ಜನ ಅಗತ್ಯ ಜಮೀನು ಕೊಟ್ಟರೆ ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆಗೆ ಸಿದ್ಧ – ಡಿಸಿಎಂ ಡಿ.ಕೆ. ಶಿವಕುಮಾರ್

ಜನ ಅಗತ್ಯ ಜಮೀನು ಕೊಟ್ಟರೆ ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆಗೆ ಸಿದ್ಧ- ಡಿಸಿಎಂ ಡಿ.ಕೆ. ಶಿವಕುಮಾರ್

ಪಾವಗಡ: “ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಿ ಅದನ್ನು ವಿಸ್ತರಣೆ ಮಾಡಲು ಸರ್ಕಾರ ಸಿದ್ಧವಾಗಿದ್ದು, ಈ ಭಾಗದ ಜನರು ತಮ್ಮ ಭೂಮಿಯನ್ನು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಟ್ಟರೆ ಈ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಇಲ್ಲಿನ ಸೋಲಾರ್ ಡೆವಲಪ್ಮೆಂಟ್ ಕಾರ್ಪೊರೇಷನ್ ಗೆ ಭೇಟಿ ನೀಡಿ ಇಂಧನ ಸಚಿವ ಕೆ.ಜೆ. ಜಾರ್ಜ್, ಸ್ಥಳೀಯ ಶಾಸಕ ವೆಂಕಟೇಶ್ ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಡಿಸಿಎಂ, ‘ರಾಜ್ಯದಲ್ಲಿ ಜಮೀನು ನೀಡಿದರೆ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಇಂಗಿತ ವ್ಯಕ್ತಪಡಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲೂ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಬೇಡಿಕೆ ಇದ್ದು ಆದಷ್ಟು ಬೇಗ ಈ ಭಾಗದ ಜನರು ಚರ್ಚೆ ಮಾಡಿ ತೀರ್ಮಾನ ಮಾಡಬೇಕು’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

‘ಕಳೆದ ಬಾರಿ ಸೋಲಾರ್ ಪಾರ್ಕ್ ಮಾಡುವಾಗ ಜಮೀನು ನೀಡದವರು ನಂತರ ನಮ್ಮ ಜಮೀನು ಬಳಸಿಕೊಳ್ಳಿ ಎಂದು ನನ್ನ ಬಳಿ ಬಂದಿದ್ದರು. ಮನೆ ಬಾಗಿಲಿಗೆ ಬಂದ ಲಕ್ಷ್ಮಿ ಕಳುಹಿಸಿ ಈಗ ಬಂದಿದ್ದೀರಾ ಎಂದು ಬೈದು ಕಳಿಸಿದ್ದೆ.

ಈ ತಾಲೂಕಿನಲ್ಲಿ ರೈತರು ಮುಂದೆ ಬಂದರೆ ಇಲ್ಲಿ ಈ ಪಾರ್ಕ್ ವಿಸ್ತರಣೆ ಮಾಡಬಹುದು. ನಿಮ್ಮ ಜಮೀನು ನಿಮ್ಮ ಹೆಸರಿನಲ್ಲೇ ಇರುತ್ತದೆ. ಈ ಯೋಜನೆಯಲ್ಲಿ ನೀವು ಪಾಲುದಾರರಾಗುತ್ತೀರಿ. ಈಗ ಪ್ರತಿ ಜಮೀನಿಗೆ ನೀಡುತ್ತಿರುವಷ್ಟೇ ಬಾಡಿಗೆ ನೀಡಲಾಗುವುದು. ನೀವು ನಿಮ್ಮ ಬಾಡಿಗೆ ಆಧಾರದ ಮೇಲೆ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ವಿಚಾರವಾಗಿ ನಾನು ಮಾತನಾಡುತ್ತೇನೆ.

ಇಂದು ಪಾವಗಡದ ಸೋಲಾರ್ ಪಾರ್ಕ್ ನಲ್ಲಿ 2400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದು ಏಷ್ಯಾದಲ್ಲಿ ಅತಿ ದೊಡ್ಡ ಸೋಲಾರ್ ಪಾರ್ಕ್ ಆಗಿದೆ. ನಿಮ್ಮ ದಾಖಲೆ, ಆಸ್ತಿಗಳು ನಿಮ್ಮ ಬಳಿ ಇದೆ. ಬಾಡಿಗೆ ಸಮಯಕ್ಕೆ ಸರಿಯಾಗಿ ನಿಮಗೆ ತಲುಪುತ್ತಿದೆ.

ಈ ಭಾಗದಲ್ಲಿ ಒಣಭೂಮಿ ಜಾಗಗಳನ್ನು ಗುರುತಿಸಿ ನೀವು ನಮಗೆ ಮಾಹಿತಿ ನೀಡಿ. ನಾವು ಕೇಂದ್ರಕ್ಕೆ ಪ್ರಸ್ತಾವನೆ ನೀಡುತ್ತೇವೆ. ಅವರು ಭೂಮಿ ಪರಿಶೀಲಿಸಿ ಸಮ್ಮತಿ ನೀಡಿದರೆ ಪಾರ್ಕ್ ವಿಸ್ತರಣೆ ಕೆಲಸ ಮಾಡುತ್ತೇವೆ.

ಇಲ್ಲಿನ ಜನ ಮಾತನಾಡಿಕೊಂಡು 5-10 ಸಾವಿರ ಎಕರೆ ಭೂಪ್ರದೇಶ ನೀಡಿದರೆ, ಮತ್ತೆ ಸೋಲಾರ್ ಪಾರ್ಕ್ ಮಾಡೋಣ. ಕಲಬುರ್ಗಿ, ರಾಯಚೂರು ಹಾಗೂ ಬೇರೆ ಜಿಲ್ಲೆಗಳಿಂದಲೂ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದೆ.

ನಾನು ಕೂಡ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಈ ಭಾಗದಲ್ಲಿ ನಾವೇ ಮುಂದೆ ನಿಂತು ಪಾಣಿ, ಖಾತೆ ಎಲ್ಲಾ ಮಾಡಿಸಿಕೊಟ್ಟಿದ್ದು, ನೀವು ಯಾರಿಗೂ ಲಂಚ ನೀಡುವ ಅಗತ್ಯವಿಲ್ಲ.

ಈ ಸೋಲಾರ್ ಪಾರ್ಕ್ ನೋಡಲು ತೆರಳುತ್ತಿರುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು. ಆಗ ನಾನು ಕೂಡ ಬರುತ್ತೇನೆ ಎಂದು ಆಗಮಿಸಿದ್ದೇನೆ.

ಇಲ್ಲಿ ಸೋಲಾರ್ ಪಾರ್ಕ್ ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ.

ನೀವು ನಮ್ಮ ಶಾಸಕರನ್ನು ಗೆಲ್ಲಿಸಿ ಶಕ್ತಿ ತುಂಬಿದ್ದು, ನಾವೆಲ್ಲರೂ ಸೇರಿ ಈ ತಾಲೂಕು ಅಭಿವೃದ್ಧಿ ಮಾಡುತ್ತೇವೆ. ನಿಮಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಶೇ.90ರಷ್ಟು ಕೆಲಸ ಮುಗಿದಿದೆ.’

Leave a Reply

Your email address will not be published. Required fields are marked *