
ನಂದಿನಿ ಮೈಸೂರು
ಎಚ್.ಡಿ.ಕೋಟೆ : ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಸಚಿವ ಆರ್.ಅಶೋಕ್ ರವರಿಗೆ ತಮ್ಮ ಸಮಸ್ಯೆಗಳ ಪಟ್ಟಿಯನ್ನು ನೀಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದ ಸನ್ನಿವೇಶ ಉಂಟಾಯಿತು.
ತಾಲ್ಲೂಕಿನ ಭೀಮನಕೊಲ್ಲಿ ಮಹದೇಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಸರ್ಕಾರದ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ ಮತ್ತು ಸಚಿವರ ಗ್ರಾಮ ವಾಸ್ತವ್ಯದ ಅಂಗವಾಗಿ ಸಚಿವರು ಕ್ಷೇತ್ರದ ಜನರ ಸಮಸ್ಯೆಗನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಈ ವೇಳೆ ಸಾರ್ವಜನಿಕರಿಂದ ಭೂಮಿ, ಖಾತೆ, ಪೊಡ್, ದುರಸ್ತಿ ಸೇರಿದಂತೆ ಪ್ರಕೃತಿ ವಿಕೋಪದಿಂದ ಆಸ್ತಿ ಪಾಸ್ತಿ ನಷ್ಟವಾದ ಸಮಸ್ಯೆಗಳೆ ಹೆಚ್ಚಾಗಿ ಕೇಳಿಬಂದವು. ದರಕಸ್ಸು ಜಮೀನಿಗೆ ಆರ್ ಟಿಸಿ, ಭೂ ಒತ್ತುವರಿ ತೆರವು, ಸಾಗುವಳಿ ಮಂಜೂರು, ನಿವೇಶನ ಮಂಜೂರು, ಮನೆ ಕಳೆದುಕೊಂಡ ಸಮಸ್ಯೆಗಳಿಗೆ ಪರಿಹಾರವನ್ನು ವದಗಿಸುವಂತೆ ಸಾರ್ವಜನಿಕರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಆಲಿಸಿ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಪ್ರಕೃತಿ ವಿಕೋಪದಿಂದ ಮನೆಗಳ ಹಾನಿಯಾಗಿದ್ದು, ಪರಿಹಾರ ಬಂದಿಲ್ಲ ಎಂಬ ಸಾಕಷ್ಟು ಅರ್ಜಿಗಳು ಬಂದಿವೆ. ಸಧ್ಯ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಪರಿಶೀಲಿಸಿ ಮನೆ ಕಳೆದುಕೊಂಡ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವ ವ್ಯವಸ್ತೆ ಮಾಡಲಾಗುವುದು ಎಂದರು.
ಸ್ಥಳದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿ.ಆರ್.ಪೂರ್ಣಿಮ, ಬಂಡೀಪುರ ಸಿಎಫ್ ರಮೇಶ್ ಕುಮಾರ್, ಎನ್.ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲಾ, ಉಪಾಧ್ಯಕ್ಷ ಅಭಿಲಾಷ್, ತಹಸೀಲ್ದಾರ್ ಚಲುವರಾಜು, ಸಣ್ಣರಾಮಪ್ಪ, ಇಒ ಜೊರಾಲ್ಡ್ ರಾಜೇಶ್, ವೃತ್ತ ನಿರೀಕ್ಷಕರಾದ ಆನಂದ್, ಬಸವರಾಜು ಮುಂತಾದವರು ಹಾಜರಿದ್ದರು.