
ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ನಿಟ್ಟಿನಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಮಾರ್ಚ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮುಖ್ಯಮಂತ್ರಿಗಳು ಅಥವಾ ರಾಜ್ಯಪಾಲರನ್ನು ಸಮಾರಂಭಕ್ಕೆ ಆಹ್ವಾನಿಸುವ ಕುರಿತು ಅವರ ದಿನಾಂಕದ ಲಭ್ಯತೆ ಆಧರಿಸಿ ಶೀಘ್ರವೇ ದಿನಾಂಕ ನಿಗದಿ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಸಮಾರಂಭದಲ್ಲಿ ಪಾಲ್ಗೊಳ್ಳುವ ಪ್ರಶಸ್ತಿ ಪುರಸ್ಕೃತರು ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಜಿಲ್ಲಾ ಘಟಕದ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯರು ಹಾಗೂ ಪತ್ರಕರ್ತರಿಗೆ ಊಟ, ವಸತಿ, ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನಿಭಾಯಿಸಬೇಕೆಮಬ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಪ್ರಸ್ತಾವನೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಹಾಗೂ ಎಲ್ಲಾ ಪದಾಧಿಕಾರಿಗಳು
ಸರ್ವಸಮ್ಮತವಾಗಿ ಒಪ್ಪಿದರು. ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು. ಸಮಾರಂಭವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಶಿವಾನಂದ ತಗಡೂರು ಅವರು ಸಲಹೆ ನೀಡಿದರು. ಅಲ್ಲದೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ದಿನವೇ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಂಜನಗೂಡು ರಸ್ತೆಯಲ್ಲಿ
ರೇಸ್ ಕೋರ್ಸ್ ಗೆ ತೆರಳುವ ಮಾರ್ಗದ ಬಡಾವಣೆಯಲ್ಲಿ ಮಂಜೂರಾಗಿರುವ ಸಿಎ ನಿವೇಶನರಲ್ಲಿ ನೂತನವಾಗಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ಎಂ.ಎಸ್. ಬಸವಣ್ಣ, ಗ್ರಾಮೀಣ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ನಗರ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ನಾಗೇಶ್ ಪಾಣತ್ತಲೆ, ರಾಜ್ಯ ಸಮಿತಿ ಸದಸ್ಯ ಬಿ. ರಾಘವೇಂದ್ರ ಮತ್ತಿತರರು ಹಾಜರಿದ್ದರು.
