ಸಿಎಂ, ಮಂತ್ರಿಗಳು ಗಂಟುಮೂಟೆ ಕಟ್ಟಿಕೊಂಡು ಹೊರಡಲಿ, ವಿಧಾನಸೌಧನಾ ಗಂಜಲ ಹಾಕಿ ತೊಳೆಯುತ್ತೇವೆ: ಡಿ.ಕೆ. ಶಿವಕುಮಾರ್

ಬೆಂಗಳೂರು : ಸಿಎಂ, ಮಂತ್ರಿಗಳು ಗಂಟುಮೂಟೆ ಕಟ್ಟಿಕೊಂಡು ಹೊರಡಲಿ, ವಿಧಾನಸೌಧನಾ ಗಂಜಲ ಹಾಕಿ ತೊಳೆಯುತ್ತೇವೆ: ಡಿ.ಕೆ. ಶಿವಕುಮಾರ್.

‘ಬಿಜೆಪಿ ಸರ್ಕಾರ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅವರ ಮಂತ್ರಿಗಳು ವಿಧಾನಸೌಧದಿಂದ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೊರಡಲಿ, ನಾವು ಗಂಜಲ ತಂದು ವಿಧಾನಸೌಧವನ್ನು ಶುದ್ಧ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಎರಡು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, ಆಮೂಲಕ 200 ಯುನಿಟ್ ಉಚಿತ, 2 ಸಾವಿರ ಪ್ರೋತ್ಸಾಹ ಧನ ನೀಡುವುದು ಖಚಿತ ಎಂದು ಘೋಷಿಸಿದ ನಂತರ ಬಿಜೆಪಿಯವರ ತಲೆ ಕೆಟ್ಟು ಹೋಗಿದೆ. ಮಹಿಳೆಯರಿಗೆ ಪ್ರೋತ್ಸಾಹ ಧನದ ಮೂಲಕ ವರ್ಷಕ್ಕೆ 24 ಸಾವಿರ, 200 ಯುನಿಟ್ ಉಚಿತ ವಿದ್ಯುತ್ ಮೂಲಕ ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ . ಗೃಹಿಣಿಯರಿಗೆ ಉಳಿತಾಯವಾಗುತ್ತದೆ. ಇಂತಹ ದೊಡ್ಡ ಯೋಜನೆ, ಜನರ ಹೃದಯ ತಲುಪುವ ಯೋಜನೆ ಘೋಷಿಸಿರುವುದರ ಬಗ್ಗೆ ಸಂಕಟದಿಂದ ಅಪಸ್ವರ ಎತ್ತಿದ್ದಾರೆ. ಈ ಸರ್ಕಾರದ ಆಯಸ್ಸು ಇನ್ನು 40 ದಿನ ಇದೆ. ನೀವು ಇನ್ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೋ ಅದನ್ನು ಮಾಡಿಕೊಂಡು ನಿಮ್ಮ ಟೆಂಟ್ ಖಾಲಿ ಮಾಡಿ. ನಾವು ಬಂದು ವಿಧಾನಸೌಧ ಸ್ವಚ್ಛ ಮಾಡುತ್ತೇವೆ. ಈ ಸರ್ಕಾರವನ್ನು ಜನರೇ ಓಡಿಸುತ್ತಾರೆ.

ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಬಂದಿದ್ದು, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ 35 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಳಿಸಿದ್ದಾರೆ. ಈಗ ಆರೋಪ ಮಾಡುವವರು ಕಳೆದ ಮೂರುವರೆ ವರ್ಷಗಳಿಂದ ಕಡಲೇಕಾಯಿ ತಿನ್ನುತ್ತಿದ್ದರಾ? ನಿಮಗೆ ಅಧಿಕಾರ ಇದ್ದಾಗ ತನಿಖೆ ಮಾಡದಂತೆ ತಡೆದಿದ್ದವರು ಯಾರು? ನಿಮ್ಮ ಅಧಿಕಾರ ಉಪಯೋಗಿಸಿಕೊಂಡು ತನಿಖೆ ಮಾಡಿಸಿ ಜನರ ಮುಂದೆ ಸತ್ಯಾಸತ್ಯತೆ ಇಡಬೇಕಾಗಿತ್ತು. ಈ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಸಿಕ್ಕಿದೆ. ಅದನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನೀವು ಹೇಳುವ 35 ಸಾವಿರ ಕೋಟಿ ಹಣ ನಮ್ಮ ನಾಯಕರ ಖಾತೆಗೆ ಬಂದಿದೆಯಾ? ವಿದೇಶಕ್ಕೆ ಹೋಗಿದೆಯಾ? ಹೇಳಿ. ಬಿಜೆಪಿಯವರು ಲಂಚ ತಿಂದು ಕಾಂಗ್ರೆಸ್ ಪಕ್ಷದ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಏನೂ ಆಗುವುದಿಲ್ಲ.

ಜನರ ಮನದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಮೂಡಿದೆ. ಬಿಜೆಪಿಯವರು, ಖಾಸಗಿ ಸಂಸ್ಥೆಗಳು, ಮಾಧ್ಯಮಗಳು ಸಮೀಕ್ಷೆಯಲ್ಲಿ ಬಿಜೆಪಿ ಸಂಖ್ಯಾ ಬಲ 60ರ ಮೇಲೆ ದಾಟುತ್ತಿಲ್ಲ. ನಮ್ಮದು 120-130 ಕ್ಷೇತ್ರಗಳು ಬರುತ್ತಿವೆ. ಇವು ನಿಜವಾಗುತ್ತದೋ ಸುಳ್ಳಾಗುತ್ತದೋ ಮುಂದಿನ ವಿಚಾರ. ಆದರೆ ಬಿಜೆಪಿಯವರಲ್ಲಿ ಯಡಿಯೂರಪ್ಪ- ಬೊಮ್ಮಾಯಿ, ಯತ್ನಾಳ್ – ನಿರಾಣಿ, ಯೋಗೇಶ್ವರ್, ಅಶೋಕ್, ಮಾಜಿ ಡಿಸಿಎಂ – ಹೀಗೆ ಬೇರೆ ಬೇರೆ ನಾಯಕರ ನಡುವೆ ಆಂತರಿಕ ಜಗಳ ಹೆಚ್ಚಾಗುತ್ತಿದೆ. ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುತ್ತೀರಲ್ಲ, ಬಿಜೆಪಿ ಪಕ್ಷದಲ್ಲಿ 32 ಗುಂಪುಗಳಿವೆ. ಇವೆಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರುಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ಪಕ್ಷದಲ್ಲಿದ್ದ ಸುಧಾಕರ್ ಅವರಿಂದ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಸಿದ್ದಾರೆ.

ನಿಮ್ಮ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಮಾತನಾಡಿದರು. ಪಿಪಿಇ ಕಿಟ್, ವ್ಯಾಕ್ಸಿನ್, ಔಷಧಿ ಹಗರಣ ಮಾಡಿದ್ದಾರೆ. ಇವುಗಳ ಬಗ್ಗೆ ಈ ಸರ್ಕಾರ ಮಾತನಾಡುತ್ತಿಲ್ಲ. ಪರಿಶಿಷ್ಟ ಜಾತಿ ಪಂಗಡದ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅರ್ಜಿ ಹಾಕದವರಿಗೆ ಹಣ ನೀಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದಾರೆ. ಈ ಅಧಿಕಾರಿ ನಿಮ್ಮ ಬೆಂಬಲ ಇಲ್ಲದೇ, ಅರ್ಜಿ ಹಾಕದವರಿಗೆ ಹಣ ನೀಡಲು ಸಾಧ್ಯವೇ? ಈ ರೀತಿ ದಲಿತರ ಹಣ ಲೂಟಿ ಮಾಡಿದ್ದೀರ… ಈ ಸರ್ಕಾರ ಮಠ ಮಾನ್ಯಗಳ ಹಣದಲ್ಲೂ ಕಮಿಷನ್ ಪಡೆದಿದ್ದು, ಈ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಪಡೆದಿದೆ. ಈ ಬ್ರ್ಯಾಂಡ್ ಅನ್ನು ವಿಶ್ವ ಮಟ್ಟದಲ್ಲೇ ಮಾರಾಟ ಮಾಡಬಹುದು.

ಬಿಜೆಪಿ ಸರ್ಕಾರ ಸುಮ್ಮನೆ ಬಜೆಟ್ ಮಂಡಿಸುವ ಪ್ರಯತ್ನ ಮಾಡುತ್ತಿದೆ. ಅವರು ಕಳೆದ ವರ್ಷಗಳಲ್ಲಿ ಮಂಡಿಸಿದ ಬಜೆಟ್ ನಲ್ಲಿ ಅರ್ಧದಷ್ಟು ಹಣ ವೆಚ್ಚ ಮಾಡಿಲ್ಲ. 26 ಸಂಸದರನ್ನು ಇಟ್ಟುಕೊಂಡು ಅವರನ್ನು ಕರೆದುಕೊಂಡು ಹೋಗಿ ಪ್ರಧಾನಿಗಳಿಗೆ ಭೇಟಿ ನೀಡಿ ರಾಜ್ಯಕ್ಕೆ ಒಂದು ಯೋಜನೆಯನ್ನು ಘೋಷಣೆ ಮಾಡಲಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಇಷ್ಟು ದಿನ ಮಾಡಲಾಗದಿದ್ದವರು ಈಗ ಏನು ಮಾಡಲು ಸಾಧ್ಯ? ನೆರೆ ಬಂದಾಗ ಸತ್ತವರಿಗೆ ಪರಿಹಾರ ನೀಡಲಿಲ್ಲ, ಕೋವಿಡ್ ಸಮಯದಲ್ಲಿ ಸತ್ತವರಿಗೆ ಪ್ರಮಾಣ ಪತ್ರ ನೀಡಿ ಪರಿಹಾರ ನೀಡಲಿಲ್ಲ. ಕೋವಿಡ್ ಸಮಯದಲ್ಲಿ ಬಡವರಿಗೆ ನೆರವಾಗಲಿಲ್ಲ. ಎಲ್ಲರ ಮುಂದೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಎಲ್ಲ ಸಮುದಾಯಗಳಿಗೂ ಮೀಸಲಾತಿ ಹೆಸರಲ್ಲಿ ತಲೆಗೆ ತುಪ್ಪ ಸವರುತ್ತಿದ್ದಾರೆ. ಅದನ್ನು ನೋಡಲು ಆಗಲ್ಲ, ಸುವಾಸನೆ , ರುಚಿಯೂ ಅನುಭವಿಸದ ಪರಿಸ್ಥಿತಿ ಮಾಡಿದ್ದಾರೆ ಎಂದು ಸ್ವಾಮೀಜಿಗಳು ಚೆನ್ನಾಗಿ ವರ್ಣಿಸಿದ್ದಾರೆ. ಜನರಿಗೆ ಈ ಸರ್ಕಾರ ಯಾಕೆ ಇಷ್ಟು ಮೋಸ ಮಾಡುತ್ತಿದೆ?

ಸಚಿವ ಸುಧಾಕರ್ ಅವರ ತಲೆ ಮೇಲೆ ಭ್ರಷ್ಟಾಚಾರದ ಆರೋಪಗಳ ಪರ್ವತವೇ ಇದೆ. ಆದರೂ ಮಾಧುಸ್ವಾಮಿ, ಮುಖ್ಯಮಂತ್ರಿಗಳು ಯಾಕೆ ಮಾತನಾಡುತ್ತಿಲ್ಲ? ಮುಖ್ಯಮಂತ್ರಿಗಳು ಅಥವಾ ಬಿಜೆಪಿಯ ಇತರ ಮುತ್ತುರತ್ನಗಳು ಕಾರಜೋಳ, ಉಪಮುಖ್ಯಮಂತ್ರಿಯಾಗಿದ್ದವರ ಮೂಲಕ ಈ ವಿಚಾರವಾಗಿ ಪತ್ರಿಕಾಗೋಷ್ಠಿ ಮಾಡದೇ, ಸುಧಾಕರ್ ಅವರಿಂದಲೇ ಮಾಡಿಸಿದ್ದು ಯಾಕೆ? ಕೇವಲ ಆಪರೇಷನ್ ಕಮಲದಿಂದ ಬಂದವರಿಂದಲೇ ಮಾತನಾಡಿಸುತ್ತಿರುವುದೇಕೆ? ನಾವು ಅವರನ್ನೇನು ಪಕ್ಷಕ್ಕೆ ತೆಗೆದುಕೊಳ್ಳಲು ಹೋಗುವುದಿಲ್ಲ. ಅವರಿಗೆ ನಮ್ಮ ಬಸ್ ನಲ್ಲಿ ಜಾಗ ಇಲ್ಲ. ಹೀಗಾಗಿ ನೀವು ತಲೆ ಕೆಡಿಸಿಕೊಳ್ಳದೇ ನಿಮ್ಮ ಮೂಲ ಬಿಜೆಪಿಗರಿಂದ ಮಾತನಾಡಿಸಿ. ನಿಮ್ಮ ಮೂಲ ಬಿಜೆಪಿಗರ ವಿರುದ್ಧ ಯಾವುದೇ ಪ್ರಕರಣ ದಾಖಲಾದರೆ ಕೇವಲ ಮೂರು ತಿಂಗಳಲ್ಲಿ ಬಿ ರಿಪೋರ್ಟ್ ಹಾಕುತ್ತಾರೆ. ಇದು ಬಿ ರಿಪೋರ್ಟ್ ಸರ್ಕಾರ. ಈ ಸರ್ಕಾರ ರಾಜ್ಯಕ್ಕೆ ಕಳಂಕ ತಂದಿದೆ.’

ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಪಟ್ಟಿ ಮಾಡಿದಂತೆ, ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಆರೋಪಪಟ್ಟಿ ಮಾಡುತ್ತಿವೆ ಎಂದು ಕೇಳಿದಾಗ, ‘ಬಿಜೆಪಿಯವರು ಕಾಪಿ ಮಾಡುವುದರಲ್ಲಿ ನಿಸ್ಸೀಮರು. ಪಿಎಸ್ಐ, ಉಪಕುಲಪತಿ, ಜೆಇಇ ನೇಮಕಾತಿಯಲ್ಲಿ ಕಾಪಿ ಮಾಡಿ ಅಕ್ರಮ ಮಾಡಿರುವುದನ್ನು ನೋಡಿದ್ದೇವೆ. ಇಂತಹ ಹೈಟೆಕ್ ಅಕ್ರಮ ಎಲ್ಲಾದರೂ ನಡೆದಿದೆಯೇ? ಓದುವ ಮಕ್ಕಳ ತಲೆಯನ್ನು ಕೆಡಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.’

ಸದಾಶಿವನಗರದಲ್ಲಿ ನೀಡಿದ ಪ್ರತಿಕ್ರಿಯೆ:

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಮಯದ ಅಭಾವವಿದೆ. ಜ.27ರಂದು ನಾವು ರಾಮನಗರದಲ್ಲಿ ನಡೆಯಬೇಕಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಿದ್ದು, ಅಂದು ನಮ್ಮ ಪಕ್ಷದ ಗ್ಯಾರಂಟಿ ಯೋಜನೆ, ಪ್ರಜಾಧ್ವನಿ ಯಾತ್ರೆ ಸಮಯದಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ಪ್ರಚಾರದ ರೂಪುರೇಷೆಗಳ ವಿಚಾರವಾಗಿ ಎಲ್ಲ ಬ್ಲಾಕ್ ಕಾಂಗ್ರೆಸ್ ನಾಯಕರು, ಪರಾಜಿತ ಅಭ್ಯರ್ಥಿಗಳು ಹಾಗೂ ನೂತನ ಪ್ರಚಾರ ಸಮಿತಿಯ ಜತೆ ಸಭೆ ಆಯೋಜಿಸಿದ್ದೇವೆ. ಈ ಸಭೆಗೆ ಪಕ್ಷದ 1 ಸಾವಿರ ನಾಯಕರನ್ನು ಆಹ್ವಾನಿಸಿದ್ದೇವೆ. ಈ ಸಭೆಯಲ್ಲಿ ನಮ್ಮ ನಾಯಕರಿಗೆ ಟಾಸ್ಕ್ ನೀಡಲಾಗುವುದು.

ರಾಮನಗರ ಬೆಂಗಳೂರಿನ ಪಕ್ಕದಲ್ಲಿದ್ದು, ನನ್ನ ವಿಧಾನಸಭಾ ಕ್ಷೇತ್ರ ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ನಾವು ಯಾವಾಗ ಬೇಕಾದರೂ ಅಲ್ಲಿ ಯಾತ್ರೆ ಮಾಡಬಹುದು. ಅಧಿವೇಶನ ಆರಂಭವಾದ ನಂತರ ಬಿಡುವಿರುವ ಒಂದು ದಿನ ಹೋಗಿಯೂ ಯಾತ್ರೆ ಮಾಡಬಹುದು. ಹೀಗಾಗಿ ರಾಮನಗರದ ಯಾತ್ರೆಯನ್ನು ಮುಂದಕ್ಕೆ ಹಾಕಿದ್ದೇವೆ.

ಅಮಿತ್ ಶಾ ಅವರ ರಾಜ್ಯ ಪ್ರವಾಸ ಹಾಗೂ ಬೆಂಗಳೂರಿನಲ್ಲಿ ಪ್ರಧಾನಿಗಳ ರೋಡ್ ಶೋ ಮಾಡುವಂತೆ ಬಿಜೆಪಿ ನಾಯಕರ ಮನವಿ ಬಗ್ಗೆ ಕೇಳಿದಾಗ, ‘ಅವರು ದಿನನಿತ್ಯ ರಾಜ್ಯಕ್ಕೆ ಬಂದು ರೋಡ್ ಶೋ ಮಾಡಲಿ. ಅವರು ರೋಡ್ ಶೋ ಮಾಡಿ, 40% ಕಮಿಷನ್ ಆರೋಪ, ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ? ಜನರ ಖಾತೆಗೆ 15 ಲಕ್ಷ ಯಾವಾಗ ಹಾಕುತ್ತಾರೆ? ರೈತರ ಆದಾಯ ಯಾವಾಗ ಡಬಲ್ ಆಗುತ್ತದೆ? ಎಂಬ ವಿಚಾರವಾಗಿ ಮಾತನಾಡಲಿ. ಅವರು ಏನಾದರೂ ಮಾಡಲಿ. ಅವರ ಮಂತ್ರಿಗಳು, ನಾಯಕರ ಮಾತುಗಳಿಗೆ ಅವರು ಉತ್ತರ ನೀಡಲಿ. ಅವರ ನಾಯಕನೊಬ್ಬ ಪ್ರತಿ ಮತದಾರನಿಗೆ ಹಣ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾನೆ. ಆದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ? ಬಿಜೆಪಿಯವರು ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರತಿ ಮತಕ್ಕೆ 6 ಸಾವಿರ ರೂ ನೀಡಿ ಮತಗಳನ್ನು ಖರೀದಿ ಮಾಡುತ್ತಾರಾ? ಇದೇನಾ ಬಿಜೆಪಿ ಸಂಸ್ಕೃತಿ?’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಯಡಿಯೂರಪ್ಪನವರು ಏನಾದರೂ ಹೇಳಿಕೊಳ್ಳಲಿ. ಹೈಕಮಾಂಡ್ ಒಪ್ಪಿಗೆ ನೀಡಿದರೆ, ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಒಬ್ಬ ನಾಯಕ ತನ್ನ ಆಸೆ ಹೇಳಿಕೊಳ್ಳಬಾರದಾ? ಯಡಿಯೂರಪ್ಪನವರು ತಮ್ಮ ಹಾಗೂ ತಮ್ಮ ಮಗನ ಭವಿಷ್ಯದ ಬಗ್ಗೆ ನೋಡಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ’ ಎಂದು ತಿರುಗೇಟು ನೀಡಿದರು.

ಸ್ತ್ರೀಶಕ್ತಿ ಸಂಘಗಳ ಸಾಲದ ಪ್ರಮಾಣ ಹೆಚ್ಚಳದ ಘೋಷಣೆ ಪಕ್ಷದ ನಾಲ್ಕನೇ ಗ್ಯಾರಂಟಿ ಯೋಜನೆಯೇ ಎಂದು ಕೇಳಿದಾಗ, ‘ಅದನ್ನು ನಮ್ಮ ಗ್ಯಾರಂಟಿ ಯೋಜನೆ ಪಟ್ಟಿಯ ಕಾರ್ಯಕ್ರಮ ಎಂದು ಹೇಳಿಲ್ಲ. 10 ಕೆ.ಜಿ ಅಕ್ಕಿ ನೀಡುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇನ್ನುಳಿದ ಯೋಜನೆಗಳನ್ನು ಘೋಷಿಸಲು ಇನ್ನು ಸಮಯಾವಕಾಶ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಘೋಷಿಸುತ್ತೇವೆ’ ಎಂದು ಸ್ಪಷ್ಟನೆ ನೀಡಿದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *