
ಕೊಡಗು ಜಿಲ್ಲೆ: ಚೋಮನ ಕುಂದ್ ಬೆಟ್ಟದಲ್ಲಿ ಪರಿಸರ ರಕ್ಷಣೆ ಹಾಗೂ ಕಾಳಜಿ ಮಾಡಲು ಪರಿಸರ ಸಂದೇಶ ಸಾರಿದ ವೈದ್ಯರ ಗುಂಪು.
ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಕೊಡಗು ಜಿಲ್ಲಾ ಶಾಖೆಯ ಚೆಯ್ಯಂಡಾಣೆ ಸಮೀಪದ ಚೋಮನ ಕುಂದ್ ಬೆಟ್ಟದಲ್ಲಿ ಚಾರಣ ನಡೆಸಿ ಪರಿಸರ ಉಳಿಸುವ ಸಂದೇಶ ಫಲಕಗಳನ್ನು ಇಲಾಖೆಗೆ ಹಸ್ತಾಂತರಿಸಿತು. ಚೋಮನ ಕುಂದ್ ಅತ್ಯಂತ ಸುಂದನ ಪ್ರವಾಸಿ ತಾಣವಾಗಿದ್ದು, ಅದರ ಶಿಖರದ ಮೇಲೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವ ಪ್ರವೃತ್ತಿಯನ್ನು ಖಂಡಿಸಿದ ನಿಮಾ ಅಧ್ಯಕ್ಷ ಡಾ. ರಾಜಾರಾಮ್, ಈ ಕುರಿತು ಎಚ್ಚರ ಮೂಡಿಸಲು ಕಿರು ಪ್ರಯತ್ನ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ನಶಿಸಿಹೋಗುತ್ತಿರುವ ಔಷಧ ಸಸ್ಯಗಳ ಸಂರಕ್ಷಣೆಯ ಉದ್ದೇಶದಿಂದ ವನಸ್ಪತಿ ಉದ್ಯಾನವೊಂದನ್ನು ನಿರ್ಮಿಸುವ ನಮ್ಮ ಆಶಾಯಕ್ಕೆ ಜಿಲ್ಲಾಡಳಿತವು ಪೂರಕವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು. ಕೊಡಗು ಜಿಲ್ಲಾ ಆರೋಗ್ಯ ಭಾರತಿ ಮತ್ತು ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ಸಂಘಟನೆಗಳ ಪರವಾಗಿ ಮಾತನಾಡಿದ ಪ್ರಸಾದ್ ಗೌಡ, ನಿಮಾದ ಪರಿಸರ ರಕ್ಷಣೆಯ ಯೋಜನೆಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಕೊಡಗು ಹವ್ಯಕ ವಲಯದ ಮುಖಂಡರಾದ ನಾರಾಯಣ ಮೂರ್ತಿ ಚಾರಣಿಗರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು. ಅವರ ವೈದ್ಯರುಗಳ ನಿಸರ್ಗ ಪ್ರೀತಿ ಮುಂದುವರಿಯಲಿ ಎಂದು ಹಾರೈಸಿದರು. ಜಿಲ್ಲಾಧ್ಯಂತದ ನಿಮಾ ಸದಸ್ಯರು, ಔಷಧ ವ್ಯಾಪಾರಿಗಳು ಮತ್ತು ಪರಿಸರ ಪ್ರಿಯರು ಈ ಚಾರಣದಲ್ಲಿ ಭಾಗವಹಿಸಿ ಚೋಮನ ಕುಂದ್ ‘ನ ಸುಂದರ ಸೂರ್ಯಸ್ತದ ಸೊಬಗನ್ನು ಕಣ್ಣುತುಂಬಿಕೊಂಡರು.
