
ಮೈಸೂರು: ಕನ್ನಡಿಗರೆದೆಯಲ್ಲಿ ಪವರ್ ಸ್ಟಾರ್ ಪುನೀತ್ ಶಾಶ್ವತರು-ಸಾಹಿತಿ ಬನ್ನೂರು ರಾಜು.

ತಮ್ಮ ಬಣ್ಣದ ಬದುಕಿನ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿ ಕನ್ನಡ ಚಿತ್ರರಂಗಕ್ಕೊಂದು ಹೊಸ ಪವರ್ ನೀಡಿ ಹೋಗಿರುವ ಖ್ಯಾತ ಚಲನಚಿತ್ರ ಯುವನಟ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರು ಕನ್ನಡವಿರುವ ತನಕವೂ ಶಾಶ್ವತವಾಗಿ ಕನ್ನಡಿಗರೆದೆಯಲ್ಲಿ ಇದ್ದೇ ಇರುತ್ತಾರೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆದ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ಜನ್ಮದಿನೋತ್ಸವದ ಸಾರ್ಥಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದ್ಮಭೂಷಣ ಡಾ.ರಾಜಕುಮಾರ್ ಅವರು ಕನ್ನಡಕ್ಕೊಬ್ಬರೇ ರಾಜಕುಮಾರ್ ಆಗಿದ್ದರೆ ಅವರ ಸುಪುತ್ರ ಪುನೀತ್ ರಾಜಕುಮಾರ್ ಅವರು ತಂದೆಯನ್ನೂ ಮೀರಿಸಿ ಜಗತ್ತಿಗೊಬ್ಬರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಿದ್ದಾರೆಂದರು.

ರಾಜಕಾರಣಿಗಳಂತೆ ಪ್ರಣಾಳಿಕೆ ಇಟ್ಟುಕೊಂಡು ತುತ್ತೂರಿ ಊದಿಕೊಂಡು ಜನಸೇವೆ ಮಾಡಿದವರಲ್ಲ ಇವರು. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಯಾರಿಗೂ ಹೇಳದೆ ಒಂದೇ ಜನ್ಮದಲ್ಲಿ ನೂರು ಜನ್ಮಕ್ಕಾಗುವಷ್ಟು ಜನಸೇವಾ ಕೆಲಸ ಮಾಡಿದವರಿವರು. ಅಕ್ಷರಶಃ ತಂದೆಗೆ ತಕ್ಕ ಮಗ ನಾಗಿ ಕರ್ನಾಟಕ ಮಾತ್ರವಲ್ಲದೆ ಭಾರತದಿಂದಾಚೆಗೂ ಸಮಾಜಮುಖಿ ಕಲಾವಿದನಾಗಿ ವಿಶ್ವವ್ಯಾಪಿ ಕೀರ್ತಿಗಳಿಸಿದ್ದ ಪುನೀತ್ ರಾಜಕುಮಾರ್ ತನ್ಮೂಲಕ ಕನ್ನಡದ ಹಿರಿಮೆಯನ್ನು ವಿಶ್ವದೆತ್ತರಕ್ಕೂ ಕೊಂಡೊಯ್ದವರು.ಕೇವಲ ಅವರೊಬ್ಬ ಚಿತ್ರನಟನಾಗಿರದೆ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಹೃದಯವಂತರಾಗಿದ್ದರು. ಮೈಸೂರು ನಗರದ ಮಹಿಳೆಯರ ಪುನರ್ವಸತಿ ಕೇಂದ್ರ ಶಕ್ತಿಧಾಮ ಸೇರಿದಂತೆ ನೂರಾರು ಸೇವಾ ಸಂಸ್ಥೆಗಳಿಗೆ ಜೀವಧಾತುವಾಗಿದ್ದ ಅವರು ಸಾವಿರಾರು ಮಂದಿಯ ಜೀವನಕ್ಕೆ, ನೂರಾರು ಮಂದಿ ಕುಟುಂಬಕ್ಕೆ ನೆರವಾಗಿದ್ದರು. ದೊಡ್ಮನೆ ಹುಡುಗನಾಗಿ ಚಿಕ್ಕವಯಸ್ಸಿನಲ್ಲೇ ದೊಡ್ಡ ಕೊಡುಗೈಗುಣವನ್ನು ಮೈಗೂಡಿಸಿಕೊಂಡಿದ್ದ ಪುನೀತ್ ರಾಜಕುಮಾರ್ ಅವರು ಅಲ್ಪಾಯುಷ್ಯದಲ್ಲೇ ಕನ್ನಡ ನಾಡು ಕಂಡರಿಯದಂತಹ ಅಪಾರ ಸಾಧನೆ ಮಾಡಿ ಹೋಗಿದ್ದಾರೆ. ಅಷ್ಟೇ ಅಲ್ಲ, ಗ್ಲಾಮರ್ ಲೋಕದ ಚಲನಚಿತ್ರ ನಟನೊಬ್ಬ ಅದ್ಭುತ ಅಭಿನಯ ದೊಡನೆ ಅಷ್ಟೇ ಅದ್ಭುತವಾಗಿ ದಾಖಲೆ ಪ್ರಮಾಣದಲ್ಲಿ ಸಮಾಜ ಸೇವಾ ಕೈಂಕರ್ಯ ಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ ಚರಿತ್ರೆಯನ್ನು ಪುನೀತ್ ರಾಜಕುಮಾರ್ ನಿರ್ಮಿಸಿದ್ದಾರೆ ಎಂದು ಹೇಳಿದರು.ಇದಕ್ಕೂ ಮುನ್ನ ನಟ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಿದರು, ನಂತರ ಮಾತನಾಡಿದ ಅವರು,ಪುನೀತ್ ರಾಜಕುಮಾರ್ ರಂತಹ ಮಹಾನ್ ಮಾನವೀಯ ಕಲಾವಿದರನ್ನು ಪಡೆದಂತಹ ಕನ್ನಡಿಗರಾದ ನಾವುಗಳೇ ಧನ್ಯರೆಂದು ಸ್ಮರಿಸಿದರು. ಕಾಂಗ್ರೆಸ್ ಮುಖಂಡ ಎಂ.ಪ್ರದೀಪ್ ಕುಮಾರ್, ಚಿತ್ರ ನಿರ್ಮಾಪಕ ಸಿದ್ದರಾಜು, ಚಿತ್ರನಟ ಸುಪ್ರೀತ್, ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಅವರುಗಳು ಪುನೀತ್ ರಾಜಕುಮಾರ್ ಅವರ ಸೇವೆ ಮತ್ತು ಸಾಧನೆ ಹಾಗೂ ಸಿದ್ಧಿಯನ್ನು ಕುರಿತಂತೆ ಮಾತನಾಡಿದರು. ಸಂಸ್ಕೃತಿ ಚಿಂತಕ ಡಾ.ರಘುರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು.ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಜಿ. ಸುಗುಣಾವತಿ, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಶ್ರೀ ಬಸವರಾಜೇಂದ್ರ ಸ್ವಾಮಿ, ಕಾಂಗ್ರೆಸ್ ಮುಖಂಡ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಸಂಕೇತವಾಗಿ ಬೃಹದಾಕಾರದ ಕೇಕ್ ಕತ್ತರಿಸಿ ಶಾಲಾ ಮಕ್ಕಳು ಸೇರಿದಂತೆ ನೆರೆದಿದ್ದವರಿಗೆಲ್ಲಾ ವಿತರಿಸಲಾಯಿತು.
-ವರದಿ ನಂದಿನಿ ಮೈಸೂರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655