![](https://hind-samachar.com/wp-content/uploads/2023/10/WhatsApp-Image-2023-10-06-at-2.30.18-PM.jpeg)
ಬಿಜೆಪಿ ಸಮಾಜ ಒಡೆವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಅದನ್ನು ಹೊಲಿಯುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಕಬ್ಬಿಣದಿಂದ ಸೂಜಿ ಮತ್ತು ಕತ್ತರಿ ತಯಾರಿಸಬಹುದು. ಕಾಂಗ್ರೆಸ್ ಸೂಜಿಯಿಂದ ಹೊಲಿಯುವ ಕೆಲಸ ಮಾಡುತ್ತಿದ್ದರೆ, ಬಿಜೆಪಿಯವರು ಕತ್ತರಿಯಿಂದ ಕತ್ತರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಛೇಡಿಸಿದರು.
ಶಿವಮೊಗ್ಗದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಭಯದ ವಾತಾವರಣ ಉಂಟು ಮಾಡಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಉತ್ತರಿಸಿದ ಅವರು ಹೇಳಿದ್ದಿಷ್ಟು:
“ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಹಾಡನ್ನು ನಾಡಗೀತೆಯಾಗಿ ಘೋಷಣೆ ಮಾಡಿದೆವು. ಈ ಹಾಡೇ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ನೀಡಿರುವ ಸಂದೇಶ.”
“ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವುದೇ ನಮ್ಮ ಗುರಿ ಹಾಗೂ ಉದ್ದೇಶ. ಬಿಜೆಪಿಯವರು ಸತ್ಯಶೋಧನ ಸಮಿತಿಯ ಮೂಲಕ ಅವರಿಗೆ ಏನು ಬೇಕೋ ಅದನ್ನು ಹೇಳುತ್ತಿದ್ದಾರೆ. ನಾವು ಸಮಾಜ ಜೋಡಿಸುತ್ತಿದ್ದರೆ, ಅವರು ಒಡೆಯುತ್ತಿದ್ದಾರೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ.”
“ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಿಂದೂ ಮತ್ತು ಮುಸ್ಲಿಂ ಇಬ್ಬರನ್ನೂ ಭೇಟಿ ಮಾಡಿ ಮಾತನಾಡಿದ್ದಾರೆ. ಅವರ ಸಮಸ್ಯೆ ಆಲಿಸಿದ್ದಾರೆ. ಯಾರೇ ತಪ್ಪು ಕೆಲಸ ಮಾಡಿದ್ದಾರೋ, ಅದನ್ನು ಖಂಡಿಸಿದ್ದಾರೆ, ಇಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯ ಬರುವುದೇ ಇಲ್ಲ. ಯಾರು ಕಾನೂನು ಮೀರಿ ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ನೀಡುವ ಕೆಲಸ ಮಾಡುತ್ತೇವೆ. ಆದರೆ ಬಿಜೆಪಿಯವರು ಪಟ್ಟಿ ಇಟ್ಟುಕೊಂಡು ಕೆಲವರ ಮನೆಗೆ ಹೋಗಿದ್ದಾರೆ.”
ನಾವು ನಿಜವಾದ ಹಿಂದುಗಳು, ಬಿಜೆಪಿಯವರು ನಕಲಿ ಹಿಂದುಗಳು ಎನ್ನುವ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಮಾತಿಗೆ ಇದೇ ವೇಳೆ ಸಹಮತ ವ್ಯಕ್ತಪಡಿಸಿದರು.
ವರದಿ: ನಂದಿನಿ ಮೈಸೂರು
![](https://hind-samachar.com/wp-content/uploads/2023/09/WhatsApp-Image-2023-09-28-at-7.25.22-PM-1024x1024.jpeg)