಯು ಪ್ರಗತಿಯಲ್ಲಿದೆ. ನಂಜನಗೂಡು ದೇವನೂರು ಮಠದಲ್ಲಿ ಗೋಬರ್ ಧನ್ ಅನುಷ್ಠಾನಗೂಳಿಸಲಾಗುತ್ತಿದೆ.
ಸಮಾಜಕಲ್ಯಾಣ ಇಲಾಖೆ
ಅಂತರ್ಜಾತಿ ವಿವಾಹ ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ರೂ 1.82 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರೂ.1.81 ಕೋಟಿ ಅನುದಾನ ಖರ್ಚಾಗಿರುತ್ತದೆ. ಪರಿಶಿಷ್ಟ ಜಾತಿ ಪ್ರತಿಭಾವಂತ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ 7.52 ಕೋಟಿ ಅನುದಾನ ನಿಗದಿಯಾಗಿದ್ದು 6,000 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ
2022-23 ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಕ್ಕೆ 265 ವಿವೇಕ ಶಾಲಾ ಕೊಠಡಿಗಳು ಮಂಜೂರಾಗಿದ್ದು, ತಲಾ 15 ಲಕ್ಷದಂತೆ ಒಟ್ಟು ರೂ.39.75 ಕೋಟಿಗಳ ಕಾಮಗಾರಿ ನಡೆಯುತ್ತಿದೆ. 232 ಶಾಲೆಗಳಲ್ಲಿ ಪ್ರತಿ ಶಾಲೆಗೆ ರೂ.5.20 ಲಕ್ಷದಂತೆ ಶೌಚಾಲಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿವೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಜಿಲ್ಲೆಯಲ್ಲಿ 92 ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ 2021-22ನೇ ಸಾಲಿಗೆ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಜಿಲ್ಲಾ ವಲಯದಡಿ ರೂ. 1,673 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ 33,437 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದು, ರೂ. 322 ಲಕ್ಷ ಹಣ ಖರ್ಚು ಮಾಡಲಾಗಿದೆ.
2021-22ನೇ ಸಾಲಿನಲ್ಲಿ ಒಟ್ಟು 93 ಸಮುದಾಯ ಭವನಗಳಿಗೆ ಒಟ್ಟು ರೂ. 1,202.75 ಲಕ್ಷ ಸಹಾಯಧನ ಬಿಡುಗಡೆ ಮಾಡಿದ್ದು ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಮೈಸೂರು ಜಿಲ್ಲೆಯಲ್ಲಿ 2,875 ಅಂಗನವಾಡಿ ಕೇಂದ್ರಗಳಿದ್ದು, ಒಟ್ಟು 15,746 ಗರ್ಭಿಣಿಯರು, 14,968 ಬಾಣಂತಿಯರು, 1,45,957 ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ. ಒಟ್ಟು 2,859 ಅಂಗನವಾಡಿ ಕೇಂದ್ರಗಳು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, 2,167 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2022-23ನೇ ಸಾಲಿಗೆ 24 ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲು ವಿವಿಧ ಯೋಜನೆಗಳಲ್ಲಿ ಒಟ್ಟು ರೂ.467 ಲಕ್ಷಗಳು ಬಿಡುಗಡೆಯಾಗಿದ್ದು ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
ಸ್ತ್ರೀ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 6,819 ಸ್ವ ಸಹಾಯ ಸಂಘಗಳಿದ್ದು, ಒಟ್ಟು 06 ಸ್ತ್ರೀಶಕ್ತಿ ಭವನಗಳಿವೆ. ವಿಭಾಗೀಯ ಮಟ್ಟದ ಮಾರುಕಟ್ಟೆ ಸಂಕೀರ್ಣವು ಮೈಸೂರು ನಗರದ ವಿಜಯನಗರ 2ನೇ ಹಂತದಲ್ಲಿ ಒಟ್ಟು ರೂ.150 ಲಕ್ಷಗಳ ವೆಚ್ಚದಲ್ಲಿ 2022ನೇ ಸಾಲಿನಲ್ಲಿ ಪೂರ್ಣವಾಗಿ ನಿರ್ಮಾಣವಾಗಿರುತ್ತದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೊಲೀಸ್ ನೆರವು, ಕಾನೂನು ನೆರವು ಹಾಗೂ ಸಮಾಲೋಚನೆ ವ್ಯವಸ್ಥೆಗಳನ್ನು ಒದಗಿಸಲು ಕೇಂದ್ರ ಸರ್ಕಾರದ ಯೋಜನೆಯನ್ನು ಮೈಸೂರು ಜಿಲ್ಲೆಯಲ್ಲಿ ಕೆ.ಆರ್. ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಅನ್ನು ಸ್ಥಾಪಿಸಿದೆ. ಈ ಕೇಂದ್ರದ ಸ್ವಂತ ಕಟ್ಟಡವನ್ನು ರೂ. 46 ಲಕ್ಷಗಳ ಮೊತ್ತದಲ್ಲಿ ನಿರ್ಮಾಣ ಮಾಡಲಾಗಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶ
ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನ್ಸಿಪಾಲಿಟಿ) ಹಂತ-4 ರ ಯೋಜನೆಯಡಿ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ 13 ನಗರ ಸ್ಥಳೀಯ ಸಂಸ್ಥೆಗಳಿಗೆ ರೂ 16,500 ಲಕ್ಷ ಹಂಚಿಕೆಯಾಗಿದ್ದು ಶೇ 85 ರಷ್ಟು ಅನುದಾನ ರೂ 14,025 ಲಕ್ಷಗಳಿಗೆ ಟೆಂಡರ್ ಪ್ರಕ್ರಿಯೆ ಕೈಗೊಂಡು ಕಾಮಗಾರಿ ಪ್ರಗತಿಯಲ್ಲಿರುತ್ತದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
2021-22ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ 25,240 ಮೆಟ್ರಿಕ್ ಪೂರ್ವ ಮತ್ತು 11,920 ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಎಸ್.ಎಸ್.ಪಿ. ಪೋರ್ಟಲ್ ಮೂಲಕ ಮಂಜೂರು ಮಾಡಲಾಗಿದೆ. 2022-23ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಒಟ್ಟು 1,715 ವಿದ್ಯಾರ್ಥಿಗಳಿಗೆ ರೂ.421.25 ಲಕ್ಷಗಳ ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ.
ಮೂಲನಿವಾಸಿ ಜೇನುಕುರುಬ ಜನಾಂಗದವರಿಗೆ ರೂ.3.75 ಲಕ್ಷಗಳ ಘಟಕ ವೆಚ್ಚದಲ್ಲಿ ಒಟ್ಟು 1,938 ಮನೆಗಳನ್ನು ಮಂಜೂರು ಮಾಡಲಾಗಿದ್ದು ಕಾರ್ಯಕ್ರಮ ಪ್ರಗತಿಯಲ್ಲಿರುತ್ತದೆ. ಪರಿಶಿಷ್ಟ ಪಂಗಡದ 38 ಕಾನೂನು ಪದವೀಧರರಿಗೆ ಪ್ರತಿ ಮಾಹೆ ರೂ.10,000/- ಶಿಷ್ಯವೇತನ ಮಂಜೂರು ಮಾಡಲಾಗುತ್ತಿದೆ.
ರೂ.1,600 ಲಕ್ಷಗಳ ಅನುದಾನದಲ್ಲಿ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರಾದ ಜೇನುಕುರುಬ, ಕಾಡುಕುರುಬ, ಸೋಲಿಗ ಮತ್ತು ಯರವ ಜನಾಂಗದ 12,873 ಕುಟುಂಬಗಳಿಗೆ ಪ್ರತಿ ವರ್ಷ 06 ಕಂತುಗಳಲ್ಲಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ.
ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಅಂತರ್ಜಾತಿ ವಿವಾಹವಾಗುವ ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ ಗರಿಷ್ಟ ರೂ.3 ಲಕ್ಷಗಳಂತೆ ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದ್ದು, ಇದುವರೆಗೆ 147 ದಂಪತಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ನಗರಗಳ ವ್ಯಾಪ್ತಿಯ ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸಮಗ್ರ ಆರೋಗ್ಯ ಸೇವೆ ನೀಡಲು 2022-23 ನೇ ಸಾಲಿನಲ್ಲಿ ಮೈಸೂರು ಜಿಲ್ಲೆಗೆ ಒಟ್ಟು 6 ನಮ್ಮ ಕ್ಲಿನಿಕ್‌ಗಳು ಮಂಜೂರಾಗಿದ್ದು, ಇದರಲ್ಲಿ 5 ಕ್ಲಿನಿಕ್‌ಗಳು ಕಾರ್ಯಾರಂಭಿಸಲಾಗಿದೆ. ಒಂದು ಕ್ಲಿನಿಕ್ ಸ್ಥಾಪನೆ ಪ್ರಗತಿಯಲ್ಲಿದೆ. ಅಮೃತ ಆರೋಗ್ಯ ಯೋಜನೆ ಅಡಿಯಲ್ಲಿ ಜಿಲ್ಲೆಯ ಒಟ್ಟು 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಭೂತ ಸೌಲಭ್ಯಗಳನ್ನು ತಲಾ 20 ಲಕ್ಷ ವೆಚ್ಚದಲ್ಲಿ ಉನ್ನತೀಕರಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಒತ್ತಡ ಇರುವ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲೆ ಮಂಜೂರಾತಿ ದೊರೆಯಲಿದೆ.
