ಉದ್ಯಮಿಗಳಾದ ಸಿಸಿಲ್ ಸೋಮನ್ ಅವರ ಮನೆಯಲ್ಲಿ ಓಣಂ ಹಬ್ಬಕ್ಕೆ ಚಾಲನೆ ನೀಡಿದ ಶಾಸಕರಾದ ಗೋಪಾಲಕೃಷ್ಣ ಬೇಳೂರು
ಅಂತೆಯೇ ಇಂದು ಸಾಗರದ ಕ್ಷೇತ್ರದ l ಜನಪ್ರಿಯ ಶಾಸಕರು ಅಭಿವೃದ್ದಿಯ ಹರಿಕಾರರು ಮತ್ತು ಯುವಕರ ಭರವಸೆಯ ನಾಯಕರಾದ ಗೋಪಾಲಕೃಷ್ಣ ಬೇಳೂರು ರವರು ಸಾಗರದ ಹೆಸರಾಂತ ದಿವಂಗತ ನಿವೃತ್ತ ಮಾಜಿ ಸೈನಿಕರಾದ ಪಿ ಆರ್ ಸೋಮನ್ ರವರ ಮನೆಗೆ ಅವರ ಪುತ್ರರಾದ ಸಿಸಿಲ್ ಸೋಮನ್ ಹಾಗೂ ಸಿಬಿನ್ ಸೋಮನ್ ರವರ ಓಣಂ ಹಬ್ಬದ ಪ್ರಯುಕ್ತ ಆಮಂತ್ರಣದ ಮೇರೆಗೆ ಭೇಟಿ ನೀಡಿ ಅತಿಥಿ ಸತ್ಕಾರ ಸ್ವೀಕರಿಸಿ ನಾಡಿನ ಜನತೆಗೆ ಓಣಂ ಹಬ್ಬದ ಶುಭಾಶಯ ಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಮಾಜಿ ಸದಸ್ಯೆ ಪ್ರಫುಲ್ಲ ಮಧುಕರ್ರಾ,ಯಲ್ ಬಿಲ್ಡರ್ಸ್ ನ ಮಾಲಿಕರುಗಳಾದ ಮಹೇಶ್ ಸಾಗರ್ , ಜಲೀಲ್ ಸಾಗರ್ , ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು. ಅಶೋಕ್ ಬೇಳೂರು , ರಫೀಕ್ ಕೊಪ್ಪ. ಜಮೀಲ್ ಸಾಗರ್. ರಂಜನ್ ಶೆಟ್ಟಿ, ಪ್ರವೀಣ್ ಶಿವಲಿಂಗಯ್ಯ, ಹಾಗೂ ಇನ್ನಿತರರು ಇದ್ದರು.
ಕೇರಳದ ಮಂಗಳಕರ ಹಬ್ಬ ಓಣಂ. ಇದನ್ನು ತಿರು-ಓಣಂ ಅಥವಾ ತಿರುವೋಣಂ ಎಂದೂ ಕರೆಯಲಾಗುತ್ತದೆ. ಕೇರಳದ ಜನರು ಈ ಹಬ್ಬವನ್ನು ಸಂಪೂರ್ಣ ಉಲ್ಲಾಸ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಓಣಂ ಎಂಬುದು ಸುಗ್ಗಿಯ ಹಬ್ಬವಾಗಿದ್ದು, ಇದು ಪೌರಾಣಿಕ ರಾಜ ಬಲಿ ಚಕ್ರವರ್ತಿ ರಾಜ್ಯಕ್ಕೆ ಮರಳುವುದರ ಪ್ರತೀಕವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಮಲಯಾಳಿ ಕ್ಯಾಲೆಂಡರ್ ಪ್ರಕಾರ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಆಚರಿಸಲಾಗುತ್ತದೆ. ಇದು ಕೊಲ್ಲ ವರ್ಷಂ ಎಂಬ ಮಲಯಾಳಂ ವರ್ಷದ ಆರಂಭವನ್ನೂ ಸೂಚಿಸುತ್ತದೆ. ಇದು 10 ದಿನಗಳ ಸುದೀರ್ಘ ಹಬ್ಬವಾಗಿದ್ದು, ಪ್ರತಿಯೊಂದು ದಿನಕ್ಕೂ ಹೆಚ್ಚಿನ ಮಹತ್ವವಿದೆ. ಮೊದಲ ದಿನವನ್ನು ಆಠಂ ಎಂದು ಕರೆಯಲಾಗುತ್ತದೆ, ನಂತರ ಚಿತಿರಾ, ಚೋಡಿ, ವಿಶಾಕಂ, ಅನಿಜಂ, ತ್ರಿಕೆಟ್ಟ, ಮೂಲಂ, ಪೂರದಂ, ಉತ್ರದೋಂ ಮತ್ತು ತಿರುವೋಣಂ ಎಂದು ಕರೆಯಲಾಗುತ್ತದೆ. ತಿರುವೋಣಂ ಕೊನೆಯ ದಿನವಾಗಿದ್ದು ಅತ್ಯಂತ ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗಿದೆ.
ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರತಿವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ವರ್ಷದ ಮೊದಲ ಪೈರು ಅಥವಾ ಬೆಳೆಯ ಖುಷಿಯನ್ನು ಓಣಂ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಹೀಗಾಗಿ, ರೈತ ಸಮುದಾಯ ಸೇರಿದಂತೆ ಕೇರಳದ ಎಲ್ಲರಿಗೂ ಇದು ಬಹಳ ದೊಡ್ಡ ಹಬ್ಬ. ಈ ಹಬ್ಬಕ್ಕೆ ತನ್ನದೇ ಆದ ಇತಿಹಾಸವಿದೆ. ವಿಶ್ವದೆಲ್ಲೆಡೆ ಇರುವ ಮಲಯಾಳಂ ಸಮುದಾಯದವರು ಓಣಂ ಹಬ್ಬದಂದು ರಾಜ ಮಹಾಬಲಿ (ಬಲಿ ಚಕ್ರವರ್ತಿ) ಓಣಂ ಹಬ್ಬದಂದು ಪಾತಾಳ ಲೋಕದಿಂದ ಭೂಮಿಗೆ ವಾಪಾಸ್ ಬರುತ್ತಾನೆ ಎಂದು ನಂಬುತ್ತಾರೆ.
ಪುರಾಣಗಳ ಪ್ರಕಾರ, ಕರುಣಾಮಯಿ ರಾಜ ಬಲಿ ಚಕ್ರವರ್ತಿ ಆಡಳಿತ ಅವಧಿಯಲ್ಲಿ ಜನ ಶಾಂತಿಯಿಂದ ಜೀವನ ನಡೆಸುತ್ತಿದ್ದರು. ಅವನ ಆಡಳಿತ ಅವಧಿಯಲ್ಲಿ ಜನರಿಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ನೋಡಿಕೊಂಡಿದ್ದನು. ಹೀಗಾಗಿ ಜನ ಬಲಿ ಚಕ್ರವರ್ತಿಯನ್ನೇ ಪೂಜಿಸಲು ಪ್ರಾರಂಭಿಸಿದರು. ಇದರಿಂದ ದೇವತೆಗಳು ಅಸೂಯೆ ಪಟ್ಟರು. ಬಲಿಯ ಕೀರ್ತಿಯನ್ನು ಅವರು ಸಹಿಸಲಾಗಲಿಲ್ಲ. ಹೀಗಾಗಿ ವಿಷ್ಣುವಿನ ಸಹಾಯ ಪಡೆದು ಬಲಿಯ ಕೀರ್ತಿಯನ್ನು ಕುಗ್ಗಿಸುವಂತೆ ಮಾಡಲು ಬೇಡಿಕೊಂಡರು. ರಾಜ ಬಲಿ ಚಕ್ರವರ್ತಿಯನ್ನು ಬಲ್ಲವನಾಗಿದ್ದ ವಿಷ್ಣು ವಾಮನ ವೇಷ ಬದಲಿಸಿ ಬರುತ್ತಾನೆ.
ತನ್ನ ಮೂರು ಪಾದಗಳು ಆಕ್ರಮಿಸುವ ಸ್ಥಳವನ್ನು ದಾನ ನೀಡುವಂತೆ ವಾಮನ ಬಲಿಯನ್ನು ಕೇಳುತ್ತಾರೆ. ಅಂತೆಯೇ ರಾಜನು ಇದಕ್ಕೆ ಸಮ್ಮತಿಯನ್ನು ಸೂಚಿಸುತ್ತಿದ್ದಂತೆಯೇ ವಾಮನನು ತನ್ನ ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಡುತ್ತಾರೆ. ಎರಡನೇ ಹೆಜ್ಜೆಯಲ್ಲಿ ಆಕಾಶವನ್ನು ಆವರಿಸಿಕೊಳ್ಳುತ್ತಾರೆ ಮತ್ತು ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ವಿಷ್ಣುವು ಇರಿಸುತ್ತಾರೆ. ಅವನನ್ನು ಪಾತಾಳಕ್ಕೆ ತುಳಿಯುತ್ತಾನೆ. ಆಗ ಬಲಿ ವಿಷ್ಣುವಿನನ್ನು ನೋಡಲು ಬಯಸುತ್ತಾನೆ. ವಿಷ್ಣುವಿನ ಭಕ್ತನಾಗಿದ್ದ ಬಲಿಯ ಉದಾಯ ಮನಸ್ಸನ್ನು ಅರ್ಥ ಮಾಡಿಕೊಂಡು ವಿಷ್ಣು ಬಲಿಗೆ ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೊಮ್ಮೆ ಭೂಮಿಗೆ ಬರಲು ಅವಕಾಶವನ್ನು ನೀಡುತ್ತಾನೆ. ರಾಜ ಬಲಿ ಚಕ್ರವರ್ತಿ ಭೂಮಿಗೆ ಬರುವ ಪ್ರಯುಕ್ತ ಓಣಂ ಅನ್ನು ಆಚರಣೆ ಮಾಡಲಾಗುತ್ತದೆ.
ಹಾಗೇ, ಓಣಂ ಹಬ್ಬದ ಸಂದರ್ಭದಲ್ಲಿ ಜಾನಪದ ಹುಲಿ ನೃತ್ಯ, ಹಗ್ಗಜಗ್ಗಾಟ (ವಾಡಂ ವಾಲಿ), ದೋಣಿಯಾಟ (ವಲ್ಲಂ ಕಲಿ) ಪ್ರಮುಖ ಆಕರ್ಷಣೆಯಾಗಿರುತ್ತದೆ. ಓಣಂ ಹಬ್ಬದ ಪ್ರಯುಕ್ತ ಮಹಿಳೆಯರು ಕೇರಳದ ಸಾಂಪ್ರದಾಯಿಕ ಬಿಳಿ ಮತ್ತು ಚಿನ್ನದ ಬಣ್ಣದ ಅಂಚಿರುವ ಸೀರೆಯನ್ನುಟ್ಟು ಸಂಭ್ರಮಿಸುತ್ತಾರೆ. ಹಾಗೇ, ತುಂಬಿ ತುಲ್ಲಾಲ್ ಎಂಬ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಕೂಡ ಮಹಿಳೆಯರು ಪ್ರದರ್ಶಿಸುತ್ತಾರೆ. ಓಣಂ ಹಬ್ಬದಲ್ಲಿ ಊಟ ಕೂಡ ಬಹಳ ವಿಶೇಷವಾಗಿರುತ್ತದೆ. ಓಣಸಡ್ಯ ಎಂಬುದೂ ತಿರು-ಓಣಂ ದಿನ ಮಾಡುವ ವಿಶೇಷ ಊಟವಾಗಿದೆ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರವನ್ನು ತಯಾರಿಸಲಾಗುತ್ತದೆ. ಈ ಊಟವು ರಾಜ ಮನೆತನದ ವೈಭೋಗದ ಊಟವಾಗಿದ್ದು, ಮೂರು ಬಗೆಯ ಪಾಯಸ ಸೇರಿದಂತೆ ಇನ್ನೂ ನಾನಾ ರೀತಿಯ ಸಿಹಿ ತಿಂಡಿ, ಕೇರಳದ ಸಾಂಪ್ರದಾಯಿಕ ಶೈಲಿಯ ಅಡುಗೆ ಮಾಡಲಾಗುತ್ತದೆ.