ಕೋಲಾರ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರ ಮಾತುಗಳು

ಕೋಲಾರ : ಕೋಲಾರ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರ ಮಾತುಗಳು.

ಕೋಲಾರದ ಇತಿಹಾಸ ಇಡೀ ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಜನ ಶ್ರಮಜೀವಿಗಳು. ಬೆಂಗಳೂರು, ಕರ್ನಾಟಕ ರಾಜ್ಯಕ್ಕೆ ಹಾಲು, ತರಕಾರಿ, ರೇಷ್ಮೆ ಕೊಡುವ ಜನ. ಒಂದು ಕಾಲದಲ್ಲಿ ಚಿನ್ನ ಕೊಟ್ಟಂತಹ ಜನ. ನಿಮ್ಮ ತ್ಯಾಗ, ಹಿರಿಯರ ಹೋರಾಟ ನಾವ್ಯಾರೂ ಮರೆಯಲು ಸಾಧ್ಯವಿಲ್ಲ. ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ಉದ್ಯೋಗ ಮಾಡಿ ಶ್ರಮಿಸುತ್ತಿದ್ದೀರಿ. ಕೋಲಾರದಲ್ಲಿ ಜನವರಿಯಾದರೂ ಹಸಿರು ಕಾಣುತ್ತಿದೆ. ಇದಕ್ಕೆ ಕಾರಣ ಏನು ಎಂದು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಭಗವಂತ ನಿಮಗೆ ಕೊಟ್ಟಿದ್ದಾನೆ.

ನಾವು ರಾಜ್ಯದ ಜನರ ಸಮಸ್ಯೆ ಅರಿತು, ಅಭಿಪ್ರಾಯ ಪಡೆದು, ಅವರ ನೋವು, ಭಾವನೆ ತಿಳಿದು, ರಾಜ್ಯ ಹಾಗೂ ಕೇಂದ್ರದ ಡಬಲ್ ಇಂಜಿನ್ ಸರ್ಕಾರದಿಂದ ಈ ಜನರಿಗೆ ನೆರವಾಗಿದೆಯೇ ಎಂದು ಪರಿಶೀಲಿಸಲು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಈ ಪ್ರವಾಸದಲ್ಲಿ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಸರ್ಕಾರದ ವೈಫಲ್ಯಗಳನ್ನು ಗಮನಕ್ಕೆ ತಂದಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ನಿಮಗೆ ಅಚ್ಛೇ ದಿನ ಬಂದಿದೆಯೇ ಎಂದು ಕೇಳುತ್ತಾ ಬರುತ್ತಿದ್ದೇವೆ.

ದೇಶದ ಸ್ವಾಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಅವರು 1924ರಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ ಬೆಳಗಾವಿಯ ವೀರಸೌಧದಲ್ಲಿ ನಾವು ನಮ್ಮ ಯಾತ್ರೆ ಆರಂಭಿಸಿದ್ದೇವೆ. ಇದುವರೆಗೂ 15 ಜಿಲ್ಲೆಗಳಲ್ಲಿ ಯಾತ್ರೆ ಮಾಡಿದ್ದು, ಒಂದು ಜಿಲ್ಲೆಗಿಂತ ಮತ್ತೊಂದು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದು ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿ ಸಮಾವೇಶ ಮಾಡುತ್ತಿದ್ದೇವೆ. ಅವರು ಕೂಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.

ಸಾವಿರಾರು, ಲಕ್ಷಾಂತರ ಮಂದಿ ನಮ್ಮ ಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 5 ಶಾಸಕರನ್ನು ಹೊಂದಿದ್ದು, ಒಂದು ಕ್ಷೇತ್ರ ಸೋತಿದ್ದೇವೆ. ಅವರು ಕೂಡ ನಮ್ಮ ಜತೆ ಬಂದಿದ್ದಾರೆ. ನಾವು ಹಾಸನ, ಚಿಕ್ಕಮಗಳೂರಿಗೆ ಹೋಗಿದ್ದೆವು. ಹಾಸನದಲ್ಲಿ ಒಂದು ಕ್ಷೇತ್ರ ಗೆಲ್ಲದಿದ್ದರೂ ಲಕ್ಷಕ್ಕೂ ಹೆಚ್ಚು ಜನ ಬಂದು ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬರುವುದಕ್ಕಿಂತ, ನಮಗೆ ಅಧಿಕಾರ ಸಿಕ್ಕಿದ್ದಾಗ ನಾವು ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ.

ಇದು ನಮಗೆ ಪರಿಕ್ಷಾ ಕಾಲ, ನಾವು ಎಲ್ಲೆಲ್ಲಿ ಪ್ರವಾಸ ಮಾಡುತ್ತಿದ್ದೇವೋ ಅಲ್ಲೆಲ್ಲ ಜನ ಸಂಕಷ್ಟಕ್ಕೆ ಸಿಲುಕಿರುವುದು ಗಮನಕ್ಕೆ ಬಂದಿದೆ. 2013 ರಲ್ಲಿ ನಾವು 165 ಭರವಸೆಗಳನ್ನು ನೀಡಿದ್ದು, ಅದರಲ್ಲಿ 159 ಈಡೇರಿಸಿದ್ದೇವೆ. ಇದರ ಬಗ್ಗೆ ಯಾರಾದರೂ ತಕರಾರು ಮಾಡುವುದಾದರೆ, ನಾವು ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧವಿದ್ದೇವೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 600 ಭರವಸೆಗಳನ್ನು ನೀಡಿತ್ತು. ಆದರೆ ಕೇವಲ 50 ಮಾತ್ರ ಜಾರಿಯಾಗಿವೆ. ನಾವು ಈ ವಿಚಾರವಾಗಿ ಪ್ರತಿ ನಿತ್ಯ ಒಂದೊಂದು ಪ್ರಶ್ನೆ ಮಾಡುತ್ತಿದ್ದೇವೆ. ಇದುವರೆಗೂ ಒಂದು ಉತ್ತರವಿಲ್ಲ. ಇನ್ನು ಜೆಡಿಎಸ್ ಕೂಡ ಆಶ್ವಾಸನೆ ನೀಡಿದ್ದು, ಆ ಪಕ್ಷದ ಬಗ್ಗೆ ಶ್ರೀನಿವಾಸಗೌಡರು ಉತ್ತರ ನೀಡಲಿದ್ದಾರೆ. ಕೆರೆ ತುಂಬಿಸುವ ಯೋಜನೆ, ಎತ್ತಿನ ಹೊಳೆ ಯೋಜನೆಗೆ ವಿರೋಧಿಸಿ ಅವರು ರೈತ ವಿಚಾರದಲ್ಲಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

ರಾಜ್ಯದ ರೈತರು, ಕಾರ್ಮಿಕರು ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಬಹಳ ತರಾತುರಿಯಲ್ಲಿದೆ. ನಾವು ಇಲ್ಲಿಗೆ ಬರುವ ಮುನ್ನ ಪಾಪದ ಪುರಾಣ ಎಂಬ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಅವರ ವೈಫಲ್ಯ, ಭ್ರಷ್ಟಾಚಾರ, ಅವರಿಂದ ರಾಜ್ಯಕ್ಕೆ ಬಂದಿರುವ ಕಳಂಕವನ್ನು ಪಟ್ಟಿ ಮಾಡಿದ್ದೇವೆ. ಈ ಪಟ್ಟಿಯನ್ನು ನೀವು ಮನೆ ಮನೆಗೆ ತಲುಪಿಸಬೇಕು. ಇಂದು ನಮ್ಮ ರಾಜ್ಯ ಕಳಂಕಿತ ರಾಜ್ಯ ಎಂದು ಕುಖ್ಯಾತಿ ಪಡೆದಿದೆ, ರೈತರ ಆದಾಯ ಡಬಲ್ ಮಾಡಲಿಲ್ಲ, ಕೋವಿಡ್ ಸಮಯದಲ್ಲಿ ಬೆಂಬಲ ಬೆಲೆ ನೀಡುತ್ತೇವೆ ಎಂದರು, ಯಾರಿಗಾದರೂ ಸರ್ಕಾರ ಸಹಾಯ ಮಾಡಿದೆಯೇ? ನಿರ್ಮಲ ಸೀತರಾಮನ್ ಅವರು 20 ಲಕ್ಷ ಕೋಟಿ, ಯಡಿಯೂರಪ್ಪನವರು 1800 ಕೋಟಿ ಪ್ಯಾಕೇಜ್ ಘೋಷಿಸಿದರು. ಇದು ಯಾರಿಗಾದರೂ ತಲುಪಿದೆಯಾ? ಚಾಲಕರು, ರೈತರು, ಬೀದಿ ವ್ಯಾಪಾರದವರಿಗೆ ಅನುಕೂಲ ಆಗಿದೆಯೇ? ಇಲ್ಲ. ಯಾವುದೇ ಸಮಾಜಕ್ಕೂ ಈ ಸರ್ಕಾರ ನೆರವು ನೀಡಿಲ್ಲ.

ಬಿಜೆಪಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ನೀಡಲು ಆಗಲಿಲ್ಲ. ಜೆಡಿಎಸ್ ನವರು ಕೂಡ ನಿಮ್ಮ ಬದುಕು ಹಸನ ಮಾಡುತ್ತೇವೆ ಎಂದು ಹೇಳಿದ್ದರು. ನಾವು ಕೂಡ ಅವರಿಗೆ ಬೆಂಬಲ ನೀಡಿ ಅವರನ್ನು 14 ತಿಂಗಳು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವು. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಕೈಗೆ ಸಿಕ್ಕ ಅಧಿಕಾರವನ್ನು ಅವರಿಂದ ಉಳಿಸಿಕೊಳ್ಳಬಹುದಾಗಿತ್ತಾದರೂ ಉಳಿಸಿಕೊಳ್ಳಲಿಲ್ಲ. ನಾವು 5 ವರ್ಷಗಳ ಸಿಎಂ ಹುದ್ದೆ ಬಿಟ್ಟುಕೊಟ್ಟಿತ್ತು. ಅವರ ತಂದೆ ದೇವೇಗೌಡರನ್ನು ಕಾಂಗ್ರೆಸ್ ಪಕ್ಷ ಬೆಂಬಲ ನೀಡಿ ಪ್ರಧಾನಿ ಮಾಡಿತ್ತು. ಕುಮಾರಸ್ವಾಮಿ ಅವರು 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ ಎಂದು ಹೇಳಬೇಕು.

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಕೆರೆ ತುಂಬುವ ಕೆ.ಸಿ ವ್ಯಾಲಿ ಯೋಜನೆ ಮಾಡಿದ್ದೇವೆ. 1100 ಅಡಿ ಅಂತರ್ಜಲ ಸಿಗುತ್ತಿತ್ತು. ಈಗಅದು ಏರಿಕೆಯಾಗಿದೆ. ನೀರಿಲ್ಲದೆ ಹದಗೆಟ್ಟಿದ್ದ ಮೊಟಾರುಗಳ ಪೈಕಿ ಶೇಖಡ 70 ರಷ್ಟು ಮೋಟಾರ್ ಗಳು ಈಗ ಪುನಶ್ಚೇತನಗೊಂಡು ಚಾಲನೆಯಲ್ಲಿವೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ನಿಮ್ಮ ಬದಲಾವಣೆ ತಂದಿದೆವಾ ಇಲ್ಲವಾ? ಇದನ್ನು ಮಾಡಲು ನಮಗೆ ಯಾರಾದರೂ ಕಮಿಷನ್ ನೀಡಿದ್ದರಾ?

