ಹಳ್ಳಿ ಹೈಕ್ಳಲ್ಲಿ ಐಕ್ಯೂ ಹೆಚ್ಚಿರುತ್ತೆ: ಸಾಹಿತಿ ಬನ್ನೂರು ರಾಜು

ಹಳ್ಳಿ ಹೈಕ್ಳಲ್ಲಿ ಐಕ್ಯೂ ಹೆಚ್ಚಿರುತ್ತೆ: ಸಾಹಿತಿ ಬನ್ನೂರು ರಾಜು

ಸರಗೂರು: ನಾವು ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿದಲ್ಲಿ ಗ್ರಾಮೀಣ ಪರಿಸರದ ಮಣ್ಣಿನ ಸೊಗಡಿನ ಹಳ್ಳಿ ಹೈಕ್ಳಲ್ಲಿ ಸಹಜವಾಗಿಯೇ ಬೌದ್ಧಿಕ (ಐಕ್ಯೂ) ಸಾಮರ್ಥ್ಯ ಹೆಚ್ಚಾಗಿರುತ್ತದೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.
ಸರಗೂರು ತಾಲ್ಲೂಕಿನ ಮುತ್ತಿಗೆ ಚಿಕ್ಕತಳಲು (ಎಂ.ಸಿ.ತಳಲು) ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಮೈಸೂರಿನ ಹಿರಣ್ಮಯಿ ಪ್ರತಿಷ್ಟಾನ ಹಾಗು ಕಾವೇರಿ ಬಳಗ ಸಂಯುಕ್ತವಾಗಿ ಶಾಲೆಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ವಿಖ್ಯಾತ ವಿಜ್ಞಾನಿ ಮೇರಿ ಕ್ಯೂರಿ ಅವರ ಪುಣ್ಯ ಸ್ಮರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಯೆಂದರೆ ಅದೂ ಕೂಡ ಕಾಡಿನೊಳಗಿನ ಹಳ್ಳಿ ಎಂದರೆ ಪ್ರಕೃತಿದತ್ತವಾಗಿ ಪರಿಶುದ್ಧ ವಾತಾವರಣದಲ್ಲಿ ಎಲ್ಲವೂ ದೊರೆಯುವ ನಿಸರ್ಗ ದ ಸ್ವರ್ಗವಾಗಿದ್ದು ಇಲ್ಲಿ ಹುಟ್ಟಿ ಬೆಳೆವ ಮಕ್ಕಳು ಜನ್ಮತಃ ವಿಶೇಷ ಶಕ್ತಿಯುಳ್ಳ ಬುದ್ದಿವಂತ ರಾಗಿರುತ್ತಾರೆಂದರು.
ಇಂತಹ ವಿಶೇಷ ಪ್ರತಿಭಾ ಶಕ್ತಿಯುಳ್ಳ ಮಕ್ಕಳು ತಾವು ಏನಾಗಬೇಕೆಂಬುದರ ಬಗ್ಗೆ ಸರಿಯಾದ ಗುರಿಯನ್ನು ಮುಂದಿಟ್ಟುಕೊಂಡು ಹಿಂದೆ ಗುರುಗಳ ಮಾರ್ಗದರ್ಶನವನ್ನು ಪಡೆದುಕೊಂಡು ಸಾಗಿದರೆ ತಮ್ಮ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಮೇರಿ ಕ್ಯೂರಿ ಅಂತಹ ಮೇಧಾವಿ ವಿಜ್ಞಾನಿಯೂ ಆಗಬಹುದು. ವಿಶ್ವೇಶ್ವರಯ್ಯನವರಂತೆ ಮಹಾಮೇಧಾವಿ ಇಂಜಿನಿಯರ್ ಸಹ ಆಗಬಹುದು. ಹೀಗೆ ಎಂಥಾ ಅದ್ಭುತವನ್ನಾದರೂ ಸಾಧಿಸಬಹುದು. ಆದರೆ ಪ್ರಕೃತಿ ತಮಗೆ ಕೊಟ್ಟಿರುವ ಬೌದ್ಧಿಕ ಸಾಮರ್ಥ್ಯವನ್ನು, ಪ್ರತಿಭಾ ಶಕ್ತಿಯನ್ನು ತಮ್ಮ ಪರಿಶ್ರಮದ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕಷ್ಟೇ. ಜಗತ್ತಿನ ಬಹು ದೊಡ್ಡ ಸಾಧಕರೆಲ್ಲರೂ ಬಹುತೇಕವಾಗಿ ಹಳ್ಳಿಗಾಡಿನಿಂದಲೇ ಬಂದವರು ಹಾಗೂ ಸರ್ಕಾರಿ ಶಾಲೆಯಲ್ಲಿಯೇ ಕಲಿತವರು. ಹಾಗಾಗಿ ನೀವು ಮುಂದೆ ಮುಂದೆ ಉನ್ನತ ಶಿಕ್ಷಣದ ಕಲಿಕೆಗೆ ಯಾವುದೇ ನಗರಗಳಿಗೆ,ಮಹಾನಗರಗಳಿಗೆ ಹೋದರೂ ಕೂಡ, ತಾವು ಹಳ್ಳಿಗರು, ಸರ್ಕಾರಿ ಶಾಲೆಯಲ್ಲಿ ಕಲಿತವರೆಂಬ ಹಿಂಜರಿಕೆ ಬಿಟ್ಟು ಹೆಮ್ಮೆಯಿಂದ ಮುನ್ನಡೆದು ಸಾಧಕರಾಗಿ ಹುಟ್ಟಿದ ನೆಲಕ್ಕೆ, ಕಲಿತ ಶಾಲೆಗೆ ಕೀರ್ತಿ ತರಬೇಕೆಂದು ಹೇಳಿದ ಬನ್ನೂರು ರಾಜು ಅವರು ಶಾಲೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಕಾಳಜಿಯುಳ್ಳ ಕ್ರಿಯಾಶೀಲ ಶಿಕ್ಷಕರನ್ನು ಒಳಗೊಂಡ, ಶಾಲೆಗೆ ಒಳ್ಳೆಯ ಫಲಿತಾಂಶ ತಂದು ಕೊಡುತ್ತಿರುವ ಉತ್ತಮ ವಿದ್ಯಾರ್ಥಿಗಳಿಂದ ಕೂಡಿದ ಬಹು ಅಪರೂಪದ ಒಳ್ಳೆಯ ಶಾಲೆ ಇದೆಂದು ಶ್ಲಾಘಿಸಿದರು.
ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್.ಜಿ.ಸೀತಾರಾಂ ಅವರು ಮೇರಿ ಕ್ಯೂರಿಯ ಬದುಕು ಸಾಧನೆ ಸಿದ್ದಿಯ ಬಗ್ಗೆ ಸುಧೀರ್ಘ ಉಪನ್ಯಾಸ ನೀಡಿ ಮೇರಿ ಕ್ಯೂರಿ ಅವರದು ಗಂಡ, ಮಗಳು, ಅಳಿಯ ಸೇರಿದಂತೆ ಇಡೀ ಸಂಸಾರವೇ ನೊಬೆಲ್ ಕುಟುಂಬವಾಗಿತ್ತು. ವಿಜ್ಞಾನ ಲೋಕಕ್ಕೆ ಅವರು ಮಾಡಿದ ತ್ಯಾಗ, ಕೊಟ್ಟ ಕೊಡುಗೆ ಅನನ್ಯವಾದದ್ದು. ವಿಜ್ಞಾನ ಲೋಕದ ರೇಡಿಯಮ್ ತಾರೆಯಾದ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಾತ್ರವಲ್ಲ, ಅವರೇ ಒಂದು ನೋಬೆಲ್ ಆಗಿದ್ದರು. ವಿಜ್ಞಾನ ಲೋಕವೇ ವಿಸ್ಮಯ ಪಡುವಂತಹ ಅಸಾಮಾನ್ಯ ವಿಜ್ಞಾನ ಸಾಧಕಿಯಾದ ಇವರ ಸಮಕ್ಕೆ ಮತ್ತೊಬ್ಬರನ್ನು ಊಹಿಸಲೂ ಸಾಧ್ಯವಿಲ್ಲವೆಂದು ಹೇಳಿದ ಸೀತಾರಾಮ್ ಅವರು, ಮೇರಿ ಕ್ಯೂರಿ ಅವರ ಬದುಕನ್ನು ಪರಿಚಯಿಸುವ ಕಿರು ಚಿತ್ರವನ್ನು ಮಕ್ಕಳಿಗೆ ಪ್ರದರ್ಶಿಸಿ ಅದರ ಸಂಪೂರ್ಣ ವಿವರಣೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಕಲಕಲಾ ಸಂಪನ್ನೆ ಖ್ಯಾತ ಕಲಾವಿದೆ ಡಾ.ಜಮುನಾರಾಣಿ ಮಿರ್ಲ್ ಅವರು, ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಆಸಕ್ತಿ ಹೊಂದಬೇಕೆಂದು ಹೇಳಿ ಕಲೆ, ಸಾಹಿತ್ಯ, ಚಿತ್ರಕಲೆ, ಸಂಗೀತ, ನೃತ್ಯ, ಯೋಗ ಸೇರಿದಂತೆ ಬಹಳಷ್ಟು ವಿಷಯಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡುವಂತೆ ತಿಳಿಸಿಕೊಟ್ಟರು.
ಹಿರಣ್ಮಯಿ ಪ್ರತಿಷ್ಟಾನದ ಅಧ್ಯಕ್ಷರೂ ಆದ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಅವರು ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿರುವ ಶಾಲೆಯ ವಿದ್ಯಾರ್ಥಿಗಳಾದ ಸುನೀತಾ, ಪುಣ್ಯವತಿ, ಅಶೋಕ್, ಮಾನಸ ಅವರುಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.ಹಾಗೆಯೇ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ಭಾಷಣದಲ್ಲಿ ಜಯಶ್ರೀ (ಪ್ರ), ಎಂ.ದಿವ್ಯ(ದ್ವಿ), ಪ್ರಕಾಶ್ (ತೃ) ಮತ್ತು ಗಾಯನದಲ್ಲಿ ಅಂಜಲಿ(ಪ್ರ),ಕೆ.ಪೂರ್ಣಿಮಾ(ದ್ವಿ), ಮೊಹಮದ್ ಜಬ್ಬರ್ (ತೃ) ಹಾಗೂ ಚಿತ್ರ ಕಲೆಯಲ್ಲಿ ನಯನ (ಪ್ರ),ಆಕಾಶ್(ದ್ವಿ), ಚಂದು(ತೃ) ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ರಾಜು ಎಂ.ಬಂಡಳ್ಳಿ ಅವರು ಬಹುಮಾನ ವಿತರಿಸಿದರು. ನಂತರ ಮಾತನಾಡಿದ ಅವರು, ನಮ್ಮ ಶಾಲಾ ಮಕ್ಕಳು ಬಹುಪಾಲು ಹುಲಿ, ಆನೆ, ಚಿರತೆ,ಜಿಂಕೆ,ಕರಡಿ ಮುಂತಾದ ಕಾಡು ಪ್ರಾಣಿಗಳ ಜೊತೆಯಲ್ಲೇ ಬೆಳೆದವರು.ಹಾಗಾಗಿ ಇವರಿಗೆ ಧೈರ್ಯ ಜಾಸ್ತಿ. ಅಷ್ಟೇ ಪ್ರಾಣಿ, ಪಕ್ಷಿ, ಗಿಡ,ಮರ ಸೇರಿದಂತೆ ಒಟ್ಟಾರೆ ಇಡೀ ಪ್ರಕೃತಿ ಮೇಲೆಯೂ ಅಪಾರ ಪ್ರೀತಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಕಾಡಿನ ಹಳ್ಳಿಯಲ್ಲಿರುವ ತಮ್ಮೂರಿನ ಈ ಶಾಲೆಯ ಬಗ್ಗೆ ಇನ್ನೂ ಹೆಚ್ಚಿನ ಪ್ರೇಮ. ಇವರ ಪೋಷಕರಿಗೂ ಕೂಡ.ಆದ್ದರಿಂದ ನಮ್ಮ ಶಾಲೆ ಯ ವಿದ್ಯಾರ್ಥಿಗಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಈ ಶಾಲೆಯಲ್ಲಿ ಕಲಿಕೆಯಲ್ಲಿ ಮುಂದಿದ್ದು ಒಳ್ಳೆಯ ಫಲಿತಾಂಶ ತಂದು ಕೊಡುತ್ತಿದ್ದಾರೆಂದು ಹೆಮ್ಮೆಯಿಂದ ಹೇಳಿದರು.
ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಒಟ್ಟಾಗಿ ಸಾಮೂಹಿಕವಾಗಿ ಸರ್ವಧರ್ಮ ಪ್ರಾರ್ಥನಾ ಗೀತೆಯನ್ನು ಹಾಡಿದರೆ ಗಣ್ಯರೆಲ್ಲರೂ ಮೇರಿ ಕ್ಯೂರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಿಕ್ಷಕಿ ಹೆಚ್. ಎಸ್.ಶಾರದಾ ಅವರು ಪ್ರಾಸ್ತಾವಿಕ ಭಾಷಣ ಮಾಡಿ ತಮ್ಮ ಶಾಲೆ ಮತ್ತು ತಮ್ಮ ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಅಭಿಮಾನದಿಂದ ಹೇಳಿಕೊಂಡು ಗಣ್ಯರೆಲ್ಲರಿಗೂ ಪರಿಚಯಿಸಿ ಕೊಟ್ಟರು. ಶಿಕ್ಷಣ ಪರ ಕಾಳಜಿಯುಳ್ಳ ಗ್ರಾಮದ ಮುಖಂಡರಾದ ಭವನೇಶ್ ಮತ್ತು ಶಿಕ್ಷಕರಾದ ಗುರುಸ್ವಾಮಿ, ಮದನ್, ಅಶೋಕ್, ಶ್ರೀಕಂಠ, ಶೃತಿ ಹಾಗೂ ವಿದ್ಯಾರ್ಥಿಗಳ ಫೋಷಕರು ಉಪಸ್ಥಿತರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *