ಜಿ ಎಸ್ ಟಿ ಸಂಗ್ರಹವು ಫೆಬ್ರುವರಿಯಲ್ಲಿ ಶೇಕಡ 12ರಷ್ಟು ಏರಿಕೆ.

ನವದೆಹಲಿ: ಆರ್ಥಿಕ ಚಟುವಟಿಕೆಗಳು ಹಾಗೂ ದುಬಾರಿ ಬೆಲೆಯ ಉತ್ಪನ್ನ ಗಳ ಖರೀದಿಯು ಹೆಚ್ಚಳ ಕಂಡಿದ್ದು ಫೆಬ್ರುವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾದ ವರಮಾನ ಪ್ರಮಾಣವು ಶೇಕಡ 12ರಷ್ಟು ಹೆಚ್ಚಾಗಿದ್ದು, ₹1,49,577ಕೋಟಿಗೆ ತಲುಪಿದೆ.

ಫೇಬ್ರುವರಿಯಲ್ಲಿ ಆಗಿರುವ ವರಮಾನ ಸಂಗ್ರಹವು ಜನವರಿ ತಿಂಗಳ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಕಡಿಮೆ. ಫೆಬ್ರುವರಿಯಲ್ಲಿ 28 ದಿನಗಳು ಮಾತ್ರ ಇರುವ ಕಾರಣ ಜೆ ಎಸ್ ಟಿ ವರಮಾನ ಸಂಗ್ರಹ ಕೂಡ ಕಡಿಮೆ ಇರುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ, ಈ ವರ್ಷದ ಫೆಬ್ರುವರಿಯ ವರಮಾನ ಸಂಗ್ರಹ ಹೆಚ್ಚಾಗಿದೆ. ಫೆಬ್ರುವರಿಯಲ್ಲಿ ದೇಶಿ ವಹಿವಾಟಿನಿಂದ ಬರುವ ವರಮಾನವು ಶೇ 15ರಷ್ಟು ಹೆಚ್ಚಿದೆ, ಸರಕುಗಳ ಆಮದಿನಿಂದ ಬರುವ ವರಮಾನವು ಶೇ 6ರಷ್ಟು ಹೆಚ್ಚಾಗಿದೆ. ‘ಇದು ದೇಶಿ ಮಾರುಕಟ್ಟೆಯಲ್ಲಿ ಸ್ವಾವಲಂಬನೆ ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿದೆ. ಇದು ದೇಶದ ಅರ್ಥ ವ್ಯವಸ್ಥೆಯ ಪಾಲಿಗೆ ಒಳ್ಳೆಯ ಸೂಚನೆ’ ಎಂದು ಕೆ ಪಿ ಎಂ ಜಿ ಇಂಡಿಯಾ ಸಂಸ್ಥೆಯ ಪರೋಕ್ಷ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ಹೇಳಿದ್ದಾರೆ. ಫೆಬ್ರುವರಿಯಲ್ಲಿ ಆಗಿರುವ ಸೆಸ್ ಸಂಗ್ರಹ ₹11,931 ಕೋಟಿ. ಇದು ಜಿ ಎಸ್ ಟಿ ಜಾರಿಗೆ ಬಂದ ನಂತರದ ಅತಿ ಹೆಚ್ಚಿನ ಸೆಸ್ ಸಂಗ್ರಹ, ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನ ತಯಾರಕರ ವಿರುದ್ಧ ತೆರಿಗೆ ಅಧಿಕಾರಿಗಳ ಕೈಗೊಂಡ ಕ್ರಮಗಳು ಹೆಚ್ಚಿನ ವರಮಾನ ಸಂಗ್ರಹಕ್ಕೆ ಹಾಗೂ ಹೆಚ್ಚಿನ ಸೆಸ್ ಸಂಗ್ರಹಕ್ಕೆ ಕಾರಣವಾಗಿರಬಹುದು ಎಂದು ಎ ಎಂ ಆರ್ ಜಿ ಆಯಂಡ್ ಅಸೋಸಿಯೇಟ್ಸ್ ನ ಹಿರಿಯ ಪಾಲುದಾರ ರಜತ್ ಮೋಹತ್ ಹೇಳಿದ್ದಾರೆ.

Leave a Reply

Your email address will not be published. Required fields are marked *