
ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲಾರ: ಡಿಸಿಎಂ ಡಿ.ಕೆ.ಶಿವಕುಮಾರ್

ಗದಗ: ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ, ಕರ್ನಾಟಕದ ಇತಿಹಾಸ ತಿಳಿಸುವ ಉದ್ದೇಶದಿಂದ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಗದಗದಲ್ಲಿ ಶುಕ್ರವಾರ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;
ದೇವರಾಜ ಅರಸು ಅವರ ನೇತೃತ್ವದಲ್ಲಿ ಕರ್ನಾಟಕ ಎಂದು ಮರುನಾಮಕರಣವಾದ ನಂತರ ಐತಿಹಾಸಿಕ ಕಾರ್ಯಕ್ರಮ ಇದೇ ಭಾಗದಲ್ಲಿ ನಡೆದಿತ್ತು. ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆಯುತ್ತಿದೆ.
50 ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕೆ.ಎಚ್.ಪಾಟೀಲರ ನೇತೃತ್ವದಲ್ಲಿ ಕರ್ನಾಟಕ ಮರು ನಾಮಕರಣ ಸಂಭ್ರಮ ನಡೆದಿತ್ತು. ಮತ್ತೊಮ್ಮೆ ಇದೇ ನೆಲದಲ್ಲಿ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆದಿದೆ. ಆಗ ಕೆ.ಎಚ್.ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆದ ಕಾರಣ ಗದಗ ಜಿಲ್ಲೆಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿದ ಪವಿತ್ರವಾದ ಹೊತ್ತಿನಲ್ಲೇ, ಕಾಂಗ್ರೆಸ್ ಸರ್ಕಾರಕ್ಕೆ ಜನಸೇವೆ ಮಾಡಲು ಅವಕಾಶ ನೀಡಿದ ಕರ್ನಾಟಕ ಜನತೆಯ ತೀರ್ಮಾನಕ್ಕೆ ಚಿರಋಣಿಯಾಗಿರುತ್ತೇವೆ. ಈ ವೇಳೆ ಪುರಂದರದಾಸರ ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ ಕೀರ್ತನೆ ನೆನಪಾಗುತ್ತದೆ.
ಕರ್ನಾಟಕ ಎನ್ನುವುದೇ ಶಕ್ತಿ ಮಂತ್ರ, ಕರ್ನಾಟಕ ಎನ್ನುವುದು ಶಾಂತಿ ಮಂತ್ರ, ಕರ್ನಾಟಕ ಎಂದರೆ ಮಾದರಿ ಆಡಳಿತ ಯಂತ್ರ, ಕರ್ನಾಟಕ ಎಂದರೆ ಸರ್ವ ಜನಾಂಗದ ಶಾಂತಿಯ ತೋಟ, ಇಡೀ ಕರ್ನಾಟಕವೇ ಒಂದು ಅನುಭವ ಮಂಟಪ, ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ.