
ಬೆಂಗಳೂರು : ಅಂಗಾಂಗ ದಾನದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಎರಡನೇ ಸ್ಥಾನ: ಸಂಚಾರಿ ವಿಜಯ್, ಪುನೀತ್ ಪ್ರೇರಣೆ.
ಜ. 20 : ರಾಜ್ಯದಲ್ಲಿ ಮೃತರ ಅಂಗಾಂಗ ದಾನ ಗಣನೀಯವಾಗಿ ಏರಿಕೆಯಾಗಿದ್ದು, ಇದೀಗ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 151 ಮಂದಿಯು ಅಂಗಾಂಗ ದಾನ ಮಾಡಿದ್ದು ಕಿಡ್ನಿ, ಲಿವರ್, ಹೃದಯ ಸೇರಿದಂತೆ ಬರೋಬ್ಬರಿ 769 ಅಂಗಾಂಗಗಳನ್ನು 2022ರಲ್ಲಿ ಸಂಗ್ರಹಿಸಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದವರಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ರಸ್ತೆ ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಮೆದುಳು ನಿಷ್ಕ್ರಿಯಗೊಂಡ ರೋಗಿಗಳಿಂದ ಅಂಗಾಂಗ ದಾನ ಪಡೆದು ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ಕಸಿ ನಿರ್ವಹಣಾ ಸಂಸ್ಥೆಯಾದ ಜೀವ ಸಾರ್ಥಕತೆಯು ಈ ಅಂಗಾಂಗ ಸಂಗ್ರಹ, ನೋಂದಣಿ, ವಿತರಣೆ, ಕಸಿ ಶಸ್ತ್ರಚಿಕಿತ್ಸೆ, ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. 2005ರಲ್ಲಿ ಈ ಸಂಸ್ಥೆಯು ಆರಂಭವಾಗಿದ್ದು 2022 ರಲ್ಲಿ ಅತಿ ಹೆಚ್ಚು ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಭಾರಿ ಇಳಿಕೆ ಕಂಡಿದ್ದು ಸದ್ಯ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂಗಾಂಗ ದಾನ ಮಾಡಿದ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿ ತೆಲಂಗಾಣ (194) ಹಾಗೂ 2ನೇ ಸ್ಥಾನದಲ್ಲಿ ಕರ್ನಾಟಕವಿದ್ದು (151)ಗುಜರಾತ್(147) 3ನೇ ಸ್ಥಾನ ಪಡೆದುಕೊಂಡಿದೆ.
ಅಂಗಾಂಗ ದಾನಕ್ಕೆ ಹೆಚ್ಚಾಗಿ ಯುವ ಜನರೇ ನೋಂದಣಿ ಮಾಡಿಕೊಂಡಿದ್ದು, ನಟ ಪುನೀತ್ ಮತ್ತು ಸಂಚಾರಿ ವಿಜಯ್ ಇವರನ್ನೇ ಮಾದರಿಯಾಗಿಟ್ಟುಕೊಂಡು ಅಂಗಾಂಗದ ದಾನಕ್ಕೆ ಕುಟುಂಬಸ್ಥರ ಮನವೊಲಿಸಲಾಗುತ್ತಿದೆ. ಒಂದೇ ವರ್ಷದಲ್ಲಿ ಶೇಕಡ 10ರಷ್ಟು ನೋಂದಣಿ ಸಂಖ್ಯೆ ಹೆಚ್ಚಾಗಿದ್ದು, ಸದ್ಯ ನೋಂದಣಿಯಾಗಿರುವವರ ಸಂಖ್ಯೆ 34 ಸಾವಿರಕ್ಕೆ ಏರಿದೆ. ನೋಂದಣಿ ಮಾಡಿರುವವರೆಲ್ಲರಿಗೂ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಜೀವ ಸಾರ್ಥಕತೆಯ ಅಂಗಾಂಗ ಕಸಿ ಸಂಯೋಜಕರಾದ ನೌಷಧ ಪಾಷಾ ಮಾಹಿತಿ ನೀಡಿದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.