ಬೊಮ್ಮಾಯಿ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿವೆ. ರಾಜ್ಯದಲ್ಲಿ 40% ಕಮಿಷನ್ ಪಡೆಯಲಾಗುತ್ತಿದ್ದು ಗುಣಮಟ್ಟದ ಕಾಮಗಾರಿ ಅಸಾಧ್ಯ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಯಾವುದಾದರೂ ಒಂದು ತನಿಖೆ ನಡೆಯಿತಾ? ಈ ಭ್ರಷ್ಟಾಚಾರ ತಾಳಲಾರದೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಜನರ ಸಮಸ್ಯೆಗೆ ಪರಿಹಾರ ನೀಡಲು ನಾವು ಕೆಲವು ಯೋಜನೆ ಘೋಷಣೆ ಮಾಡಿದ್ದೇವೆ.

ವಿದ್ಯುತ್ ಸಮಯ ಹೆಚ್ಚಳ, ಅಂತರ್ಜಲ ಹೆಚ್ಚಳ, ಹಾಲಿಗೆ ಬೆಂಬಲ ಬೆಲೆ ನಾವು ಮಾಡಿದ್ದೆವು. ಬೊಮ್ಮಾಯಿ, ಕುಮಾರಸ್ವಾಮಿ ಅವರ ಸರ್ಕಾರ ನೀಡಿತ್ತಾ? ರೈತರಿಗೆ ಸಹಾಯ ಮಾಡಿ ಉಳಿಸಿದ್ದು ಯಾರು? ಎಂದು ಕೇಳಲು ಬಂದಿದ್ದೇವೆ. ಕೃಷ್ಣ ಭೈರೇಗೌಡರು ಸಚಿವರಾಗಿದ್ದಾಗ, ಈ ಜಿಲ್ಲೆಯಲ್ಲಿ 1 ಲಕ್ಷ ಕೃಷಿ ಹೊಂಡ ಮಾಡಿಕೊಡಲಾಯಿತು. ರೈತರ ಬದುಕು ಹಸನ ಮಾಡಿದ್ದೇವೆ. ನರೇಗಾ ಯೋಜನೆ ಅಡಿ ಅನೇಕ ಕಾಮಗಾರಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಉದ್ಯೋಗ ನೀಡಲಿಲ್ಲ, ಅದರ ಬದಲಿಗೆ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದಾರೆ. ಲಂಚವಿಲ್ಲದೇ ಯಾವ ನೇಮಕಾತಿಯೂ ಆಗುವುದಿಲ್ಲ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಐಐಎಎಸ್, ಐಪಿಎಸ್ ಅಧಿಕಾರಿಗಳು ಜೈಲು ಸೇರಿದ್ದಾರೆ.

ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಮಾಡಿದ್ದೇವೆ. ನಂತರ ಬಂದ ಕಾಂಗ್ರೆಸ್ ಸರ್ಕಾರ ಕೂಡ ಜನರಿಗೆ ಜಮೀನು ನೀಡುತ್ತಾ ಬಂದಿದೆ. ಅವುಗಳ ನಂಬರ್ ಪಡೆಯಲು ಸಾವಿರ, ಲಕ್ಷದವರೆಗೂ ಲಂಚ ಕೇಳುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ಮುಂದೆ ಬರುವ ಕಾಂಗ್ರೆಸ್ ಸರ್ಕಾರ ಲಂಚ ಕಿತ್ತು ಹಾಕಿ ರೈತರ ಆಸ್ತಿ ಸರಿ ಮಾಡಲು ಕಾರ್ಯಕ್ರಮ ರೂಪಿಸುತ್ತೇವೆ.

ಇನ್ನು ಕಾಂಗ್ರೆಸ್ ಪಕ್ಷ ಎರಡು ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದೆ. ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಹಾಗೂ ಪ್ರತಿ ಮನೆಯೊಡತಿಗೆ ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಲು ಪ್ರತಿ ತಿಂಗಳು 2 ಸಾವಿರ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಕಾಲದಲ್ಲಿ 400 ರೂ. ಇದ್ದ ಗ್ಯಾಸ್ ಬೆಲೆ ಈಗ 1100 ಆಗಿದೆ. ಅಡುಗೆ ಎಣ್ಣೆ 90ರಿಂದ 230 ಆಗಿದೆ. ಈ ಎಲ್ಲ ಸಮಸ್ಯೆಗಳಿಗೆ ಸಹಾಯ ಮಾಡಲು ವರ್ಷಕ್ಕೆ 24 ಸಾವಿರ ನೀಡಲು ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ಮಾಡಿ ತೀರ್ಮಾನಿಸಿದ್ದೇವೆ.

ನಮ್ಮ ಈ ಯೋಜನೆಗಳನ್ನು ಕೇಳಿ ಬಿಜೆಪಿಯವರಿಗೆ ತಡೆಯಲಾಗುತ್ತಿಲ್ಲ. ಅದಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದರು. ಆದರೂ ಕಳೆದ ಮೂರುವರೆ ವರ್ಷಗಳಿಂದ ಯಾವ ವರ್ಗದ ಜನರಿಗೆ, ಬಡವರಿಗೆ ಸರ್ಕಾರ ಸಹಾಯ ಮಾಡಲಿಲ್ಲ. ಕೋವಿಡ್ ಸಮಯದಲ್ಲಿ ಯಾರಿಗೂ ನೆರವು ನೀಡಲಿಲ್ಲ. ರೈತರಿಗೆ ಬೆಂಬಲ ಬೆಲೆ ನೀಡಲಿಲ್ಲ. ಇನ್ನು ಈ ಸರ್ಕಾರ ಯಾಕೆ ಇರಬೇಕು. 28ರ ನಂತರ ನಮ್ಮ ಯೋಜನೆ ಬಗ್ಗೆ ಮನೆ ಮನೆಗೆ ತಲುಪಿಸಿ, ಜನರಿಂದ ಅರ್ಜಿ ತುಂಬಿಸಬೇಕು.

ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ 10 ಕೆ.ಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದಾರೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಘೋಷಣೆ ಮಾಡಿರುವ ಎಲ್ಲ ಯೋಜನೆ ಜಾರಿ ಮಾಡುತ್ತೇವೆ.

ಈ ಸರ್ಕಾರ ಕಳೆದ ಮೂರುವರೆ ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದೆ. ಈ ಸಾಲ ಎಲ್ಲಿಗೆ ಹೋಯಿತು? 40% ಕಮಿಷನ್ ಮೂಲಕ ಬಿಜೆಪಿ ನಾಯಕರ ಜೇಬು ತುಂಬಿದೆ. ಈ 40% ಕಮಿಷನ್ ನಿಲ್ಲಿಸಿದರೆ, ರಾಜ್ಯದ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಹಾಗೂ ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಬಹುದು. ಇದರ ಜತೆಗೆ ದಲಿತರು, ಹಿಂದುಳಿದವರ ಯೋಜನೆ ಮಾಡಬಹುದು.

ರೈತನಿಗೆ ಲಂಚ, ವೇತನ, ಬಡ್ತಿ. ಪಿಂಚಣಿ ಯಾವುದೂ ಇಲ್ಲ. ಕೋಲಾರ ಚಿಕ್ಕಬಳ್ಳಾಪುರದ ಜನ ಶ್ರಮ ಜೀವಿಗಳಾಗಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಹೀಗಾಗಿ ನಿಮ್ಮ ಪಾದಕ್ಕೆ ನಮಿಸುತ್ತೇನೆ. ಈ ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸುವ ವಿಶ್ವಾಸವಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲವನ್ನು ಶಮನ ಮಾಡಿದ್ದೇವೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು. ಕಾಂಗ್ರೆಸ್ ಧ್ವಜ ಹಿಡಿದು ನೀವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಹೆಜ್ಜೆ ಹಾಕಬೇಕು. ಆ ಮೂಲಕ ರಾಜ್ಯ ಹಾಗೂ ದೇಶಕ್ಕೆ ಸಂದೇಶ ರವಾನಿಸಬೇಕು.

ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *