20 ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾಗಿರುವ 20 ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾಗುವ ನಿತೀಶ್ ಕುಮಾರ್ ಕನಸು ಎಂದಿಗೂ ನನಸಾಗುವುದಿಲ್ಲ : ಅಮಿತ್ ಶಾ

20 ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾಗಿರುವ 20 ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾಗುವ ನಿತೀಶ್ ಕುಮಾರ್ ಕನಸು ಎಂದಿಗೂ ನನಸಾಗುವುದಿಲ್ಲ : ಅಮಿತ್ ಶಾ

ಬಿಹಾರದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಅಮಿತ್ ಶಾ, ಅನುಕೂಲಕ್ಕೆ ತಕ್ಕಂತೆ ನಿಷ್ಠೆಯನ್ನು ಬದಲಾಯಿಸಿಕೊಳ್ಳುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು, “ಪಲ್ಟು ಬಾಬು,” ಎಂದು ಕರೆದು, 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳಿಗೆ ಕಾರಣವಾಗಿರುವ 20 ಭ್ರಷ್ಟ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾಗುವ ನಿತೀಶ್ ಕುಮಾರ್ ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಹೇಳಿದರು.

ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ನಿತೀಶ್ ಕುಮಾರ್ ಅವರ ನಡವಳಿಕೆಯು ಗೋಸುಂಬೆಯನ್ನು ಹೋಲುವುದರಿಂದ ಬಿಹಾರದ ಜನರು ಅವರನ್ನು ನಂಬಿ ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಅವರಿಗೆ ನೀಡಬಾರದು ಎಂದು ಹೇಳಿದರು.

“ಮತ್ತೆ ಮತ್ತೆ ಪಕ್ಷ ನಿಷ್ಠೆಯನ್ನು ಬದಲಾಯಿಸುವ ನಾಯಕನನ್ನು ನಂಬಬಹುದೇ? ಇಂತಹ ವ್ಯಕ್ತಿಯ ಕೈಗೆ ಬಿಹಾರದ ಆಡಳಿತ ನೀಡಬೇಕಾ? ಅದು ಅವರಿಗೂ ಗೊತ್ತು. ಅದಕ್ಕಾಗಿಯೇ ಅವರು ದೇಶದ ಪ್ರಧಾನಿಯಾಗಬೇಕೆಂದು ಕಾಂಗ್ರೆಸ್ ಮನೆ ಮುಂದೆ ಕುಳಿತಿದ್ದಾರೆ. ಆದರೆ, ಅವರು ಪ್ರಧಾನಿಯಾಗಲು ಬಯಸುವುದಿಲ್ಲ, ಅವರು ಈ ವಯಸ್ಸಿನಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಮೋಸಗೊಳಿಸುತ್ತಿದ್ದಾರಷ್ಟೆ. ಅವರು ಇಲ್ಲಿಯೇ ಬಿಹಾರದಲ್ಲಿ ಉಳಿಯಲು ಬಯಸುತ್ತಾರೆ, ಮತ್ತು ಅದಕ್ಕಾಗಿಯೇ ಬಿಜೆಪಿಯ ಎಲ್ಲಾ ಪ್ರತಿಸ್ಪರ್ಧಿಗಳನ್ನು ಒಟ್ಟುಗೂಡಿಸುತ್ತಿದ್ದಾರೆ ಎಂದು ಶಾ ಹೇಳಿದರು.

ಕಳೆದ ವಾರ ಪಾಟ್ನಾದಲ್ಲಿ ನಿತೀಶ್ ಕುಮಾರ್ ಹಮ್ಮಿಕೊಂಡಿದ್ದ ಪ್ರತಿಪಕ್ಷ ನಾಯಕರ ಸಭೆಯನ್ನು ಉಲ್ಲೇಖಿಸಿದ ಶಾ, “20 ಕ್ಕೂ ಹೆಚ್ಚು ಪಕ್ಷಗಳು ಒಗ್ಗೂಡಲು ಒಪ್ಪಿಕೊಂಡಿರುವುದು ನಿಜ. ಆದರೆ 20 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಗರಣಗಳಿಗೆ ಈ ಎಲ್ಲಾ ಪಕ್ಷಗಳೇ ಒಟ್ಟಾಗಿ ಜವಾಬ್ದಾರವಾಗಿವೆ ಎಂಬುದನ್ನು ಸಹ ಗಮನಿಸಬೇಕು ಎಂದರು.

ಕೇಂದ್ರದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ ಕೆಲಸಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನಿತೀಶ್ ವಿರುದ್ಧ ಶಾ ವಾಗ್ದಾಳಿ ಮುಂದುವರೆಸಿದರು.

“ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಪಲ್ಟು ಬಾಬು ನಿತೀಶ್ ಕುಮಾರ್ ಕೇಳುತ್ತಿದ್ದಾರೆ. ನೀವು ಯಾರೊಂದಿಗೆ ಕುಳಿತಿದ್ದೀರಿ ಮತ್ತು ಯಾರಿಂದಾಗಿ ನೀವು ಮುಖ್ಯಮಂತ್ರಿಯಾಗಿದ್ದೀರೋ ಅವರ ಬಗ್ಗೆ ಸ್ವಲ್ಪವಾದರೂ ಗೌರವವಿರಲಿ. ಪ್ರಧಾನಿ ಮೋದಿ ಅವರು ಈ ಒಂಬತ್ತು ವರ್ಷಗಳಲ್ಲಿ ದೇಶಾದ್ಯಂತ ಸಾಕಷ್ಟು ಕೆಲಸ ಮಾಡಿದ್ದಾರೆ.” ಮೋದಿಯವರ ಇತ್ತೀಚಿನ ವಿದೇಶಿ ಭೇಟಿಗಳು ದೇಶದ ಘನತೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿವೆ. ಮತ್ತು “ಈ ಗೌರವ ಕೇವಲ ಬಿಜೆಪಿಯದಲ್ಲ, ಬಿಹಾರ ಸೇರಿದಂತೆ ಭಾರತದ ಜನರು ಪರೋಕ್ಷವಾಗಿ ಈ ಗೌರವಕ್ಕೆ ಭಾಜನರಾಗಿದ್ದಾರೆ.” ಸೋನಿಯಾ-ಮನಮೋಹನ್ ಆಡಳಿತದ ದಿನಗಳಿಂದ ವಿಮುಖವಾಗಿ, ಮೋದಿ ಸರ್ಕಾರವು ಉರಿ ಮತ್ತು ಬಾಲಾಕೋಟ್ ದಾಳಿಗಳ ತತ್‌ಕ್ಷಣವೇ ಸರ್ಜಿಕಲ್ ಸ್ಟ್ರೈಕ್‌ಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿತು.

ನಿತೀಶ್‌ಗೆ ಪ್ರತಿ ಪ್ರಶ್ನೆಯನ್ನು ಹಾಕುತ್ತ ಶಾ, ಅನಕೂಲಕ್ಕೆ ತಕ್ಕಂತೆ ಮೈತ್ರಿ ಪಾಲುದಾರರನ್ನು ಬದಲಾಯಿಸುವುದರ ಹೊರತಾಗಿ ರಾಜ್ಯಕ್ಕೆ ನಿಮ್ಮ ಕೊಡುಗೆಯೇನು ಎಂದು ಅವರನ್ನು ಕೇಳಿದರು. ನಿತೀಶ್ ಕುಮಾರ್ ಅವರಿಂದಲೇ ಬಿಹಾರದಲ್ಲಿ ಗೂಂಡಾ ರಾಜ್ ಮತ್ತೆ ತೆಲೆ ಎತ್ತಿದೆ; ಮರಳು, ಶಸ್ತ್ರಾಸ್ತ್ರ ಮತ್ತು ಮದ್ಯದ ಮಾಫಿಯಾ ರಾಜಾರೋಷವಾಗಿ ನಡಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಬಿಹಾರದ ಜನರು ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಭ್ರಷ್ಟ ನಾಯಕರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದ ಗೃಹ ಸಚಿವ ಶಾ, ಕೇಂದ್ರದಲ್ಲಿ ಪ್ರಧಾನಿ ಮೋದಿಯವರಿಗೆ ಮೂರನೇ ಅವಧಿಯನ್ನು ಖಚಿತಪಡಿಸಿಲು ಬಿಜೆಪಿಗೆ ಸಾಮೂಹಿಕವಾಗಿ ಮತ ನೀಡುವಂತೆ ಬಿಹಾರದ ಜನರಲ್ಲಿ ವಿನಂತಿಸಿದರು.

Leave a Reply

Your email address will not be published. Required fields are marked *