
ಬೆಂಗಳೂರು : ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಮೃತಪಟ್ಟ ನೌಕರ; ಬೆಸ್ಕಾಂ ನಿರ್ಲಕ್ಷ್ಯ ಕಾರಣ ಎಂದ ಕುಟುಂಬ
ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡುತಿದ್ದ 26 ವರ್ಷದ ಲೈನ್‌ಮ್ಯಾನ್ ಒಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ಸೋಮವಾರ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡುತ್ತಿದ್ದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) 26 ವರ್ಷದ ಲೈನ್‌ಮ್ಯಾನ್ ಗೌತಮ್ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.
ಮೃತ ಗೌತಮ್ ಅವರು ಕಳೆದ ಆರು ವರ್ಷಗಳಿಂದ ಬೆಸ್ಕಾಂನಲ್ಲಿ ಖಾಯಂ ಉದ್ಯೋಗಿಯಾಗಿದ್ದು, ಭಾನುವಾರ ರಾತ್ರಿ ಪಾಳಿಯಲ್ಲಿದ್ದರು. ಟ್ರಾನ್ಸ್‌ಫಾರ್ಮರ್ ಸಮಸ್ಯೆಯಿಂದ ವಿದ್ಯುತ್ ಕಡಿತವಾಗಿದೆ ಎಂಬ ದೂರಿನ ಮೇರೆಗೆ ತನ್ನ ಸಹೋದ್ಯೋಗಿ ಸಿದ್ದರಾಮ ಜೊತೆಗೆ ಸೋಮವಾರ ದುರಸ್ಥಿ ಸ್ಥಳಕ್ಕೆ ತಲುಪಿದರು. ಲೈನ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ ನಂತರ ಹಾಳಗಿದ್ದ ಲೈನ್ ಸರಿ ಮಾಡಲು ಗೌತಮ್ ಕಂಬಕ್ಕೆ ಹತ್ತಿದ್ದರು. ಆದರೆ ವಿದ್ಯುತ್ ಸ್ವಿಚ್ ಆಫ್ ಆಗದ ಕಾರಣ ಮತ್ತೊಂದು ವಿದ್ಯುತ್ ತಂತಿ ತಗುಲಿದೆ. ತೀವ್ರ ಸುಟ್ಟ ಗಾಯಗಳಿಂದ ಕಂಬದಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಯೋಜನವಾಗಿಲ್ಲ.
ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಮೃತರ ಕುಟುಂಬಸ್ಥರು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದಿದ್ದಾರೆ.
ಮೃತನ ಗೌತಮ್ ತಂದೆ ರಂಗಸ್ವಾಮಿ, “ಬೆಸ್ಕಾಂ ಕೆಲಸದ ಸಮಯದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಬೆಸ್ಕಾಂ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ನನ್ನ ಮಗ ಪ್ರಾಣ ಕಳೆದುಕೊಂಡಿದ್ದಾರೆ.ಅವರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ಒದಗಿಸಿರಲಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ, ಅಧಿಕಾರಿಯೊಬ್ಬರು ತಪ್ಪಾದ ವಿದ್ಯುತ್ ಲೈನ್‌ನಲ್ಲಿ ವಿದ್ಯುತ್ ಸ್ವಿಚ್ ಆಫ್ ಮಾಡಲು ಆದೇಶಿಸಿದ ಕಾರಣ ಈ ಘಟನೆ ಸಂಭವಿಸಿದೆ” ಎಂದು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಎಂದು ಭಾರತೀಯ ದಂಡ ಸಂಹಿತೆಯ ಕಲಂ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅರ್ಥಿಂಗ್ ಮಾಡದೆ ರಿಪೇರಿ ಮಾಡಲು ಹೋದ ಕಾರಣ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಗೌತಮ್ ಸಾವನ್ನಪ್ಪಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. “ದುರಸ್ತಿ ಕಾರ್ಯ ನಡೆಸುತ್ತಿರುವಾಗ ಒಂದು ಲೈನ್ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅವರು ಅರ್ಥಿಂಗ್ ಮಾಡದೆ ಕೆಲಸ ಮಾಡುತ್ತಿದ್ದ ಕಾರಣ ಘಟನೆ ಸಂಭವಿಸಿದೆ. ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ತಗುಲಿದ ತಕ್ಷಣ ಗೌತಮ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ” ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಗೌತಮ್ ಅವರಿಗೆ ಬೆಸ್ಕಾಂನಿಂದ ಸುರಕ್ಷತಾ ಸಾಧನಗಳನ್ನು ಒದಗಿಸಿಲ್ಲ ಎಂಬ ಮೃತರ ಕುಟುಂಬ ಆರೋಪವನ್ನು ಬೆಸ್ಕಾಂ ಅಧಿಕಾರಿಗಳು ನಿರಾಕರಿಸಿದ್ದಾರೆ. “ಕೈಗ ವಸ್ತುಗಳು ಮತ್ತು ಬೂಟುಗಳಂತಹ ಸುರಕ್ಷತಾ ಸಾಧನಗಳನ್ನು ಪ್ರತಿ ವರ್ಷ ಎಲ್ಲಾ ಲೈನ್‌ಮೆನ್‌ಗಳಿಗೆ ಒದಗಿಸಲಾಗುತ್ತದೆ. ಇದರ ಜೊತೆಗೆ ಅಗತ್ಯವಿದ್ದರೆ ಇತರ ಸಮಯಗಳಲ್ಲಿಯೂ ಸಹ ನೀಡಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಕಾರ್ಯ ಕೈಗೊಳ್ಳುವ ಮುನ್ನ ಲೈನ್‌ಮೆನ್‌ಗಳು ಮೂರು ಹಂತದ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸಮರ್ಪಕ ಕ್ರಮಕೈಗೊಳ್ಳಬೇಕು ಎಂದು ವಿದ್ಯುತ್ ಇಲಾಖೆಯ ಮಾಜಿ ನೌಕರರೊಬ್ಬರು ತಿಳಿಸಿದ್ದಾರೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.