ಮೈಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗುರುವಾರ ಉದ್ಘಾಟಿಸಲಾಯಿತು
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು (ಎನ್.ಎಂ.ಕೆ.ಎ ಬಾಲಬೋಧಿನಿ) ಗುರುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕೂ ಮುನ್ನ ಸುಮಾರು 80 ವರ್ಷಗಳ ಹಿಂದೆ ನವಾಬ್ ಮೀರ್ ಕಮಲುದ್ದೀನ್ ಅಲಿಖಾನ್ ಅವರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಶಾಲೆಗಾಗಿ ಉಚಿತವಾಗಿ ಜಾಗ ನೀಡಿರುವ ಅವರ ಉದಾರವಾದ ಮನಸ್ಸನ್ನು ನಾವು ಸ್ಮರಿಸಬೇಕು. ಅದರಂತೆ ಮೇಯರ್ ಶಿವಕುಮಾರ್ ತಾವು ಓದಿದ ಶಾಲೆ ಎಂಬ ಅಭಿಮಾನಕ್ಕೆ 75 ಲಕ್ಷ ವೆಚ್ಚದಲ್ಲಿ ಅತ್ಯುತ್ತವಾಗಿ ನವೀಕರಣಗೊಳಿಸಿರುವುದು ಶ್ಲಾಘನೀಯ ಎಂದರು.
ಮನುಷ್ಯನ ವಿಕಾಸಕ್ಕೆ ಶಿಕ್ಷಣ ಅಗತ್ಯವಾಗಿದೆ. ಅದನ್ನು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಪಡೆಯಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಪ್ರತಿಯೊಂದು ವಿಷಯವನ್ನು ವೈಚಾರಿಕವಾಗಿ ಕಲಿತರೆ ಎಲ್ಲರೂ ಸಮಾಜಕ್ಕೆ ದಾರಿದೀಪವಾಗುತ್ತಾರೆ. ಅದರಂತೆ ಮಕ್ಕಳ ಭವಿಷ್ಯ ಕಟ್ಟಲು ನಿರ್ಮಿಸಿರುವ ಈ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ದಾಖಲಾಗಿ ಮುಂದಿನ ದಿನಗಳಲ್ಲಿ ಮಾದರಿ ಶಾಲೆಯಾಗಿ ರೂಪುಗೊಳ್ಳುವಂತೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲರೂ ಜಾತಿ, ಧರ್ಮದಿಂದ ಹೊರಬಂದು ನಾವೆಲ್ಲ ಭಾರತೀಯರು ಎಂಬ ಮನೋಭಾವ ಬರಬೇಕು. ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು. ಪ್ರಾಥಮಿಕ ಶಾಲಾ ಮಕ್ಕಳಿಗೆ ಗ್ರಹಿಕಾಶಕ್ತಿ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಮಕ್ಕಳಿಕೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಅದು ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.
ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಬಳಕೆ ಮಾಡಲು ಮಾತ್ರ ಕಲಿಯಬೇಕು. ಆದರೆ ನಮ್ಮ ಮಾತೃಭಾಷೆಯಾದ ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಕಲಿಸಬೇಕು. ಸರ್ಕಾರ ಜಾರಿ ಮಾಡುವ ನೂತನ ಪದ್ಧತಿಗಳನ್ನು ಅಳವಡಿಸಿಕೊಂಡು ವಿಜ್ಞಾನವನ್ನು ಸಮರ್ಪವಾಗಿ ಮಾನವನ ಅಭಿವೃದ್ದಿಗೆ ಬಳಿಸಿಕೊಳ್ಳಲು ಮೀಸಲಿಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಅವರು, ಅಧೀಕ್ಷಕ ಕಾರ್ಯಪಾಲಕ ಎಂಜಿನಿಯರ್ ಸಿಂಧೂ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜು, ಮುಖ್ಯಶಿಕ್ಷಕಿ ರತ್ನಮಾಲ ಸೇರಿದಂತೆ ಶಾಲಾ ಮಕ್ಕಳು,ಶಿಕ್ಷಕ ವೃಂದದವರು,ಹಳೆಯ ವಿಧ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು.
ವರದಿ :ನಂದಿನಿ ಮೈಸೂರು
ವಿಳಾಸ: ಮುಖ್ಯ ಕಚೇರಿ: ನಂ ,356/10 ಸಿ,ವೈಕುಂಠ ಧಾಮ ಪಕ್ಕದಲ್ಲಿ ಹಳೆ. ಪಿ .ಬಿ .ರಸ್ತೆ, ದಾವಣಗೆರೆ -577 006. ಶಾಖೆ ವೀರರಾಣಿ ಕೆಳದಿ ಚೆನ್ನಮ್ಮ ರಸ್ತೆ ಶುಭ ಮಂಗಳ ಮಂಟಪದ ಹತ್ತಿರ ವಿನೋಬನಗರ ಶಿವಮೊಗ್ಗ -577 204