
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್ ಇನ್ನೂ ಬಂದ್
ಕಲಬುರಗಿ : ಹಸಿವು ಮುಕ್ತ ಕರ್ನಾಟಕ ಎಂಬ ಕಲ್ಪನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟಿನ್ ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಅದ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ತವರು ಲೋಕಸಭಾ ಕ್ಷೇತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜಿಲ್ಲಾ ಕೇಂದ್ರವಾಗಿರುವ ಕಲಬುರಗಿಯಲ್ಲಿಯೇ ಇನ್ನೂ ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲ.
ಬಂದ್ ಆಗಿಯೇ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೇಲೆ ಬಿಜೆಪಿ ಬಂದ್ ಮಾಡಿರುವ ಇಂದಿರಾ ಕ್ಯಾಂಟಿನ್ ಪುನಃ ಆರಂಭಿಸಲು ಸೂಚನೆ ನೀಡಿದ್ದಾರೆ. ಆದರೆ, ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 7 ಇಂದಿರಾ ಕ್ಯಾಂಟಿನ್ಳು ಇನ್ನೂ ಆರಂಭವೇ ಆಗಿಲ್ಲ. ಕಲಬುರಗಿ ನಗರದಲ್ಲಿನ ಏಳು ಇಂದಿರಾ ಕ್ಯಾಂಟೀನ್‌ಗಳು ಕಳೆದ 10 ತಿಂಗಳಿಂದ ಬಂದ್ ಆಗಿದ್ದು, ಮಹಾನಗರ ಪಾಲಿಕೆ ಮತ್ತು ಗುತ್ತಿಗೆದಾರರ ನಡುವಿನ ಗುದ್ದಾಟದಿಂದ ಕ್ಯಾಂಟಿನ್‌ಗಳು ಮುಚ್ಚಲ್ಪಟ್ಟಿವೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಮೂಲದ ಸೆಪ್ಟಾಏಜೆನ್ಸಿ ಕಂಪನಿಯು ಇವುಗಳ ಟೆಂಡರ್ ಪಡೆದಿತ್ತು. ಆದರೆ ಕಲಬುರಗಿ ಮಹಾನಗರ ಪಾಲಿಕೆಯು ಸುಮಾರು ಏಳು ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಕೆಲ ದಿನಗಳ ಹಿಂದೆ ಬಾಕಿಯಿರುವ ಮೊತ್ತದ ಪೈಕಿ ಕೇವಲ ಐವತ್ತು ಲಕ್ಷ ಮಾತ್ರ ಪಾವತಿ ಮಾಡಿದೆ. ಪ್ರತಿ ದಿನ ನಗರದಲ್ಲಿರುವ ಇಂದಿರಾ ಕ್ಯಾಂಟಿನ್ಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಊಟ, ಉಪಹಾರ ಸೇವನೆ ಮಾಡುತ್ತಿದ್ದರು. ಸದ್ಯ ಬಾಕಿ ಹಣ ಪಾವತಿಸಿದರೆ ನಾವು ಕ್ಯಾಂಟೀನ್ ಆರಂಭ ಮಾಡುತ್ತೇವೆ ಎಂದು ಕ್ಯಾಂಟಿನ್ ಗುತ್ತಿಗೆ ಪಡೆದವರು ಹೇಳುತ್ತಿದ್ದಾರೆ.
ಪಾಲಿಕೆಯವರು ಹಣ ಇಲ್ಲವೆಂದು ಹೇಳಿ ತಮಗೆ ಬಿಲ್ ನೀಡಿಲ್ಲ ಎಂದು ಟೆಂಡರ್ ಪಡೆದವರು ಹೇಳುತ್ತಿದ್ದಾರೆ. ಇನ್ನು ಬಿಲ್ ಮೊತ್ತದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಹೀಗಾಗಿ ಬಿಲ್ ವಿಳಂಭವಾಗುತ್ತಿದೆವೆಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಒಟ್ಟಾರೆ ಅಧಿಕಾರಿ ಮತ್ತು ಗುತ್ತಿಗೆದಾರರ ಜಗಳದಿಂದ ಬಡವರಿಗೆ ಹಸಿವು ನೀಗಿಸುವ ಕೇಂದ್ರವಾಗಿರುವ ಇಂದಿರಾ ಕ್ಯಾಂಟಿನ್ ಬಂದ್ ಆಗಿರುವುದು ದುರಂತ. ಬೆಂಗಳೂರು ಮೂಲದ ಸೆಪ್ಟಾಏಜೆನ್ಸಿ ನಗರದಲ್ಲಿನ ಇಂದಿರಾ ಕ್ಯಾಂಟೀನ್ ನಿರ್ವಹಿಸುತ್ತಿತ್ತು. ಕಲಬುರಗಿಯಲ್ಲಿ 30 ತಿಂಗಳಿಂದ ಕ್ಯಾಂಟೀನ್ ನಡೆಸಿದರೂ ಈ ಸಂಸ್ಥೆಗೆ ಪಾಲಿಕೆಯವರು ಹಣ ಪಾವತಿಸಿಲ್ಲ ಎನ್ನಲಾಗಿದೆ. ಬಾಕಿ ಹಣ ಬಿಡುಗಡೆಯಾಗದ್ದರಿಂದ ಈ ಸೇವೆ ಪುನಾರಂಭಗೊಂಡಿಲ್ಲ.
ಸೆಪ್ಟಾಏಜೆನ್ಸಿ ನೌಕರ ಬಸಲಿಂಗ ಬಾದರ್ಲಿ ಅವರ ಪ್ರಕಾರ ಪಾಲಿಕೆಯಿಂದ ತಮ್ಮ ಏಜೆನ್ಸಿಗೆ 7.30 ಕೋಟಿ ರೂ. ಹಣ ಬರಬೇಕು. ಇದಲ್ಲದೆ ಕ್ಯಾಂಟಿನ್‌ನಲ್ಲಿ ಕೆಲಸದಲ್ಲಿರುವ ಸಿಬ್ಬಂದಿಗೆ ಕಳೆದ 5 ತಿಂಗಳಿದ ವೇತನ ನೀಡಿಲ್ಲ. ಭಾರಿ ಮೊತ್ತದ ಬಿಲ್ ಬಾಕಿ ಉಳಿದಾಗ ನಾವೇನು ಮಾಡಬೇಕು? ಹೇಗೆ ನಿಭಾಯಿಸಬೇಕು? ಅನಿವಾರ್ಯವಾಗಿ ಇಂದಿರಾ ಕ್ಯಾಂಟಿನ್ ಬಾಗಿಲು ಮುಚ್ಚಬೇಕಾಗಿ ಬಂದಿದೆ. ಏತನ್ಮಧ್ಯೆ ಪಾಲಿಕೆಯಿಂದ ಇಂದಿರಾ ಕ್ಯಾಂಟಿನ್ ಪುನಃ ಸೇವೆಗೆ ಅಣಿಗೊಳಿಸಿ ಎಂದು ಆದೇಶಿಸಲಾಗುತ್ತಿದೆಯಾದರೂ ಬಾಕಿ ಹಣ ಮಾತ್ರ ಬಿಡುಗಡೆಗೆ ಪಾಲಿಕೆ ಮನಸ್ಸು ಮಾಡುತ್ತಿಲ್ಲ. ಈಚೆಗಷ್ಟೇ 50 ಲಕ್ಷ ರು. ಬಿಡುಗಡೆ ಮಾಡಿರುವ ಪಾಲಿಕೆ ಇನ್ನೂ .6.80 ಕೋಟಿ ಹಾಗೆ ಉಳಿಸಿಕೊಂಡಿದೆ. ನಾವು ಹೊರಗಡೆ ಕೊಡುವ ಮೊತ್ತವೇ .3 ಕೋಟಿ ಇದೆ. ಹೀಗಿರುವಾಗ ಪಾಲಿಕೆ ನೀಡಿರುವ 50 ಲಕ್ಷ ಯಾವುದಕ್ಕೆ ಸಾಲುವುದಿಲ್ಲ ಎನ್ನುತ್ತಾರೆ.
ನಿತ್ಯ ಜನ ಬಂದು ಕ್ಯಾಂಟಿನ್ ಯಾವಾಗ ಪುನಃ ಆರಂಭವಾಗುತ್ತದೆ ಎಂದು ಕೇಳುತ್ತಿದ್ದಾರೆ. ನಮಗೆ ಒತ್ತಡ ಹೆಚ್ಚುತ್ತಿದ್ದರೂ ನಾವು ಕ್ಯಾಂಟಿನ್ ಸೇವೆ ಆರಂಭಿಸಲಾಗದೆ ತೊಳಲಾಡುವಂತಾಗಿದೆ. ಇದಕ್ಕೆಲ್ಲ ಪಾಲಿಕೆಯಿಂದ ಬರಬೇಕಾದಂತಹ .7.30 ಕೋಟಿ ಬಾರದೆ ಇರುವುದೇ ಮೂಲ ಕಾರಣ. ನಾವು ಸಾಲ ಸೋಲ ಮಾಡಿ ಎಜೆನ್ಸಿ ಪಡೆದಿದ್ದೇವೆ. ಹಣ ಸಂಪೂರ್ಣ ಪಾವತಿಯಾದಲ್ಲಿ ತಕ್ಷಣ ಕ್ಯಾಂಟಿನ್ ಸೇವೆ ಪುನಾರಂಭ ಮಾಡಲು ಅನುಕೂಲವಾಗುತ್ತದೆ ಎಂದು ಸೆಪ್ಟಾ ಏಜೆನ್ಸಿಯ ಮ್ಯಾನೇಜರ್ ಶ್ರೀಶೈಲ ಕುಲಕರ್ಣಿ ಹೇಳಿದ್ದಾರೆ.
ಕಲಬುರಗಿಯ 7 ಇಂದಿರಾ ಕ್ಯಾಂಟಿನ್‌ಗಳಲ್ಲಿ ಪ್ರತಿ ದಿನ ಅಂದಾಜು 4 ಸಾವಿರಕ್ಕೂ ಹೆಚ್ಚು ಜನ ಊಟ, ಉಪಹಾರ ಸೇವನೆ ಮಾಡುತ್ತಿದ್ದರು. ಸದ್ಯ ಕ್ಯಾಂಟಿನ್ ಸೇವೆ ಸ್ಥಗಿತಗೊಂಡಿದ್ದರಿಂದ ಇವರೆಲ್ಲರೂ ಅಗ್ಗದ ದರದ ಅನ್ನಾಹಾರ ದೊರಕದೆ ಪರದಾಡುವಂತಾಗಿದೆ. ಬಿಲ್ ಪಾವತಿಸಿ ಎಂದು ಟೆಂಡರ್ ಪಡೆದವರು ಕೇಳುತ್ತಿದ್ದರೆ, ಬಿಲ್‌ನಲ್ಲಿ ಹೆಚ್ಚುಕಮ್ಮಿಯಾಗಿದೆ, ಅದಕ್ಕೇ ಬಿಲ್ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಪಾಲಿಕೆಯವರು ಹೇಳುತ್ತಿದ್ದಾರೆ. ಆದರೆ ನಿಖರವಾಗಿ ಏನೆಲ್ಲ ಕಾರಣ ಎಂಬುದನ್ನು ಪಾಲಿಕೆಯವರು ಹೇಳುತ್ತಿಲ್ಲ. ಪಾಲಿಕೆ, ಗುತ್ತಿಗೆ ಏಜೆನ್ಸಿಯವರ ನಡುವಿನ ಬಾಕಿ ಬಿಲ್ ಯುದ್ಧದಲ್ಲಿ ಕಲಬುರಗಿ ನಗರದ ಆರ್ಥಿಕವಾಗಿ ಹಿಂದುಳಿದವರು, ಕೂಲಿಗಳು, ಬಡವರು ಸೇರಿದಂತೆ ಹಲವರು ವರ್ಗದ ಜನತೆ ಅಗ್ಗದ ದರದ ಊಟ, ಉಪಹಾರ ದೊರಕುವ ಇಂದಿರಾ ಕ್ಯಾಂಟಿನ್ ಸೇವೆ ದೊರಕದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಈ ವಿಷಯ ಗಂಭೀರವಾಗಿ ಪರಿಗಣಿಸಿ ಇಂದಿರಾ ಕ್ಯಾಂಟಿನ್ ಆರಂಭಸಬೇಕೆಂದು ಫಲಾನುಭವಿಗಳ ಒತ್ತಾಸೆಯಾಗಿದೆ.
ವರದಿ: ನಂದಿನಿ ಮೈಸೂರು
