ಚಿಕ್ಕಮಗಳೂರು | 51ಕ್ಕೂ ಹೆಚ್ಚು ಅಕ್ರಮ ಬಂದೂಕುಗಳ ವಶ; ಮೂವರ ಬಂಧನ

ಚಿಕ್ಕಮಗಳೂರು : 51ಕ್ಕೂ ಹೆಚ್ಚು ಅಕ್ರಮ ಬಂದೂಕುಗಳ ವಶ; ಮೂವರ ಬಂಧನ

ಈವರೆಗೆ ನಡೆದ ಹಲವು ಶೂಟೌಟ್ ಪ್ರಕರಣಗಳಲ್ಲಿ ಪರವಾನಿಗೆ ರಹಿತ ಅಕ್ರಮ ಬಂದೂಕುಗಳನ್ನು ಬಳಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಿದರೆ ಗ್ರಾಮದಲ್ಲಿ ಸೋಮವಾರ ನಡೆದ ಶೂಟೌಟ್ ಪ್ರಕರಣದ ಬೆನ್ನತ್ತಿರುವ ಪೊಲೀಸರು ಮಲೆನಾಡಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಬಂದೂಕು ದುರಸ್ತಿ ಕೇಂದ್ರಗಳ ಮೇಲೆ ದಾಳಿ ನಡೆಸಿ ಒಟ್ಟು 53 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ 41 ಬಂದೂಕುಗಳು, 2 ರಿವಾಲ್ವರ್ ಪತ್ತೆಯಾಗಿವೆ.
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಅಡಿಗೆಬೈಲು ನೇತ್ರಕೊಂಡ ಎಸ್ಟೇಟ್’ನ ಕೂಲಿ ಲೈನ್ ವಾಸಿ ಸದಾಶಿವ ಆಚಾರ್ಯ, ರಂಭಾಪುರಿ ಮಠ ರಸ್ತೆಯ ರಾಮಚಂದ್ರ ಆಚಾರ್ಯ ಹಾಗೂ ಬಾಳೂರು ಠಾಣಾ ವ್ಯಾಪ್ತಿಯ ಕೆಳಗೂರು ವಾಸಿ ಸುಧಾಕರ್ ಆಚಾರ್ಯ ಬಂಧಿತ ಆರೋಪಿಗಳು.
ಫೆ.21, 22ರಂದು ಬಾಳೆಹೊನ್ನೂರು, ಬಾಳೂರು, ಕಳಸ, ಎನ್.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರ ಕಾಯ್ದೆಯಡಿ ಒಟ್ಟು 6 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಬಂದೂಕು ರಿಪೇರಿ ವೃತ್ತಿ ನಿರ್ವಹಿಸುವ ಮೂವರ ವಿರುದ್ಧ ಪರವಾನಗಿ ರಹಿತ ನಾಡ ಬಂದೂಕುಗಳನ್ನು ಹೊಂದಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *