ಚಿಕ್ಕಬಳ್ಳಾಪುರ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭಾಷಣ:

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭಾಷಣ.

2013ರಿಂದ 2018ರ ವರೆಗೆ ನಾವು ಅಧಿಕಾರ ನಡೆಸಿದ್ದೇವೆ, ಈ ಸಂದರ್ಭದಲ್ಲಿ ನಾವು ಅಂದಿನ ಸಮಸ್ಯೆಗಳ ಆಧಾರದ ಮೇಲೆ ಪ್ರಣಾಳಿಕೆಯನ್ನು ರಚಿಸಿ, ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜಾರಿ ಮಾಡುವ ವಚನ ನೀಡಿದ್ದೆವು. ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಇದೇ ಕಾರಣಕ್ಕೆ ನಾನು ಅನೇಕ ಬಾರಿ ಪ್ರಣಾಳಿಕೆಯ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಕೊಟ್ಟಿದ್ದೆ. 2018ರಲ್ಲಿ ಬಿಜೆಪಿ ಪಕ್ಷ ಜನರಿಗೆ 600 ಭರವಸೆಗಳನ್ನು ನೀಡಿ ಅದರಲ್ಲಿ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಬೇರೆಯವರ ಧಮ್‌, ತಾಕತ್‌ ಬಗ್ಗೆ ಪ್ರಶ್ನೆ ಮಾಡುವ ಬೊಮ್ಮಾಯಿ ಅವರಿಗೆ ಧಮ್‌, ತಾಕತ್‌ ಇದ್ದರೆ ಒಂದೇ ವೇದಿಕೆಯ ಮೇಲೆ ಚರ್ಚೆಗೆ ಬರಲಿ. ಸ್ಥಳ, ಸಮಯವನ್ನು ಅವರೇ ನಿಗದಿ ಮಾಡಿ ನನ್ನನ್ನು ಕರೆಯಲು, ನಾನು ಸಿದ್ಧನಿದ್ದೇನೆ.

ಸುಧಾಕರ್‌ ಅವರಿಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. 2013ರಲ್ಲಿ ಅಂಜನಪ್ಪ ಅವರಿಗೆ ಟಿಕೇಟ್‌ ನೀಡುವಂತೆ ವೀರಪ್ಪ ಮೊಯ್ಲಿ ಅವರು ಹೇಳಿದರು, ಆದರೆ ನಾನು ಮತ್ತು ಪರಮೇಶ್ವರ್‌ ಅವರು ಸುಧಾಕರ್‌ ಅವರಿಗೆ ಟಿಕೇಟ್‌ ನೀಡಿ ಇಂದು ಪಶ್ಚಾತಾಪ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2013ರಲ್ಲಿ, 2018ರಲ್ಲಿ ಸುಧಾಕರ್ ಶಾಸಕರಾಗಿ ನಮ್ಮ ಜೊತೆ ಇದ್ದರು. ನಂತರ ದುರಾಸೆಗೆ ಒಳಗಾಗಿ ಪಕ್ಷ ಬಿಟ್ಟು ಬಿಜೆಪಿ ಸೇರಿದರು.

ಅಶ್ವತ್ಥ್‌ ನಾರಾಯಣ ಮತ್ತು ಸುಧಾಕರ್‌ ಅವರು ಪತ್ರಿಕಾಗೋಷ್ಠಿ ಮಾಡಿ ನಮ್ಮ ಸರ್ಕಾರದ ಸಚಿವರ ಮೇಲೆ ಆರೋಪ ಮಾಡಿದ್ದಾರೆ. ಜಾರ್ಜ್‌ ಅವರು ವೈಟ್‌ ಟಾಪಿಂಗ್‌ ನಲ್ಲಿ ದುಡ್ಡು ಮಾಡಿದ್ದಾರೆ, ಸಿದ್ದರಾಮಯ್ಯ ಅವರು ರೀಡೂ ಮಾಡಿದ್ದಾರೆ ಎನ್ನುತ್ತಾರೆ, ಈ ರೀಡೂ ಪದವನ್ನು ಉಪಯೋಗಿಸಿದ್ದು ಹೈಕೋರ್ಟ್. ಸಿದ್ದರಾಮಯ್ಯ ಅವರ ಕಾಲದ ಆಡಿಟ್‌ ರಿಪೋರ್ಟ್‌ ಬಂದಿದೆ. ಭ್ರಷ್ಟಾಚಾರ ನಡೆದಿದೆ ಎನ್ನುತ್ತಾರೆ. ಇದೊಂದು ರೀತಿ ಭೂತದ ಬಾಯಲ್ಲಿ ಭಗವದ್ಗೀತೆ ಹಾಗಿದೆ. ರಾಜ್ಯದಲ್ಲಿ ಅತೀ ಭ್ರಷ್ಟ ಸಚಿವರು ಇದ್ದರೆ ಅದು ಸುಧಾಕರ್‌ ಅವರು.

ಕೊರೊನಾ ಕಾಲದಲ್ಲಿ ನಡೆದ ಭ್ರಷ್ಟಾಚಾರವನ್ನು ಸದನದಲ್ಲಿ ಮಾತನಾಡಿದ್ದೆ. ಮಾಸ್ಕ್‌, ವೆಂಟಿಲೇಟರ್‌, ಹಾಸಿಗೆ, ಆಮ್ಲಜನಕ ಖರೀದಿಯಲ್ಲಿ ಸುಮಾರು 2,000 ಕೋಟಿ ಲಂಚ ಹೊಡೆದಿದ್ದೀರಿ ಎಂದು ದಾಖಲೆ ಸಮೇತ ಪ್ರಸ್ತಾಪ ಮಾಡಿದೆ, ಇದಕ್ಕೆ ಅಂದಿನ ಮುಖ್ಯಮಂತ್ರಿಗಳು ಉತ್ತರ ನೀಡಿಲ್ಲ, ಸುಧಾಕರ್‌ ಅವರು ನನ್ನ ದಾಖಲೆಗಳನ್ನು ಒಪ್ಪಿಕೊಂಡರೂ ಆರೋಪ ಒಪ್ಪಿಕೊಳ್ಳಲಿಲ್ಲ. ಉತ್ತರ ಕೊಡದೆ ತಪ್ಪಿಸಿಕೊಂಡರು.

ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೆ 36 ಜನ ಸಾವಿಗೀಡಾದಾಗ ಸುಧಾಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್‌ ಕುಮಾರ್‌ ಅವರು ಆಮ್ಲಜನಕ ಸಿಗದೆ ಸತ್ತವರು ಮೂರೇ ಜನ ಎಂದು ಸುಳ್ಳು ಹೇಳಿದರು. ಅವರೆಲ್ಲರಿಗೂ ಆಮ್ಲಜನಕ ಕೊಟ್ಟಿದ್ದರೆ 36 ಜನರ ಜೀವ ಉಳಿಯುತ್ತಿತ್ತು. ಅವರ ಸಾವಿಗೆ ಈ ಸರ್ಕಾರದ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿ ಕಾರಣ. ಮರುದಿನ ನಾವು ಆಸ್ಪತ್ರೆಗೆ ಹೋಗಿ ವೈದ್ಯರ ಜೊತೆ ಸಭೆ ಮಾಡಿದೆವು, ಆ ಸಂದರ್ಭದಲ್ಲಿ 36 ಜನ ಸತ್ತಿರುವುದನ್ನು ವೈದ್ಯರು ಒಪ್ಪಿಕೊಂಡರು. ಈ ಘಟನೆಯಲ್ಲಿ ಸತ್ತವರ ಮನೆಗಳಿಗೂ ಸುಧಾಕರ ಭೇಟಿ ನೀಡಿಲ್ಲ, ಪರಿಹಾರ ಕೊಟ್ಟಿಲ್ಲ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆ. ಕೊರೊನಾದಿಂದ ನಾಲ್ಕುವರೆ ಲಕ್ಷ ಜನ ಸಾವಿಗೀಡಾದರು. ಇದಕ್ಕೆ ಕಾರಣರಾದ ಸುಧಾಕರ್‌ ಅವರಿಗೆ ಆರೋಗ್ಯ ಮಂತ್ರಿ ಆಗುವ ಯೋಗ್ಯತೆ ಇದೆಯಾ ಎಂಬುದನ್ನು ನಾವು ಕೇಳಬೇಕಾಗುತ್ತದೆ.

ನಮ್ಮ ಪಕ್ಷದ ನಾಯಕರೆಲ್ಲ ಮಧ್ಯರಾತ್ರಿ ವರೆಗೂ ಸುಧಾಕರನನ್ನು ಕೂರಿಸಿಕೊಂಡು ಆಪರೇಷನ್‌ ಕಮಲಕ್ಕೆ ಒಳಗಾಗಿ ಪಕ್ಷ ಬಿಟ್ಟು ಹೋಗಬೇಡಪ್ಪ ಎಂದು ಹೇಳಿದ್ದೆವು, ರಾತ್ರಿ ಪಕ್ಷ ಬಿಟ್ಟು ಹೋಗಲ್ಲ ಎಂದು ಪ್ರಮಾಣ ಮಾಡಿದ್ದ ಸುಧಾಕರ್ ಬೆಳಗಾಗುವುದರೊಳಗೆ ಬಾಂಬೆಗೆ ಹೊರಟುಹೋದ. ಇಂಥವರು ರಾಜಕೀಯ ಮೌಲ್ಯಗಳ ಬಗ್ಗೆ ಮಾತನಾಡೋದು ಅಸಹ್ಯ ತರಿಸುತ್ತದೆ.

ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳುವ ಬಿಜೆಪಿ ಪಕ್ಷದವರು ನಮ್ಮ ಸರ್ಕಾರದ ಅವಧಿ ಮತ್ತು ಈಗಿನ ಸರ್ಕಾರದ ಅವಧಿ ಎಲ್ಲವನ್ನು ಸೇರಿಸಿ ಸುಪ್ರೀಂಕೋರ್ಟ್‌ ನ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಿಸಲಿ. ಬಿಜೆಪಿಯವರು ಸತ್ತ ಹೆಣದ ಮೇಲೆ ಭ್ರಷ್ಟಾಚಾರ ಮಾಡಿದ್ದಾರೆ. ನಾಚಿಕೆಯಾಗಬೇಕು.

ನಾವು ಲೋಕಾಯುಕ್ತವನ್ನು ಮುಚ್ಚಿದ್ದೇವೆ ಎಂದು ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ನಮ್ಮ ಸರ್ಕಾರ ಎಸಿಬಿ ರಚನೆ ಮಾಡಿತ್ತು ಅಷ್ಟೆ. ಲೋಕಾಯುಕ್ತ ಅಂದೂ ಇತ್ತು. ಈಗ ಎಸಿಬಿ ಮುಚ್ಚಿ ಎಂದು ಹೇಳಿರುವುದು ಕೋರ್ಟ್‌, ಇದರಿಂದ ಅದನ್ನು ಮುಚ್ಚಬೇಕಾಗಿ ಬಂತು. ಈಗಲೂ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಎಸಿಬಿ ಇದೆ. ಇದಕ್ಕೆ ಸುಧಾಕರ್‌ ಉತ್ತರ ಕೊಡಲಿ.

ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಶಾಸಕರಾಗಿ ನಮ್ಮ ಜೊತೆ ಇದ್ದ ಸುಧಾಕರ್‌ ಯಾಕೆ ಅಂದೇ ಮಾತನಾಡಿಲ್ಲ? ವಿರೋಧ ಪಕ್ಷದಲ್ಲಿದ್ದ ಬಸವರಾಜ ಬೊಮ್ಮಾಯಿ ಯಾಕೆ ಮಾತನಾಡಿಲ್ಲ? ಈಗ ಹಿಂದೆ ಭ್ರಷ್ಟಾಚಾರ ನಡೆದಿತ್ತು ಎಂದರೆ ಜನ ನಿಮ್ಮ ಮಾತನ್ನು ನಂಬುತ್ತಾರ? ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಸೇರಿಸಿ, ಈಗಿನ ಸರ್ಕಾರದ ಮಾಸ್ಕ್‌, ವೆಂಟಿಲೇಟರ್‌, ಆಕ್ಸಿಜನ್‌ ಖರೀದಿ, ಸರ್ಕಾರಿ ಕಾಮಗಾರಿಗಳು, ನೇಮಕಾತಿ ಎಲ್ಲವನ್ನು ಸೇರಿಸಿ ಸುಪ್ರೀಂ ಕೋರ್ಟ್‌ ನ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಲಿ.

ಸುಧಾಕರ್ ಆಪರೇಷನ್‌ ಕಮಲಕ್ಕೆ ಒಳಗಾಗಿ ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬಂದಿದ್ದು. ಸುಧಾಕರ್‌ ಒಬ್ಬ ದೊಡ್ಡ ಮೋಸಗಾರ ಎಂದು ಮೋಯ್ಲಿಯವರು ಅಂದೇ ಹೇಳಿದ್ದರು, ಟಿಕೇಟ್‌ ಕೊಡಿಸಿದ ತಪ್ಪಿಗೆ ಇಂದು ಪಶ್ಚಾತಾಪ ಪಡುತ್ತಿದ್ದೇನೆ. ಈ ಬಾರಿ ಚಿಕ್ಕಬಳ್ಳಾಪುರದ ಜನ ಯಾರಿಗೆ ಹೇಳುತ್ತಾರೆ ಅವರಿಗೆ ಟಿಕೇಟ್‌ ನೀಡುತ್ತೇವೆ. ಸುಧಾಕರ್‌ ಅವರನ್ನು ಸೋಲಿಸಿ ಮನೆಗೆ ಕಳಿಸುವ ಕೆಲಸವನ್ನು ಇಲ್ಲಿನ ಜನ ಮಾಡಬೇಕು. ಇಲ್ಲಿರುವ ಕ್ರಷರ್‌ ಮತ್ತು ಕಲ್ಲು ಕ್ವಾರಿಯವರು ಪ್ರತೀ ತಿಂಗಳು ಲಂಚ ನೀಡಬೇಕಂತೆ.

ಹೆಚ್,ಎನ್‌ ವ್ಯಾಲಿ, ಕೆ,ಸಿ ವ್ಯಾಲಿ ಮಾಡಿದ್ದು ನಮ್ಮ ಸರ್ಕಾರ. 1,400 ಕೋಟಿ ಖರ್ಚು ಮಾಡಿ ಕೆ,ಸಿ ವ್ಯಾಲಿ ಮಾಡಿದ್ದು ನಾವು. ಎತ್ತಿನಹೊಳೆ ಯೋಜನೆ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಸುಧಾಕರ್‌ ಮಾಡಿರುವುದು ಲೂಟಿ ಮಾತ್ರ. ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತವಾಗಿ ಸಾಲ ನೀಡಿದ್ದು, ಮೆಡಿಕಲ್‌ ಕಾಲೇಜ್‌ ಮಾಡಿದ್ದು ನಾವು. ಮುಂದೆ ನಾವು ಅಧಿಕಾರಕ್ಕೆ ಬಂದರೆ 5 ಲಕ್ಷದ ವರೆಗೆ ಬಡ್ಡಿ ರಹಿತವಾಗಿ ರೈತರಿಗೆ ಸಾಲ ಕೊಡುವ ಕೆಲಸ ಮಾಡುತ್ತೇವೆ, 20 ಲಕ್ಷದ ವರೆಗೆ 3% ಬಡ್ಡಿದರದಲ್ಲಿ ಸಾಲ ನೀಡುವ ಕೆಲಸ ಮಾಡುತ್ತೇವೆ. ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ.

ಇದಕ್ಕೆ ನಿಮ್ಮೆಲ್ಲರ ಒಪ್ಪಿಗೆ ಇದ್ದರೆ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮಾಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *