ಲಂಚ ಬೇಡಿಕೆ: ಫೈಟರ್‌ ರವಿ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅಲೋಕ್‌ ಕುಮಾರ್.

ಬೆಂಗಳೂರು: ಲಂಚ ಬೇಡಿಕೆ: ಫೈಟರ್‌ ರವಿ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅಲೋಕ್‌ ಕುಮಾರ್.

ಭ್ರಷ್ಟಾಚಾರ ಆರೋಪದಡಿ ತನ್ನ ವಿರುದ್ಧ ಫೈಟರ್ ರವಿ ಹೂಡಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಫೈಟರ್ ರವಿಗೆ ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಅಲೋಕ್ ಕುಮಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು ಅರ್ಜಿದಾರರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ತನಿಖಾಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ʼಬಿʼ ರಿಪೋರ್ಟ್ ಎಂದು ನಮೂದಾಗಿದೆ. ಆದರೆ, ವಿಶೇಷ ನ್ಯಾಯಾಲಯವು ಕೇವಲ ಫಿರ್ಯಾದಿಯ ದೂರು ಮತ್ತು ಪ್ರತಿಭಟನಾ ಅರ್ಜಿಯನ್ನು ಆಧರಿಸಿ ಸಂಜ್ಞೇಯ ಅಪರಾಧದಡಿ ವಿಚಾರಣೆಗೆ ಮುಂದಾಗಿದೆ. ಆದ್ದರಿಂದ, ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠವು ಪ್ರತಿವಾದಿ ಬಿ ಎಂ ಮಲ್ಲಿಕಾರ್ಜುನ ಅಲಿಯಾಸ್ ರವಿ ಯಾನೆ ಫೈಟರ್ ರವಿ (44) ಬಿನ್ ಎನ್ ಮಲ್ಲಯ್ಯಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ. ಅಲೋಕ್ ಕುಮಾರ್ ಪರ ವಕೀಲ ಎಸ್ ಸುನಿಲ್ ಕುಮಾರ್ ವಕಾಲತ್ತು ವಹಿಸಿದ್ದಾರೆ. ಪ್ರಕರಣದ ಹಿನ್ನೆಲೆ: ‘ಫೈಟರ್ ರವಿ ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಆಗಿನ ಉತ್ತರ ವಲಯದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ 1 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತಂತೆ ರವಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯಿದೆ– ಕಲಂ 7, 13 (ಡಿ) ಮತ್ತು 13 (2)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ತನಿಖೆಯ ನಂತರ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ, ಲೋಕಾಯುಕ್ತ ವಿಶೇಷ ನ್ಯಾಯಾಲಯ ’ಬಿ’ ರಿಪೋರ್ಟ್ ಅನ್ನು ತಿರಸ್ಕರಿಸಿತ್ತು. ಅಲ್ಲದೆ, ಅಲೋಕ್ ಕುಮಾರ್, ಎಸಿಪಿ ದಾನೇಶ್ ರಾವ್ ಮತ್ತಿತರರ ವಿರುದ್ಧದ ಆರೋಪಗಳನ್ನು ಸಂಜ್ಞೇಯ ಅಪರಾಧ ಎಂದು ತೀರ್ಮಾನಿಸಿ ಫೈಟರ್ ರವಿಯ ಸ್ವಯಂ ಹೇಳಿಕೆ ದಾಖಲಿಸುವ ಕ್ರಮಕ್ಕೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

-ನಂದಿನಿ ಮೈಸೂರು.

Leave a Reply

Your email address will not be published. Required fields are marked *