ಹಾವೇರಿ: ದೇವಸ್ಥಾನ ಪ್ರವೇಶಿಸಿದ ತಾಯಿ, ಮಗನ ಮೇಲೆ ಹಲ್ಲೆ ನಡೆಸಿದ ಸವರ್ಣೀಯರು.
ಕರ್ನಾಟಕದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗೆ ವಿನಯ ಸಾಮರಸ್ಯ ಯೋಜನೆ ಜಾರಿಯಲ್ಲಿದ್ದರೂ ಹಾವೇರಿಯಲ್ಲೊಂದು ಅಸ್ಪೃಶ್ಯತೆ ಪ್ರಕರಣ ಬೆಳಕಿಗೆಬಂದಿದೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿಯಲ್ಲಿ ದೇವಸ್ಥಾನ ಪ್ರವೇಶಿಸಿದ್ದ ದಲಿತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಸವರ್ಣೀಯರು ಹಲ್ಲೆ ನಡೆಸಿ ದಾಂದಲೆ ನಡೆಸಿದ್ದಾರೆ. ಹೆಮ್ಮವ್ವ ಮಲ್ಲಾಡದ ಮತ್ತು ಇವರ ಮಗ ರಮೇಶ್ ಮಲ್ಲಾಡದ ಅವರು ಜಾತ್ರಾ ಮಹೋತ್ಸವದ ಪ್ರಯುಕ್ತ ನಂದಿಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ. ಇಲ್ಲಿ ದೇವರ ದರ್ಶನ ಪಡೆಯುವ ನಿಟ್ಟಿನಲ್ಲಿ ದೇಗುಲದ ಒಳಗೆ ಪ್ರವೇಶಿಸಲು ಮುಂದಾದಾಗ ತಡೆದ ಸವರ್ಣೀಯರು ಒಳ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸವರ್ಣೀಯರ ಎಚ್ಚರಿಕೆಗೆ ಜಗ್ಗದ ತಾಯಿ ಮತ್ತು ಮಗ ಇಬ್ಬರೂ ದೇಗುಲದ ಒಳಗೆ ಪ್ರವೇಶ ಮಾಡಿ ಬಸವೇಶ್ವರನ ದರ್ಶನ ಪಡೆದಿದ್ದಾರೆ. ಆದರೆ ದಲಿತರು ಬಸವೇಶ್ವರ ದೇಗುಲ ಪ್ರವೇಶಿಸಿದ್ದಕ್ಕೆ ಆಕ್ರೋಶಗೊಂಡ ಸವರ್ಣೀಯರು, ಗುಂಪು ಕಟ್ಟಿಕೊಂಡು ಹೆಮ್ಮವ್ವ ಮಲ್ಲಾಡದ ಮನೆ ಬಳಿ ಬಂದು ದಾಂದಲೆ ನಡೆಸಿದ್ದಲ್ಲದೆ, ಹೆಮ್ಮವ್ವ ಮತ್ತು ಮಗ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಮನೆ ಮೇಲೂ ದಾಳಿ ನಡೆಸಿ ಹೆಂಚುಗಳು ಹಾನಿಗೊಳಿಸಲಾಗಿದ್ದು, ಬೈಕ್ ಜಖಂಗೊಳಿಸಲಾಗಿದೆ. ಘಟನೆ ನಂತರ ಹಲಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ-ಮಗ ಸುಮಾರು 30 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
-ನಂದಿನಿ ಮೈಸೂರು