ಕಾರ್ಮಿಕ ಇಲಾಖೆ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ 2022-23 ನೇ ಸಾಲಿನಲ್ಲಿ ಒಟ್ಟು 29,286 ಜನಕಾರ್ಮಿಕರನ್ನು ನೊಂದಣಿ ಮಾಡಲಾಗಿದ್ದು ನೊಂದಾಯಿತ 1,520 ಕಟ್ಟಡ ಕಾರ್ಮಿಕರಿಗೆ ರೂ.6 ಕೋಟಿ 35 ಲಕ್ಷಗಳ ಮದುವೆ ಧನಸಹಾಯವನ್ನು, 168 ಜನ ಕಟ್ಟಡ ಕಾರ್ಮಿಕರಿಗೆ ರೂ. ಐದು ಲಕ್ಷದ ಮೂವತ್ತೊಂದು ಸಾವಿರಗಳ ಶೈಕ್ಷಣಿಕ ಧನಸಹಾಯವನ್ನು, 161 ಜನ ಕಟ್ಟಡ ಕಾರ್ಮಿಕರಿಗೆ ರೂ.59 ಲಕ್ಷಗಳ ವೈದ್ಯಕೀಯ, ಪ್ರಮುಖ ವೈದ್ಯಕೀಯ ಧನಸಹಾಯವನ್ನು ನೀಡಲಾಗಿದೆ.
“ಆಶಾದೀಪ ಯೋಜನೆಯಡಿ” ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 70 ಜನ ಅಭ್ಯರ್ಥಿಗಳಿಗೆ ರೂ. 14 ಲಕ್ಷಗಳ ಪ್ರೋತ್ಸಾಹಧನವನ್ನು ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆ
ಮೈಸೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಒಟ್ಟು 75 ಕಾಮಗಾರಿಗಳು ಮಂಜೂರಾಗಿದ್ದು, ಈಗಾಗಲೇ ಹಲವು ಕಾಮಗಾರಿಗಳು ಮುಕ್ತಾಯವಾಗಿದ್ದು, ಕೆಲವು ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.
ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ-ಜಲಪಾತ ಪ್ರದೇಶದಲ್ಲಿ ರೂ.825 ಲಕ್ಷಗಳ ಕಾಮಗಾರಿ ಅನುಮೋದನೆಗೊಂಡು ಮುಕ್ತಾಯಗೊಂಡಿರುತ್ತದೆ. ಕೆ.ಆರ್.ನಗರ ತಾಲ್ಲೂಕಿನ ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನದ ಬಳಿ ರೂ.289 ಲಕ್ಷಕಾಮಗಾರಿ ಪ್ರಗತಿಯಲ್ಲಿರುತ್ತದೆ. ಟಿ. ನರಸೀಪುರ ತಾಲ್ಲೂಕಿನ ಸೋಮನಾಥಪುರದ ಪಂಚಲಿಂಗೇಶ್ವರ ಸಂರಕ್ಷಣಾ ಕಾಮಗಾರಿ ರೂ. 375 ಲಕ್ಷ ಮಂಜೂರಾಗಿ, ಕಾಮಗಾರಿ ಮುಕ್ತಾಯ ಹಂತದಲ್ಲಿರುತ್ತದೆ.
ಹುಣಸೂರು ತಾಲ್ಲೂಕಿನಲ್ಲಿ ಕರಿಕಲ್ಲು ಗ್ರಾಮದ ಕಾಶಿಲಿಂಗೇಶ್ವರ ದೇವಾಲಯದ ಸಂರಕ್ಷಣಾ ಕಾಮಗಾರಿಗೆ ರೂ.240 ಲಕ್ಷ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಮೈಸೂರು ನಗರದಲ್ಲಿ ಕಾವೇರಿ ನದಿಯ ಕುರಿತು ಬಹುಮಾಧ್ಯಮ ಗ್ಯಾಲರಿ ಸ್ಥಾಪನೆಗಾಗಿ ರೂ.350 ಲಕ್ಷಗಳ ಅನುದಾನ ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ. ಮೈಸೂರುಜಿಲ್ಲೆ, ಟಿ. ನರಸೀಪುರ ತಾಲ್ಲೂಕು ಮೂಗೂರು ತ್ರಿಪುರಸುಂದರಿ ದೇವಾಲಯದ ಸಂರಕ್ಷಣಾ ಕಾಮಗಾರಿಗೆ ರೂ. 500 ಲಕ್ಷ ಮಂಜೂರಾಗಿದ್ದು ಕಾಮಗಾರಿ ಮುಕ್ತಾಯವಾಗಿರುತ್ತದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಅಲ್ಪಸಂಖ್ಯಾತರಿಗಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ರೂ.405 ಲಕ್ಷಗಳು, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ರೂ.147 ಲಕ್ಷಗಳು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ರೂ.91 ಲಕ್ಷಗಳನ್ನು ವಿನಿಯೋಗಿಸಲಾಗಿರುತ್ತದೆ. 2 ಖಾಸಗಿ ಅನುದಾನಿತ ಮುಸ್ಲಿಂ ಅನಾಥಾಲಯಗಳಿಗೆ ಹಾಗೂ 4 ಖಾಸಗಿ ಅನುದಾನಿತ ವಿದ್ಯಾರ್ಥಿನಿಲಯಗಳಿಗೆ ಸಹಾಯಾನುದಾನ ನೀಡಲಾಗುತ್ತಿದೆ.
2021-22 ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗಾಗಿ ಮೈಸೂರು ನಗರದ ಚಾಮುಂಡೇಶ್ವರಿ, ಕೃಷ್ಣರಾಜ ಮತ್ತು ಲೋಕಸಭಾಕ್ಷೇತ್ರಗಳ ಅಭಿವೃದ್ಧಿಗಾಗಿ ರೂ.1,100 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪೂರ್ಣಗೊಂಡಿರುತ್ತದೆ.
ಗ್ರಾಮ ಒನ್ ಯೋಜನೆ
ಗ್ರಾಮ ಓನ್ ಯೋಜನೆಯು ಜುಲೈ 2022 ನೇ ಸಾಲಿನಲ್ಲಿ ಪ್ರಾರಂಭವಾಗಿ, ಕಳೆದ ಆರು ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ 226 ಕೇಂದ್ರಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 4.87 ಲಕ್ಷ ಜನರಿಗೆ ಸೇವೆಗಳನ್ನು ಒದಗಿಸಲಾಗಿದೆ.
ಬಂಧುಗಳೇ,
ಸಂವಿಧಾನ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ, ಸಮಾಜದ ಶ್ರೇಯೋಭಿವೃದ್ಧಿಗೆ ನಮ್ಮ ಸಂವಿಧಾನ ಅಂತಿಮ ಆಶಯವೆಂದು ಅರಿತು ಅಭಿವೃದ್ಧಿಯ ಪಥದಲ್ಲಿ ನಾವು ದಾಪುಗಾಲಿಡುತ್ತಿದ್ದೇವೆ. ಅವರ ಆಸೆಯಂತೆ ನಡೆದುಕೊಳ್ಳಲು ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಬನ್ನಿ, ನಾವೆಲ್ಲರೂ ಭಾರತವನ್ನು ಸಶಕ್ತ, ಸದೃಢ ಪ್ರಜಾಪ್ರಭುತ್ವ ರಾಷ್ಟçವನ್ನಾಗಿ ರೂಪಿಸಲು ಶ್ರಮಿಸೋಣ. ಸ್ನೇಹ, ಪ್ರೀತಿ, ಸೋದರ ಭಾವತ್ವ ನಮ್ಮ ಜೀವಾಳವಾಗಲಿ ಎಂದು ಹಾರೈಸಿ ನನ್ನ ಮಾತ ಮುಗಿಸುತ್ತೇನೆ.
ಜೈ ಹಿಂದ್, ಜೈಕರ್ನಾಟಕ
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.