ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭಾಷಣ:

ಬೀದರ್‌ : ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭಾಷಣ.

ಬಸವಕಲ್ಯಾಣ ಮತಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು 9 ಜನ ಅರ್ಜಿ ಹಾಕಿದ್ದಾರೆ. ಈ 9 ಜನಕ್ಕೂ ಟಿಕೇಟ್‌ ನೀಡಲು ಸಾಧ್ಯವಿಲ್ಲ. ಹೈಕಮಾಂಡ್‌ ನವರು ಕಾರ್ಯಕರ್ತರ ಅಭಿಪ್ರಾಯ ಪಡೆದು ಗೆಲ್ಲುವ ಅಭ್ಯರ್ಥಿಗೆ ಟಿಕೇಟ್‌ ನೀಡುತ್ತಾರೆ, ಟಿಕೇಟ್‌ ಸಿಗದ 8 ಜನರು ಬೇಸರ ಮಾಡಿಕೊಳ್ಳದೆ ಪಕ್ಷದ ಗೆಲುವಿಗಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಕಾಂಗ್ರೆಸ್‌ ಪಕ್ಷ ಒಂದು ಪ್ರಣಾಳಿಕೆಯನ್ನು ತಯಾರು ಮಾಡಿ, ಜನರಿಗೆ ಆ ಮೂಲಕ ಭರವಸೆಗಳನ್ನು ನೀಡಿದ್ದೇವೆ. ನಾವು ನೀಡಿದ ಭರವಸೆಗಳ ಈಡೇರಿಕೆಗೆ ನೂರಕ್ಕೆ ನೂರು ಬದ್ಧರಾಗಿರುತ್ತೇವೆ. ಅವನ್ನು ನಾವು ಅಧಿಕಾರಕ್ಕೆ ಬಂದ ನಂತರ ಖಂಡಿತಾ ಜಾರಿ ಮಾಡುತ್ತೇವೆ.

ಬಸವಕಲ್ಯಾಣ ಬಸವಾದಿ ಶರಣರ ಕರ್ಮಭೂಮಿ. ಅವರ ಆದರ್ಶಗಳನ್ನು ನಾವು ನಂಬಿರುವುದರಿಂದ ಇಂದು ಬಸವಕಲ್ಯಾಣದಿಂದಲೇ ನಮ್ಮ ಯಾತ್ರೆಗೆ ಚಾಲನೆ ನೀಡುತ್ತಿದ್ದೇನೆ. ಶರಣರ ಚಳವಳಿಗೆ ಭದ್ರಬುನಾದಿಯಾಗಿ ನಿಂತಿದ್ದು ಅನುಭವ ಮಂಟಪ. ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಕರ್ನಾಟಕದಲ್ಲಿ ಆರಂಭವಾಗಿ, ಇಡೀ ಜಗತ್ತಿಗೆ ಮಾದರಿಯಾಗಿದೆ. ಬಸವಾದಿ ಶರಣರು ಜಾತಿವಾದ, ಕೋಮುವಾದ ಇವುಗಳ ವಿರುದ್ಧ ಸಾಮಾಜಿಕ ಚಳುವಳಿಯನ್ನು ನಡೆಸಿ, ಸಮಾಜ ಸ್ಥಾಪನೆಗಾಗಿ ಶ್ರಮಿಸಿದ್ದಾರೆ. ಇಂದು ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ, ಇದನ್ನು ಹುಟ್ಟುಹಾಕಿದವರು ಮನುವಾದಿಗಳು. ಈಗ ವಿವೇಕಾನಂದರನ್ನು ಪೂಜಿಸುವ ಜನ ಅವರ ಮಾತನ್ನು ಮರೆತಿದ್ದಾರೆ. ಮನುವಾದ ಮತ್ತು ಪುರೋಹಿತಶಾಹಿ ಈ ದೇಶಕ್ಕಂಟಿದ ಶಾಪ ಎಂದು ಅವರು ಹೇಳಿದ್ದರು. ಅವರು ಧರ್ಮದ ಬಗ್ಗೆ ಆಡಿರುವ ಮಾತಗಳನ್ನು ಹೇಳದೆ, ಬರೀ ಪೂಜೆ ಮಾಡುತ್ತಾರೆ.

ಬಾಬಾ ಸಾಹೇಬರು ನೀಡಿರುವ ಸಂವಿಧಾನ ರೂಪಿತವಾಗಿರುವುದೇ ಬಸವಾದಿ ಶರಣರ ಆದರ್ಶ ಮತ್ತು ಆಶಯಗಳ ಮೇಲೆ. ಜಾತಿ ರಹಿತವಾದ, ವರ್ಗ ರಹಿತವಾದ ಸಮಾಜ ನಿರ್ಮಾಣ ಮಾಡಬೇಕು ಎಂದು ಬಸವಣ್ಣನವರು ಹೇಳಿದ್ದರು, ಅದನ್ನೇ ನಮ್ಮ ಸಂವಿಧಾನದ ಪೀಠಿಕೆಯಲ್ಲಿ ನಾವು ಕಾಣಬಹುದು. ಸಂವಿಧಾನದ ಧ್ಯೇಯೋದ್ದೇಶದಲ್ಲಿ ನಂಬಿಕೆ ಇಟ್ಟುಕೊಂಡಿರುವುದು ಕಾಂಗ್ರೆಸ್‌ ಪಕ್ಷ. ಬಿಜೆಪಿಯವರು ಮನುವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಹೆಡಗೇವಾರ್‌, ಗೋಲ್ವಾಲ್ಕರ್‌, ಸಾವರ್ಕರ್‌ ಇವರೆಲ್ಲರು ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ, ವಿದೇಶದ ಕಾನೂನುಗಳು ಅಂಬೇಡ್ಕರರ ಮೇಲೆ ಪ್ರಭಾವ ಬೀರಿವೆ, ಇದು ಭಾರತದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿ ವಿರೋಧ ಮಾಡಿದರು.

ಯಾರು ಸಂವಿಧಾನದ ಪರವಾಗಿದ್ದಾರೆ, ಯಾರು ವಿರುದ್ಧವಾಗಿದ್ದಾರೆ ಎಂಬುದನ್ನು ಜನ ತಿಳಿದುಕೊಳ್ಳಬೇಕು. ನಾವು ಸಂವಿಧಾನವನ್ನು ಗೌರವಿಸುವವರು, ಆರ್‌,ಎಸ್‌,ಎಸ್‌ ನವರಿಗೆ ಸಮಾನತೆ, ಮನುಷ್ಯತ್ವ, ಸಮಸಮಾಜದಲ್ಲಿ ನಂಬಿಕೆಯಿಲ್ಲ. ಬಸವಣ್ಣನವರು ಮನುವಾದಿಗಳ ಚಿಂತನೆಗಳಿಗೆ ವಿರುದ್ಧವಾಗಿ ಸಮಾಜದ ಕನಸು ಕಂಡವರು. ಬಿಜೆಪಿಯವರು ಸರ್ವಧರ್ಮ ಸಮನ್ವಯ, ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆಯಿಟ್ಟುಕೊಂಡವರಲ್ಲ. ನಮ್ಮ ಸಂವಿಧಾನ ಹೇಳುವ ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ಕಾಂಗ್ರೆಸ್‌ ನಂಬಿಕೆ ಇಟ್ಟಿದೆ.

ಅಂಬೇಡ್ಕರರು 1949 ನವೆಂಬರ್‌ 25 ರಂದು ಸಂವಿಧಾನದ ಸಭೆಯಲ್ಲಿ ಮಾಡಿರುವ ಭಾಷಣ ಒಂದು ಐತಿಹಾಸಿಕವಾದುದು. ಅಂದು ಅವರು ತಮ್ಮ ಭಾಷಣದಲ್ಲಿ “ಜನವರಿ 26, 1950ರಂದು ಸಂವಿಧಾನ ಜಾರಿಗೆ ಬರುತ್ತದೆ, ಇದರಲ್ಲಿ ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಎಂಬ ರಾಜಕೀಯ ಪ್ರಜಾಪ್ರಭುತ್ವವನ್ನು ನಾವು ದೇಶದ ಜನರಿಗೆ ನೀಡಿದ್ದೇವೆ ಆದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ವ್ಯವಸ್ಥೆ ಇಲ್ಲ, ಇದರಿಂದಾಗಿ ನಾವು ವೈರುಧ್ಯಗಳಿಂದ ಕೂಡಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇದೆ, ನಾವು ಈ ಅಸಮಾನತೆಯನ್ನು ತೊಲಗಿಸದೆ ಹೋದರೆ ಯಾರು ಇದರಿಂದ ಶೋಷಣೆ ಅನುಭವಿಸುತ್ತಿರುತ್ತಾರೆ ಆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎಂದು ಹೇಳಿದ್ದಾರೆ. ಅಂಬೇಡ್ಕರರ ಈ ಮಾತನ್ನು ಎಲ್ಲರೂ ಕೇಳಬೇಕೋ ಬೇಡ್ವೋ? ಸಮಾಜ ಸ್ಥಾಪನೆ ಆದರೆ ಮಾತ್ರ ಎಲ್ಲರಿಗೂ ಸಮಾನತೆ ಸಿಗಲು ಸಾಧ್ಯ.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇರುವವರೆಗೆ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಸಂಘಪರಿವಾರದ ಜನ ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆ ಕೇಳುವವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎಂದು ಉತ್ತರಿಸಲಿ. ಹಿಂದೂ ಮಹಾಸಭಾ, ಬಿಜೆಪಿ, ಆರ್‌,ಎಸ್‌,ಎಸ್‌, ಜನಸಂಘ ಈ ಯಾವುದೇ ಸಂಘಟನೆಯ ಒಬ್ಬನೇ ಒಬ್ಬ ವ್ಯಕ್ತಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದಾರ? ಒಬ್ಬರಾದರೂ ದೇಶಕ್ಕಾಗಿ ಹುತಾತ್ಮರಾಗಿದ್ದಾರ? ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ತಮ್ಮ ಆಸ್ತಿ, ಪಾಸ್ತಿ ಕಳೆದುಕೊಂಡು, ಪ್ರಾಣ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್‌ ನವರು. ಈ ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಾದ ಅಗತ್ಯ ಇದೆಯಾ?

ಸಾವರ್ಕರ್‌ ಅವರು ಜೈಲಿನಿಂದ ಬಿಡುಗಡೆಯಾಗಲು 5 ಬಾರಿ ಕ್ಷಮಾಪಣಾ ಪತ್ರ ಬರೆದಿದ್ದರು, ಆ ನಂತರ ಜೈಲಿನಿಂದ ಹೊರಬಂದು ಬ್ರಿಟಿಷರಿಂದ ಪಿಂಚಣಿ ತೆಗೆದುಕೊಳ್ಳುತ್ತಿದ್ದರು, ಗಾಂಧೀಜಿಯವರನ್ನು ಕೊಂದ ನಾಥೂರಾಮ್‌ ಗೋಡ್ಸೆ ಅವರನ್ನು ಪೂಜಿಸುವವರಿಂದ ನಾವು ಪಾಠ ಕಲಿಯಬೇಕ? ಗಾಂಧೀಜಿಯವರ ಹತ್ಯೆಗೆ ಪ್ರಚೋದನೆ ನೀಡಿದ್ದು ಇದೇ ಸಾವರ್ಕರ್‌. ಗಾಂಧೀಜಿಯವರು ಹಿಂದೂ ಮುಸ್ಲೀಂಮರನ್ನು ಒಂದು ಮಾಡುತ್ತಾರೆ, ಎಲ್ಲರೂ ಒಟ್ಟಾಗಿ ಬಾಳುವಂತೆ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಹತ್ಯೆ ನಡೆಯಿತು. ಗೋಡ್ಸೆ ಮತ್ತು ಸಾವರ್ಕರರ ವಂಶಸ್ಥರೆ ಈ ಬಿಜೆಪಿಯವರು. ಇಂಥವರಿಗೆ ಮತ ನೀಡುತ್ತೀರ? ಇವರು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯನ್ನು ಕೊಂದಿದ್ದಾರೆ. ಇಂಥವರಿಗೆ ಬೆಂಬಲ ನೀಡಬೇಕ?

ಇಂದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. 2014ರಲ್ಲಿ 50 ಕೆ.ಜಿಯ ಒಂದು ಚೀಲ ಡಿಎಪಿ ಬೆಲೆ 450 ರೂ. ಇದ್ದದ್ದು ಇಂದು 1350 ರಿಂದ 1400 ರೂ. ಆಗಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದರು, ಇಂದು ರೈತರ ಆದಾಯ ದುಪ್ಪಟ್ಟಾಗಿದೆಯಾ? ಯಾಕೆ ಸುಳ್ಳು ಹೇಳಿದ್ರಿ ಮೋದಿಜಿ? ಮನಮೋಹನ್‌ ಸಿಂಗ್‌ ಅವರ ಸರ್ಕಾರ ರೈತರ ಸಾಲ 78,000 ಕೋಟಿ ರೂ. ಅನ್ನು ಮನ್ನಾ ಮಾಡಿತ್ತು. ಮೋದಿ ಸರ್ಕಾರ ಒಂದು ರೂಪಾಯಿಯಾದ್ರೂ ಮನ್ನಾ ಮಾಡಿದೆಯಾ? ಇಲ್ಲಿನ ಬಿಜೆಪಿ ಸರ್ಕಾರ ಮಾಡಿದೆಯಾ? ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷದ 27 ಸಾವಿರ ರೈತರ ರೂ.50,000 ವರೆಗಿನ ಸಹಕಾರಿ ಬ್ಯಾಂಕುಗಳ ರೂ.8,165 ಕೋಟಿ ಸಾಲ ಮನ್ನಾ ಮಾಡಿದ್ದೆ. ಈಗ ರೈತರ ಸಾಲ, ಕೃಷಿಗೆ ಹಾಕುವ ಬಂಡವಾಳ ಜಾಸ್ತಿಯಾಗಿದೆ ಆದರೆ ರೈತರ ಆದಾಯ ಜಾಸ್ತಿಯಾಗಿಲ್ಲ. ಹಾಲು, ಮೊಸರು, ನೋಟ್‌ ಬುಕ್‌, ಮಂಡಕ್ಕಿ, ಪೆನ್ನು ಇವುಗಳ ಮೇಲೆ 18% ತೆರಿಗೆ ಹಾಕಿದ್ದಾರೆ, ಮೋದಿ ಅವರಿಗೆ ಮನುಷ್ಯತ್ವ ಇದೆಯಾ?

ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದೇ ಒಂದು ಹುದ್ದೆ ಭರ್ತಿ ಮಾಡಿದ್ದು ನಾನು ಕಂಡಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತೀ ವರ್ಷ 5000 ಕೋಟಿ ರೂ. ಖರ್ಚು ಮಾಡುತ್ತೇವೆ ಮತ್ತು ಈ ಭಾಗದ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಪ್ರತೀ ಪಂಚಾಯತಿಗೆ ಒಂದು ಕೋಟಿ ಅನುದಾನ ನೀಡುತ್ತೇವೆ.

ನಾವು ಈಗಾಗಲೇ 200 ಯುನಿಟ್‌ ವಿದ್ಯುತ್‌ ಅನ್ನು ಎಲ್ಲ ಮನೆಗಳಿಗೆ ಉಚಿತವಾಗಿ ನೀಡುವ ಗೃಹಜ್ಯೋತಿ ಹಾಗೂ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ನಾಡಿನ ಬಡ ಜನರು ಎರಡು ಹೊತ್ತು ಊಟ ಮಾಡಲಿ ಎಂದು 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ, ನಾವು ಮತ್ತೆ ಅಧಿಕಾರಕ್ಕೆ ಬಂದ ಮೊದಲ ದಿನದಂದಲೇ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ, ನೀರಾವರಿ ಇಲಾಖೆಗೆ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣ ನೀಡಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ನಾನು ಮುಖ್ಯಮಂತ್ರಿಯಾಗುವಾಗ ನೀಡುವ ಅನುದಾನ 400 ಕೋಟಿ ರೂ. ಇತ್ತು, ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಮ್ಮ ಕಡೆಯ ಬಜೆಟ್‌ ನಲ್ಲಿ 3150 ಕೋಟಿಗೆ ಏರಿಸಿದ್ದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು 10,000 ಕೋಟಿಗೆ ಹೆಚ್ಚಳ ಮಾಡುತ್ತೇವೆ.

ಗೊಂಡ, ರಾಜಗೊಂಡ, ಕಾಡು ಕುರುಬ ಮುಂತಾದ ಸಮುದಾಯಗಳನ್ನು ಎಸ್‌,ಟಿ ಸೇರಿಸುವಂತೆ ನಾವು ಶಿಫಾರಸು ಮಾಡಿದ್ದೆವು, ಕೋಲಿ, ಕಬ್ಬಲಿಗ ಸಮಾಜವನ್ನು ಕೂಡ ಸೇರಿಸುವಂತೆ ಶಿಫಾರಸು ಮಾಡಿದ್ದೆವು. ಈಗ ಈ ಜನರಿಗೆ ಸಿಆರ್‌ಈ ಸೆಲ್‌ ನವರು ಕಿರುಕುಳ ನೀಡಲು ಆರಂಭ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ಹೊಸ ಆದೇಶ ಮಾಡಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ.

ನಾರಾಯಣ್‌ ರಾವ್‌ ಅವರು ಇಂದು ನಮ್ಮ ನಡುವೆ ಇಲ್ಲ. ಅವರು ಹೋರಾಟದ ಮೂಲಕ ಶಾಸಕರಾಗಿದ್ದರು. ಬಡವರು, ದಲಿತರು, ಅವಕಾಶ ವಂಚಿತ ಜನರು, ರೈತರ ಪರವಾಗಿ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದವರು. ನನಗೆ ಬಹಳಾ ಆಪ್ತರಾಗಿದ್ದವರು. ಅವರ ಅಗಲಿಕೆ ನನ್ನ ಕುಟುಂಬ ಸದಸ್ಯನನ್ನು ಕಳೆದುಕೊಂಡಷ್ಟೇ ನೋವಾಗಿದೆ. ಬಸವಕಲ್ಯಾಣದ ಅಭಿವೃದ್ಧಿಗೆ ಅವರು ನಮ್ಮ ಸರ್ಕಾರ ಇದ್ದಾಗ ಸಾಕಷ್ಟು ಅನುದಾನವನ್ನು ಕೇಳಿ ಪಡೆದುಕೊಂಡು, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಮತ್ತೆ ನಾವು ಅಧಿಕಾರಕ್ಕೆ ಬಂದ ನಂತರ ಈ ಕ್ಷೇತ್ರದ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಇಲ್ಲಿನ ಜನ ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುತ್ತೇನೆ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *