ಮೈಸೂರಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು

ಮೈಸೂರು : ಮೈಸೂರಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು.

ಇಂದು ನಾವೆಲ್ಲರೂ 74ನೇ ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ಮೊದಲ ಬಾರಿಗೆ ಈ ಐತಿಹಾಸಿಕ ಭೂಮಿಯಲ್ಲಿ ರಾಷ್ಟ್ರಧ್ವಜ ಆರಿಸಿ ಈ ದಿನ ಆಚರಣೆ ಮಾಡುತ್ತಿದ್ದೇನೆ.

ಇಂದು ಭಾರತಕ್ಕೆ ಸಂವಿಧಾನ ಕೊಟ್ಟ ಪವಿತ್ರ ದಿನ. ಕಾಂಗ್ರೆಸ್ ಈ ಪವಿತ್ರ ಗ್ರಂಥ ಕೊಟ್ಟು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಶಕ್ತಿ ತುಂಬಿದ ದಿನ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ದಿನ.

ನೆಹರೂ ಅವರು ಅಧ್ಯಕ್ಷತೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಅವರ ದೂರದೃಷ್ಟಿ ಹಾಗೂ ಕೊಡುಗೆಯನ್ನು ನೆನಪಿಸಿಕೊಳ್ಳಲಿದ್ದರೆ ಕರ್ತವ್ಯಲೋಪವಾಗಲಿದೆ. ಹೀಗಾಗಿ ನಾವೆಲ್ಲರೂ ಅವರನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಬೇಕು.

ಪ್ರತಿ ಪ್ರಜೆಗೂ ಮೂಲಭೂತ ಹಕ್ಕು ನೀಡಿ, ಅವರ ರಕ್ಷಣೆ ಮಾಡುತ್ತಿದ್ದೇವೆ. ಕಾಂಗ್ರೆಸಿಗರು ಹಾಗೂ ಪ್ರತಿ ಭಾರತೀಯನ ಕರ್ತವ್ಯ ಎಲ್ಲ ಭಾಷೆ, ಧರ್ಮ, ಸಂಸ್ಕೃತಿ ಜತೆಗೆ ಸಂವಿಧಾನದ ರಕ್ಷಣೆ.

ಇದು ದೇಶದ ಹಬ್ಬ. ಈ ಹಬ್ಬಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ಭಾರತದ ಸಂವಿಧಾನ ಜಾತ್ಯಾತೀತ ತತ್ವದ ಮೇಲೆ ಸರ್ವರಿಗೂ ಶಕ್ತಿ ಕೊಟ್ಟಿತು. ಇಷ್ಟು ಕಾಲ ಈ ತತ್ವದ ಮೇಲೆ ಸಾಗಿಬಂದ ಹಿನ್ನೆಲೆಯಲ್ಲಿ ಭಾರತ ಇಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಬೆಳೆದಿದೆ.

ಸಂವಿಧಾನದ ತತ್ವ ಸಿದ್ಧಾಂತವೇ ಕಾಂಗ್ರೆಸ್ ನ ತತ್ವ ಸಿದ್ಧಾಂತ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ತಂದ ಸಾಂವಿಧಾನಿಕ ತಿದ್ದುಪಡಿಗಳು, ನೀತಿಗಳ ಮೂಲಕ ಈ ದೇಶ ಕಟ್ಟಲಾಗಿದೆ.

ಈಗ ಜಾತಿ, ಧರ್ಮ, ಭಾಷೆ ಮತ್ತಿತರ ವಿಚಾರದಲ್ಲಿ ದ್ವೇಷ ಬಿತ್ತಿ ಸಮಾಜ ಒಡೆಯುವ ಕಾರ್ಯಕ್ಕೆ ಕೆಲವರು ಮುಂದಾಗಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಈ ವಿಚಾರವಾಗಿ ಅರಿವು ಮೂಡಿಸಬೇಕು. ನಮ್ಮ ರಕ್ಷಣೆ ಮಾಡುತ್ತಿರುವ ಸಂವಿಧಾನ ಬದಲಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದರೆ ನಮ್ಮ ನಿಮ್ಮೆಲ್ಲರ ಗಟ್ಟಿತನ, ಅಂಬೇಡ್ಕರ್ ಅವರ ವಾದ, ಗಾಂಧಿ, ನೆಹರೂ, ಸರ್ದಾರ್ ಪಟೇಲರು ಹಾಕಿರುವ ಭದ್ರ ಬುನಾದಿ ಮೂಲಕ ಅದನ್ನು ಉಳಿಸಿಕೊಂಡು ಬಂದಿದ್ದೇವೆ.

ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಮೇಲೆ ಒಂದು ಭಾಷೆಯನ್ನು ಹೇರಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ನಾವು ಯಾವುದೇ ಅವಕಾಶ ನೀಡುತ್ತಿಲ್ಲ. ನಮ್ಮ ನೋಟು ನೋಡಿ, ಅದರಲ್ಲಿ ವಿವಿಧ ಪ್ರಾಂತೀಯ ಭಾಷೆಗಳಿದ್ದು, ಆ ಪೈಕಿ ಕನ್ನಡವೂ ಒಂದು.

ದೇಶದ ಸಂವಿಧಾನ, ರಾಷ್ಟ್ರಧ್ವಜ, ಮೂಲಭೂತ ಹಕ್ಕುನ್ನು ನಾವು ಮರೆಯಬಾರದು. ದೇಶದ ಐಕ್ಯತೆ, ಭಾತೃತ್ವ, ಸಮಗ್ರತೆಗೆ ಧಕ್ಕೆಯಾಗಿದೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ನಿಮ್ಮ ಪರವಾಗಿ ರಾಹುಲ್ ಗಾಂಧಿ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.

ರಾಹುಲ್ ಗಾಂಧಿ ಅವರು ರಾಜ್ಯದಲ್ಲೂ ಹೆಜ್ಜೆ ಹಾಕಿ ನಮ್ಮೆಲ್ಲರಿಗೂ ಶಕ್ತಿ ತುಂಬಿದ್ದಾರೆ. ಸೋನಿಯಾ ಗಾಂಧಿ ಅವರು ಕೂಡ ಮೈಸೂರಿಗೆ ಬಂದು ಮೂರು ದಿನಗಳ ಕಾಲ ವಾಸ್ತವ್ಯ ಹೂಡಿ ನಮಗೆ ಬೆಂಬಲ ನೀಡಿದ್ದಾರೆ.

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಭಾರತ ಜೋಡೋ ಯಾತ್ರೆಯಲ್ಲಿ ಭ್ರಾತೃತ್ವ, ಕೋಮು ಸೌಹಾರ್ದತೆ ಪರ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆ ವಿರುದ್ಧ ಹೋರಾಡುವ ಸಂದೇಶಗಳನ್ನು ನೀಡಿದ್ದಾರೆ. ಈ ಸಂದೇಶಗಳನ್ನು ರಾಜ್ಯದ ಮೂಲೆ, ಮೂಲೆಗೆ ತಲುಪಿಸಲು ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಐಕ್ಯತೆ, ಸಮಗ್ರತೆ, ಶಾಂತಿಯ ಮರುಸ್ಥಾಪನೆ ಮಾಡಬೇಕು.

ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಿದ್ಧಾಂತ, ಸಂವಿಧಾನದಿಂದ ಪ್ರೇರಣೆ ಪಡೆದಿವೆ. ಹೀಗಾಗಿ ನಮ್ಮ ಸಂವಿಧಾನ ಪ್ರಪಂಚದ ಶ್ರೇಷ್ಠ ಸಂವಿಧಾನವಾಗಿದೆ. ಅದರ ವಿರುದ್ಧ ಸಂಚು ನಡೆಸುತ್ತಿರುವ ಕೋಮುಶಕ್ತಿಗಳನ್ನು ದೂರವಿಡುವುದು ನಮ್ಮ, ನಿಮ್ಮೆಲ್ಲರ ಜವಾಬ್ದಾರಿ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *