ಸೈದೂರು ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ – ಭಾವೈಕ್ಯತೆಯ ಪ್ರತೀಕದತ್ತ ಸೈದೂರು

ತಾಳಗುಪ್ಪ : ಸೈದೂರು ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ – ಭಾವೈಕ್ಯತೆಯ ಪ್ರತೀಕದತ್ತ ಸೈದೂರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೈದೂರು ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಮೊಹರಂ ಆಚರಣೆ ನೆಡೆದುಕೊಂಡು ಬರುತ್ತಿದ್ದೂ, ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ವಾಸವಿಲ್ಲದ್ದಿದ್ದರೂ, ಅನಾದಿ ಕಾಲದಿಂದ ಈ ಮೊಹರಂ ಆಚರಣೆ ಮಾಡುತ್ತಿರುವುದು ವಿಶೇಷ.

ಈ ಮೊಹರಂ ಹಬ್ಬ ಆಚರಣೆಯ ಖರ್ಚಿಗಾಗಿ ಸೈದೂರು ಗ್ರಾಮಸ್ಥರು ಪ್ರತಿ ಕುಟುಂಬದಿಂದ ವರಾಡ ( ವಂತಿಗೆ ) ಹಣ ಒಟ್ಟು ಮಾಡಿ ಹೊರ ಊರಿನಿಂದ ಮುಸ್ಲಿಂ ಜನಾಂಗದ ಹಿರಿಯನ್ನು ಕರೆ ತಂದು ” ಅಲ್ಲಾಭಿ ” ದೇವರ ಪೂಜೆಗಾಗಿ ನೇಮಿಸಿಕೊಂಡು ವಂತಿಗೆ ಹಣದಲ್ಲಿ ಪೂಜೆ ಸಲ್ಲಿಸುವ ಮುಸ್ಲಿಂ ಜನಾಂಗದವರಿಗೆ ಗೌರವ ಧನವನ್ನೂ ನೀಡುತ್ತಾರೆ.

ಪ್ರತಿ ಮನೆಯಿಂದ ಕಟ್ಟಿಗೆಯನ್ನೂ ಒಟ್ಟು ಮಾಡಿ ಅಲ್ಲಾಭಿ ದೇವರ ಮುಂದೇ ಅತೀ ದೊಡ್ಡದಾದ ಗುಂಡಿಯಲ್ಲಿ ತಾವುಗಳು ತಂದ ಕಟ್ಟಿಗೆಯನ್ನೂ ಹಾಕಿ ಸಣ್ಣದಾಗಿ ಬೆಂಕಿಯನ್ನೂ ಹಾಕುತ್ತಾರೆ. ಕೊನೆಯ ದಿನದಲ್ಲಿ ಹೊಂಡದಲ್ಲಿರುವ ಕಟ್ಟಿಗೆಗೆ ಬೆಂಕಿಯನ್ನೂ ದೊಡ್ಡದಾಗಿ ಹಾಕಿ, ಕೆಂಡದಲ್ಲಿ ಊರಿನ ಗ್ರಾಮಸ್ಥರು ಹಾಯುತ್ತಾರೆ.

ಕೊನೆಯ ದಿನದಲ್ಲಿ ಇಡೀ ಊರಿಗೆ ಊರು ಸೇರಿ ಅಡುಗೆ ಮಾಡಿ ಅನ್ನಸಂತರ್ಪಣೆ ನೆರವೇರಿಸುತ್ತಾರೆ. ಈ ಅನ್ನಸಂತರ್ಪಣೆ ಸೇವೆಯಲ್ಲಿ ಜಾತಿ ಧರ್ಮ ಭೇದವಿಲ್ಲದೇ ಪ್ರಸಾದ ಎಂದು ಸೇವಿಸುತ್ತಾರೆ.

ಮತ್ತೊಂದು ವಿಶೇಷವೇನಂದರೆ, ಮೊಹರಂ ಹಬ್ಬವು 5 ದಿನಗಳ ಕಾಲ ನೆಡೆಯುತ್ತದೆ. ಈ ಸಂದರ್ಭದಲ್ಲಿ ಸೈದೂರು ಗ್ರಾಮದ ಗ್ರಾಮಸ್ಥರು ಸರತಿಯಂತೆ ಪ್ರತಿ ಮನೆಯ ಒಬ್ಬರಂತೆ 5 ದಿನಗಳ ಕಾಲ 24 ಗಂಟೆಗಳ ಅವಧಿಯಲ್ಲಿ 05 ಜನರು ಅಲ್ಲಾಭಿ ದೇವರ ಕಾವಲು ಕಾಯುತ್ತಾರೆ.

ಸೈದೂರು ಎಂಬ ಹೆಸರು ಪುರಾತನ ಕಾಲದಲ್ಲಿ ರಾಜ ಮನೆತನದವರಾದ ” ಸೈಯದ್ ” ಎಂಬುವವರು ಈ ಊರಿನಲ್ಲಿ ವಾಸವಿರುವ ಕಾರಣ ಈ ಊರಿಗೆ ” ಸೈದೂರು ” ಎಂದು ಕರೆಯಲಾಗುತ್ತಿದೆ ಎಂದು ಹಿರಿಯರು ಹೇಳುತ್ತಿರುವ ಮಾಹಿತಿ.

” ಅಲ್ಲಾಭಿ ” ದೇವರಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ರು ಎನ್ನದೇ ಪ್ರತಿ ವರ್ಷ ಸಹಸ್ರಾರು ಭಕ್ತರು ಹತ್ತು ಹಲವಾರು ಸಮಸ್ಯೆಗಳ ಈಡೇರಿಕೆಗೆ ಅಲ್ಲಾಭಿ ದೇವರಲ್ಲಿ ಹರಕೆಯನ್ನೂ ಮಾಡುತ್ತಿದ್ದೂ, ಹರಕೆ ಈಡೇರಿದ ಪ್ರತಿಫಲವಾಗಿ ಭಕ್ತರು ಬೆಳ್ಳಿ ಬಂಗಾರದ ಸಾಮಾನುಗಳನ್ನೂ ನೀಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ಅಲ್ಲಾಭಿ ದೇವರಿಗೆ ಸಕ್ಕರೆಯನ್ನೂ ಭಕ್ತರು ಮನೆಯಿಂದ ತಂದು ದೇವರ ಮುಂದೇ ಮುಸ್ಲಿಂ ಜನಾಂಗದ ಪೂಜೆ ನಿರತವರಿಂದ ” ಓದುಕೆ ” ಮಾಡಿ ನವಿಲು ಗರಿಯ ಗುಚ್ಚದೊಂದಿಗೆ ತಲೆಗೆ ಮುಟ್ಟಿಸಿಕ್ಕೊಂಡು ಆಶೀರ್ವಾದ ಪಡೆಯುತ್ತಾರೆ.

ಮೊಹರಂ ಕೊನೆಯ ದಿನದಂದು ಅಲ್ಲಾಭಿ ದೇವರ ಮುಂಭಾಗ ಹಾಕಿರುವ ಕಟ್ಟಿಗೆ ರಾಶಿ ಬೆಂಕಿ ಹಾಕಿ ಭಕ್ತರು ತಂದ ಉಪ್ಪು ಮತ್ತು ಸಕ್ಕರೆಯನ್ನೂ ಉರಿಯುವ ಬೆಂಕಿ ರಾಶಿಗೆ ಹಾಕುತ್ತಾ ಭಜನೆ ಮಾಡುತ್ತಾ ಬೆಂಕಿ ಸುತ್ತ ಸುತ್ತುವರೆಯುತ್ತಾರೆ.

ನೂರಾರು ವರ್ಷಗಳಿಂದ ನೆಡೆಯುತ್ತಿರುವ ಈ ಮೊಹರಂ ಹಬ್ಬಕ್ಕೆ ಆ ಹೊಂಡದಲ್ಲಿರುವ ಬೂದಿಯೇ ಸಾಕ್ಷಿಯಾಗಿದೆ.

ಧರ್ಮ ಧರ್ಮಗಳಲ್ಲಿ ಜಗಳವಾಡುತ್ತಿರುವ ಇಂತಹ ಸಂಧಿಗ್ದ ಸಮಯದಲ್ಲಿ ಸೈದೂರು ನೆಡೆಯುವ ಭಾವೈಕ್ಯತೆಯ ಮೊಹರಂ ಹಬ್ಬ ವಿಶ್ವಕ್ಕೆ ನಿಜಕ್ಕೂ ಮಾದರಿಯಾಗಬೇಕು.

ವರದಿ: ಓಂಕಾರ ಎಸ್. ವಿ. ತಾಳಗುಪ್ಪ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *