
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು.

ಚಿಕ್ಕಬಳ್ಳಾಪುರ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು
ಜನರ ನೋವು, ಸಂಕಟ ತಿಳಿದು, ಅವರ ಅಭಿಪ್ರಾಯ ಪಡೆದುಕೊಂಡು ಅವುಗಳಿಗೆ ಪರಿಹಾರ ನೀಡಲು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಬೆಳಗಾವಿಯಿಂದ ಈ ಯಾತ್ರೆ ಆರಂಭಿಸಿದ್ದೇವೆ. ಇದುವರೆಗೂ ಸುಮಾರು 17 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಎಲ್ಲಿ ಹೋದರೂ ಜನಸಾಗರ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಧ್ವನಿ ನೀಡಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಪಕ್ಷ ಈ ರಾಜ್ಯಕ್ಕೆ ಅತ್ಯುತ್ತಮ ಆಡಳಿತ ನೀಡಿದ ಪರಿಣಾಮ ವಿಶ್ವದ ನಾಯಕರು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ಭಾರತ ದೇಶವನ್ನು ನೋಡುತ್ತಿದ್ದರು. ಇಲ್ಲಿನ ಅಭಿವೃದ್ಧಿ ಗಮನಿಸಿ ನಮಗೆ ಗೌರವ ನೀಡುತ್ತಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಮಿಸಿದ್ದರು. ಆಗ ವಾಜಪೇಯಿ ಅವರು ಇಷ್ಟು ದಿನಗಳ ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದುನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಇಲ್ಲಿನ ಸಂಪತ್ತು, ಪರಿಶುದ್ಧ ಆಡಳಿತ ಕಾರಣ ಎಂದು ಹೇಳಿದ್ದರು.
ಆದರೆ ಇಂದು ಈ ರಾಜ್ಯಕ್ಕೆ ಏನಾಗಿದೆ? ನಮ್ಮ ರಾಜ್ಯ ಕಳಂಕಿತ ರಾಜ್ಯವಾಗಿದೆ. ಈ ಕಳಂಕ ತಂದುಕೊಟ್ಟವರು ಯಾರು? ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ, ಎಸ್.ಎಂ ಕೃಷ್ಣ, ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಕಾಲದಲ್ಲಿ ನಮ್ಮ ಪಕ್ಷ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿಕೊಂಡು ಬಂದಿತ್ತು. ಇದು ಕಾಂಗ್ರೆಸ್ ಇತಿಹಾಸ, ಶಕ್ತಿ. ಯಾವಾಗೆಲ್ಲ ಕಾಂಗ್ರೆಸ್ ಅಧಿಕಾರ ಮಾಡಿದೆಯೋ ಎಲ್ಲ ವರ್ಗದ ಜನರಿಗೆ ಸಹಾಯ ಮಾಡಿಕೊಂಡು ಬಂದಿದೆ. ವೀರಪ್ಪ ಮೋಯ್ಲಿ ಅವರ ಕಾಲದಲ್ಲಿ ಸಿಇಟಿ ಆರಂಭಿಸಿದೆವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಬೆಳೆಯಲು ಬುನಾದಿ ಹಾಕಲಾಯಿತು. ಇದರ ಮೇಲೆ ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಅನೇಕ ಕಾರ್ಯಕ್ರಮ ನೀಡಿ ಕರ್ನಾಟಕ ಹಾಗೂ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಯಿತು.
ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ತ್ರೀಶಕ್ತಿ ಸಂಘ, ಬಿಸಿಯೂಟ ಸೇರಿದಂತೆ ಹಲವು ಕಾರ್ಯಕ್ರಮ ನೀಡಿದ್ದೆವು. ದೇವರಾಜ ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ನೀಡುತ್ತಾ ಬಂದಿದ್ದೇವೆ. ಬಡವರು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಲಾಯಿತು. ಬಂಗಾರಪ್ಪನವರ ಕಾಲದಲ್ಲಿ ಆಶ್ರಯ, ಆರೋಗ್ಯ, ಆರಾಧನಾ, ವಿಶ್ವ ಯೋಜನೆ ತಂದು ಹಳ್ಳಿಗಳ ಗುಡಿಗಳಿಗೆ ಗೌರವ ನೀಡಲು ಕಾರ್ಯಕ್ರಮ ನೀಡಲಾಯಿತು. ಸಿದ್ದರಾಮಯ್ಯ ಅವರ ಕಾಲದಲ್ಲಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತ್ತು. ಅದರಲ್ಲಿ 159 ಭರವಸೆಗಳನ್ನು ಈಡೇರಿಸಲಾಗಿದೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯನವರು ಬಸವಣ್ಣನವರ ಜಯಂತಿ ದಿನದಂದು ಅಧಿಕಾರ ಸ್ವೀಕಾರ ಮಾಡಿ, ವಿಧಾನಸೌಧಕ್ಕೆ ಹೋದ ತಕ್ಷಣ ರಾಜ್ಯದ ಜನರ ಹಸಿವು ನೀಗಿಸಲು 5 ಕೆ.ಜಿ ಅಕ್ಕಿ ಉಚಿತ ನೀಡುವ ಯೋಜನೆ ಜಾರಿತಂದರು. ರಮೇಶ್ ಕುಮಾರ್ ಅವರು ನಮ್ಮ ಜಿಲ್ಲೆ ಸಿಲ್ಕ್ ಹಾಗೂ ಮಿಲ್ಕ್ ಉತ್ಪಾದನೆ ಇದ್ದು, ರೈತರಿಗೆ ಸಹಾಯ ಮಾಡಬೇಕು ಎಂದು ಕೇಳಿದರು. ಹೀಗಾಗಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಿದರು.
ನಿಮ್ಮ ಭೂಮಿ, ಜಮೀನು ಅಂತರ್ಜಲ ಹೆಚ್ಚಿಸಿ ನೀರಾವರಿ ಮಾಡಲು ಕಾರ್ಯಕ್ರಮ ರೂಪಿಸಿದೆವು. ಕೋಲಾರದಲ್ಲಿ ನೀರಿಗಾಗಿ 1500 ಅಡಿಗಳವರೆಗೆ ಕೊರೆಯಬೇಕಿತ್ತು. ಹೀಗಾಗಿ ಕೆ.ಸಿ ವ್ಯಾಲಿ ಯೋಜನೆ ಜಾರಿ ಮಾಡಲಾಯಿತು. ಮಂಗಳೂರಿನಿಂದ ನೀರು ತರಲು ನಾವು ಮುಂದಾಗಿದ್ದು, ಅರ್ಧದಷ್ಟು ಮುಗಿದಿದೆ. ಇದನ್ನು ಕುಮಾರಸ್ವಾಮಿ ಅವರಾಗಲಿ, ಬಿಜೆಪಿಯವರಾಗಲಿ, ನಿಲ್ಲಿಸಲು ಸಾಧ್ಯವಿಲ್ಲ. ನಿಮ್ಮ ಬದುಕಿನಲ್ಲಿ ನಾವು ಬದಲಾವಣೆ ತರಬೇಕು.
ಬಿಜೆಪಿ ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದರು. ನೀವು ಹಣ್ಮು ತರಕಾರಿ ಬೆಳೆಯುತ್ತಿದ್ದು, ರಸಗೊಬ್ಬರ ಬೆಲೆ ಹೆಚ್ಚಾಗಿದೆಯೇ ಹೊರತು, ಆದಾಯ ಡಬಲ್ ಆಯಿತಾ? ಆಪರೇಶನ್ ಕಮಲಕ್ಕೆ ಹೋದ ನಂತರ ಸುಧಾಕರ್ ನಿಮ್ಮ ಆದಾಯ ಹೆಚ್ಚಳ ಮಾಡಿದರಾ? 2 ಕೋಟಿ ಉದ್ಯೋಗ ನೀಡುತ್ತೇನೆ ಎಂದರು. ನಿಮಗೆ ಸಿಕ್ಕಿತಾ? ಕೊವಿಡ್ ಸಮಯದಲ್ಲಿ ನಾವು ನಿಮ್ಮ ಜಿಲ್ಲೆಯ ರೈತರ ಜಮೀನಿಗೆ ಬಂದು ನೋಡಿದೆವು. ಮಾರುಕಟ್ಟೆ ಇಲ್ಲದೆ ದ್ರಾಕ್ಷಿಯನ್ನು ಕೇವಲ 5 ರೂ.ಗೆ ತೆಗೆದುಕೊಳ್ಳಿ ಎಂದು ಹೇಳುವ ಪರಿಸ್ಥಿತಿ ಇತ್ತು. ಬೆಂಬಲ ಬೆಲೆ ಇರಲಿಲ್ಲ. ತರಕಾರಿಗಳನ್ನು 2-3 ರೂ.ಗೆ ನೀಡಲು ಮುಂದಾಗಿದ್ದರು. ನಮ್ಮ ಪಕ್ಷದ ನಾಯಕರು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ರೈತರಿಗೆ ಬೆಂಬಲ ಬೆಲೆಯಲ್ಲಿ ಅವರ ಹಣ್ಣು ತರಕಾರಿ ಖರೀದಿ ಮಾಡಿ ಅವರಿಗೆ ನೆರವಾದೆವು. ಅವುಗಳನ್ನು ಬಡವರಿಗೆ ಉಚಿತವಾಗಿ ಹಂಚಿದ್ದೆವು.
ಕೋವಿಡ್ ಸಂದರ್ಭದಲ್ಲಿ ಇಡೀ ದೇಶ ತಲೆತಗ್ಗಿಸುವಂತೆ ಆಡಳಿತ ನಡೆಸಲಾಯಿತು. ಬೆಡ್ ಹಗರಣ ನಡೆದಿದೆ ಎಂದು ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಇವರು ಹಾಕಿದ್ದ ಸಾವಿರಾರು ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಲ್ಲಿ ಒಬ್ಬರೂ ಹೋಗಿ ಮಲಗಲಿಲ್ಲ.ಆಸ್ಪತ್ರೆಗಳಲ್ಲಿ ಬೆಡ್ ಪಡೆಯಲು ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಂಪಣ್ಣ ಈ ಸರ್ಕಾರ 40% ಸರ್ಕಾರ ಎಂದರೆ, ಕೋವಿಡ್ ಸಲಕರಣೆ ಹಾಗೂ ಔಷಧಿ ಖರೀದಿ ವೇಳೆ 200-300% ರಷ್ಟು ಭ್ರಷ್ಟಾಚಾರ ನಡೆದಿದೆ. ಇದೆಲ್ಲವನ್ನು ನಾವು ಹೇಳಿದ್ದೆವಾ? ಕೇಂದ್ರ ಸರ್ಕಾರದ ವರದಿಗಳೇ ರಾಜ್ಯ ಸರ್ಕಾರ ಹಣ ದುರುಪಯೋಗ ಮಾಡಿರುವ ಬಗ್ಗೆ ವರದಿ ನೀಡಿದೆ. ಇಂದು ನಮ್ಮ ಮಂತ್ರಿಗಳು ಪತ್ರಿಕಾಗೋಷ್ಠಿ ಮಾಡಿ ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ, ಅಣ್ಣಾ, ಆಗ ನೀನು ನಮ್ಮ ಬೆಡ್ ರೂಂ ನಲ್ಲೇ ಇದೆಯಲ್ಲವೇ? ಹಾಗಿದ್ದರೆ ನಿಮಗೂ ಭಾಗ ಇರಬೇಕಲ್ಲವೇ? ಸರ್ಕಾರದಲ್ಲಿ ನೀನು ಪ್ರತಿಯೊಂದಕ್ಕೂ ಭಾಗಿಯಾಗಿದ್ದಲ್ಲಣ್ಣಾ, ಈ ವಿಚಾರವಾಗಿ ಚರ್ಚೆ ಬೇಡ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಸುಧಾಕರ್ ನಿನಗೆ ಮಾನವೀಯತೆ ಇರಬೇಕಿತ್ತು. ನೀನು ಒಬ್ಬರ ಮನೆಗೂ ಹೋಗಿ ಸಾಂತ್ವನ ಹೇಳಲಿಲ್ಲ. ಕೇಂದ್ರದ ಮಂತ್ರಿ ದೆಹಲಿಯಲ್ಲಿ ಕೋವಿಡ್ ನಿಂದ ಸತ್ತರು. ಅವರ ಹೆಣವನ್ನು ಅವರ ಊರಿಗೆ ತಂದು ಕೊಡಲು ಆಗಲಿಲ್ಲ. 36 ಮಂದಿ ಮೃತರಿಗೆ ಪರಿಹಾರ ನೀಡಲಾಗಲಿಲ್ಲ. ಕೋವಿಡ್ ಮೃತರಿಗೆ ಪ್ರಮಾಣಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ನಿಮಗೆ ಮಾನವೀಯತೆ ಇದೆಯಾ? ನಾನು ಸಿದ್ದರಾಮಯ್ಯ ಅವರು ಹೋಗಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪಕ್ಷದ ವತಿಯಿಂದ ಪ್ರತಿ ಮನೆಗೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಿದ್ದೇವೆ. ನಾವು ಮಾನವೀಯತೆ ಮೆರೆದಿದ್ದೇವೆ.
ಕೋವಿಡ್ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗುವಾಗ ಬಸ್ ಟಿಕೆಟ್ ದರವನ್ನು ಮೂರು ಪಟ್ಟು ಹೆಚ್ಚಿಸಿ ಬಡ ಕಾರ್ಮಿಕರಿಂದ ಸುಲಿಗೆ ಮಾಡಲು ಸರ್ಕಾರ ಮುಂದಾಗಿತ್ತು. ಆಗ ನಾನು ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿ, ಪಕ್ಷದ ವತಿಯಿಂದ 1 ಕೋಟಿ ಚೆಕ್ ನೀಡಲು ಮುಂದಾಗಿ, ಇವರು ಬರಿ ಕಾರ್ಮಿಕರಲ್ಲ, ದೇಶದ ನಿರ್ಮಾತೃಗಳು ಅವರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿ ಎಂದು ಹೋರಾಟ ಮಾಡಿದೆವು. ಪರಿಣಾಮ ಸರ್ಕಾರ ಒಂದು ವಾರ ಉಚಿತ ಸಾರಿಗೆ ನೀಡಿತು. ನಂತರ ಇಡೀ ದೇಶದಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಯಿತು.
ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಬಿಜೆಪಿ ಸರ್ಕಾರದ ಮೂರುವರೆ ವರ್ಷಗಳ ಆಡಳಿತದಲ್ಲಿ ಮಾಡಿರುವ ಪಾಪದ ಪುರಾಣವನ್ನು ನಾವು ಬಿಡುಗಡೆ ಮಾಡಿದ್ದೇವೆ. ನೇಮಕಾತಿ, ಗುತ್ತಿಗೆದಾರರು, ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದ್ದೇವೆ. ಸರ್ಕಾರದ ಪ್ರತಿಯೊಂದು ಹುದ್ದೆಗಳಿಗೆ ಇಂತಿಷ್ಟು ಹಣ ನಿಗದಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಬಿಜೆಪಿ ಶಾಸಕರು ಹೇಳಿರುವಂತೆ ಮುಖ್ಯಮಂತ್ರಿ ಹುದ್ದೆ, ಮಂತ್ರಿ ಹುದ್ದೆಗೂ ಹಣ ನಿಗದಿ ಮಾಡಲಾಗಿದೆ.
ಹರಿಪ್ರಸಾದ್ ಅವರ ಮಾತಿಗೆ ಬಿಜೆಪಿ ನಾಯಕನೊಬ್ಬ ಮಾನನಷ್ಟ ಮೊಕದ್ದಮೆ ಹಾಕಿದ್ದಾನಂತೆ. ಕಾಂಗ್ರೆಸ್ ನಾಯಕರು, ನಿಮ್ಮ ಕೇಸು, ನೋಟೀಸ್ ಗಳಿಗೆ ಹೆದರುವುದಿಲ್ಲ.ಈ ದೇಶದ ಸ್ವಾತಂತ್ರ್ಯಕ್ಕೆನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿರುವ ಇತಿಹಾಸವಿದೆ. ನಿಮಗೆ ಹೆದರುವ ಅಗತ್ಯವಿಲ್ಲ.
ನಿಮ್ಮ ಬದುಕು ಹಸನ ಮಾಡಲು ನಾವು ಚಿಂತನೆ ನಡೆಸುತ್ತೇವೆ. ಬಿಜೆಪಿ ಕೇವಲ ಭಾವನೆ ಬಗ್ಗೆ ಗಮನಹರಿಸುತ್ತದೆ. ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ. ನಾವು ಹಿಂದೂಗಳಲ್ಲವೇ? ನಮಗೆ ದೇವರಿಲ್ಲವೇ? ನಮ್ಮಪ್ಪ ನನಗೆ ಶಿವಕುಮಾರ ಎಂದು, ಸಿದ್ದರಾಮಯ್ಯ ಅವರ ತಂದೆ ತಾಯಿ ಅವರಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟಿಲ್ಲವೇ? ಇವು ಹಿಂದೂ ಹೆಸರುಗಳಿಲ್ಲವೇ? ನಾವು ಪೂಜೆ ಪುನಸ್ಕಾರ ಮಾಡುವುದಿಲ್ಲವೇ? ಬಿಜೆಪಿ ಹಿಂದೂಗಳು ಮುಂದು ಎನ್ನುತ್ತಾರೆ. ಆದರೆ ನಾವು ಹಿಂದೂ, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಒಕ್ಕಲಿಗರು, ಲಿಂಗಾಯತರು, ಕುರುಬರು ಎಲ್ಲರೂ ಒಂದು ಎನ್ನುತ್ತೇವೆ.
ನಾವು ಹುಟ್ಟುವವಾಗ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದ್ದೆವೆ? ಹಿಂದೂ ಮುಸಲ್ಮಾನರ ರಕ್ತದ ಬಣ್ಣ ಬೇರೆ ಇದೆಯೇ? ಕಣ್ಣೀರು ಬೇರೆ ಇದೆಯೇ? ಬೆವರು ಬೇರೆ ಇದೆಯೇ? ಇದು ಮನುಷ್ಯ ಜನ್ಮ, ಮಾನವೀಯತೆ ಮುಖ್ಯ. ಆಸ್ಪತ್ರೆಯಲ್ಲಿ ರಕ್ತ ಬೇಕಾದಾಗ ಅದು ಹಿಂದೂ ರಕ್ತವೋ ಮುಸಲ್ಮಾನರ ರಕ್ತವೋ ಎಂದು ಪರೀಕ್ಷೆ ಮಾಡುತ್ತೀರಾ? ಆದರೆ ಈ ಸಮಾಜವನ್ನು ಜಾತಿ, ಧರ್ಮದ ವಿಚಾರದಲ್ಲಿ ಸಮಾಜ ಒಡೆಯುತ್ತಿರುವುದು ಏಕೆ?
ನಮ್ಮ ಜನರಿಗೆ ಹೊಟ್ಟೆಗೆ ಊಟ, ಕೈಗಳಿಗೆ ಕೆಲಸ, ಶುದ್ಧ ಆಡಳಿತ, ನಮಗೆ ಬರುವ ಆದಾಯದಲ್ಲಿ ನೆಮ್ಮದಿ ಬದುಕು ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಈ ಕೆಲಸವನ್ನು ಬಿಜೆಪಿ ಸರ್ಕಾರದಿಂದ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರ ನಿಮ್ಮ ಆದಾಯ ಡಬಲ್ ಮಾಡಿದೆಯಾ? ಕೋವಿಡ್ ಸಮಯದಲ್ಲಿ ನಿಮ್ಮ ಆಸ್ಪತ್ರೆ ಬಿಲ್ ಪಾವತಿ ಮಾಡಿದ್ದಾರಾ? ಆರಂಭದಲ್ಲಿ ಲಸಿಕೆಗೂ ಹಣ ವಸೂಲಿ ಮಾಡಲು ಆರಂಭಿಸಿದರು. ಎಲ್ಲರೂ ಸೇರಿ ಗುಮ್ಮಿದ ನಂತರ ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದರು.
ಆಟೋ ಚಾಲಕರು ಈ ಹಿಂದೆ 6 ತಾಸು ಆಟೋ ಓಡಿಸಿದರೆ ಜೀವನ ನಡೆಸಬಹುದಿತ್ತು, ಆದರೆ ಈಗ 16 ಗಂಟೆ ಓಡಿಸಿದರೂ ಜೀವನ ನಡೆಸುವುದು ಕಷ್ಟವಾಗಿದೆ. ಮಕ್ಕಳ ಶುಲ್ಕ, ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆದಾಯ ಪಾತಾಳಕ್ಕೆ ಕುಸಿದಿದೆ ಎಂದು ಹೇಳುತ್ತಿದ್ದಾರೆ. ಇವರಿಗೆಲ್ಲ ಹೇಗೆ ಸಹಾಯ ಮಾಡಬೇಕು ಎಂದು ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ಪಕ್ಷದ ವತಿಯಿಂದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ.
ಪ್ರತಿ ಮನೆ ಬೆಳಗಬೇಕು ಎಂದು ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲು ತೀರ್ಮಾನಿಸಿದ್ದೇವೆ. ಈ ಯೋಜನೆಯನ್ನು ಪ್ರಿಯಾಂಕಾ ಗಾಂಧಿ ಅವರು ಘೋಷಣೆ ಮಾಡಿದರು. ನಾನು ಸಿದ್ದರಾಮಯ್ಯ ಅವರು ಗ್ಯಾರೆಂಟಿ ಚೆಕ್ ಗೆ ಸಹಿ ಹಾಕಿದ್ದೇವೆ. ನಾವು ಈ ಎರಡು ಯೋಜನೆ ಘೋಷಣೆ ಮಾಡಿದ ನಂತರ ಎಲ್ಲಿಲ್ಲದ ಟೀಕೆ ಮಾಡುತ್ತಿದ್ದಾರೆ. ಟೀಕೆ ಮಾಡುವ ಮುನ್ನ, ನಿಮ್ಮ ಪ್ರಣಾಳಿಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರಲ್ಲ, ಎಲ್ಲಿ ಮಾಡಿದ್ದೀರಿ? ಆದಾಯ ಡಬಲ್ ಮಾಡುತ್ತೇವೆ ಎಂದಿದ್ದೀರಿ, 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಎಂದಿದ್ದರು, ಯಾರಿಗಾದರೂ ಬಂತಾ? ಯಾರಿಗೂ ನಯಾಪೈಸೆ ಸಿಕ್ಕಿಲ್ಲ. ಚಾಲಕರು, ಬೀದಿವ್ಯಾಪಾರಿಗಳಿಗೆ 10 ಸಾವಿರ ನೀಡಲಿಲ್ಲ, ಇನ್ನು 15 ಲಕ್ಷ ನೀಡುವರೇ? ನಾವು ನುಡಿದಂತೆ ನಡೆಯದಿದ್ದರೆ, ನಾವು ರಾಜಕಾರಣದಿಂದ ನಿವೃತ್ತಿಯಾಗುತ್ತೇವೆ. ಇದು ಕಾಂಗ್ರೆಸ್ ಸಿದ್ಧಾಂತ. ನಾವು ಸುಮ್ಮನೆ ಖಾಲಿ ಮಾತನಾಡುವುದಿಲ್ಲ.
ನಾನು ಅಧ್ಯಕ್ಷನಾದ ನಂತರ ವಿಧಾನಪರಿಷತ್ ಸದಸ್ಯರ ಚುನಾವಣೆ ಎದುರಾಯಿತು. ಕೋಲಾರದಲ್ಲಿ ತುಮಕೂರು, ಮಂಡ್ಯದಲ್ಲಿ ನಾವು ಸೋತಿದ್ದೆವು. ಹಾಲಿ ಎಂಎಲ್ಸಿ ಮನೋಹರ್, ಕಾಂತರಾಜ್ ಅವರು ಕಾಂಗ್ರೆಸ್ ಸೇರಿದರು. ಆಗ ನಮಗೆ ಶಕ್ತಿ ನೀಡಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಗೆಲ್ಲಲು ಕಾರಣರಾದರು. ಜೀವನದಲ್ಲಿ ಯಾರು ಸಹಾಯ ಮಾಡುತ್ತಾರೋ ಅವರನ್ನು ನೆನೆಯಬೇಕು. ಉಪಕಾರ ಸ್ಮರಣೆ ಇಲ್ಲದಿದ್ದರೆ, ಯಾರೂ ಬದುಕಲು ಸಾಧ್ಯವಿಲ್ಲ.
ನಾವು ನಮ್ಮ ತಾಯಿಯನ್ನು ನೆನೆಸಿಕೊಳ್ಳುತ್ತೇವೆ. ಅಮ್ಮನ ನೆನಪು, ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ. ಅದೇ ರೀತಿ ಸುಧಾಕರ್, ಮಂಜು ಅವರ ಸಹಾಯ ಮರೆಯುವುದಿಲ್ಲ. ಅವರಿಬ್ಬರಿಗೂ ಒಂದು ಕೋಟಿ ನಮಸ್ಕಾರ ಹೇಳುತ್ತೇನೆ. ಅವರ ಜತೆಗೆ ವಿ.ಮುನಿಯಪ್ಪ, ರಮೇಶ್ ಕುಮಾರ್, ಶಿವಶಂಕರ್ ರೆಡ್ಡಿ, ನಂಜೇಗೌಡರು, ಸುಬ್ಬಾರೆಡ್ಡಿ, ಆಂಜನಪ್ಪ ಎಲ್ಲರೂ ಶಕ್ತಿ ನೀಡಿದ್ದಾರೆ.
ಕಾಂತರಾಜು ಹಾಲಿ ಪರಿಷತ್ ಸದಸ್ಯರಿದ್ದರೂ ಅದನ್ನು ಬಿಟ್ಟು ಕಾಂಗ್ರೆಸ್ ಸೇರಲು ದಡ್ಡರಾ? ಮಧುಬಂಗಾರಪ್ಪ, ದತ್ತಾ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಬರಲು ದಡ್ಡರಾ? ದಳಕ್ಕೆ ಭವಿಷ್ಯವಿಲ್ಲ ಎಂದು ಅವರೆಲ್ಲರಿಗೂ ಗೊತ್ತಿದೆ. ಭವಿಷ್ಯವಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಕುಮಾರಣ್ಣನಿಗೆ ಅಧಿಕಾರ ಕೊಟ್ಟಿದ್ದೆವು. ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೆವು. ಈ ಮಹಾಜನತೆಗೆ ಕೇಳುವುದೊಂದೆ, ನಿಮ್ಮ ಸೇವೆ ಮಾಡಲು ನಮಗೆ ಶಕ್ತಿ ನೀಡಿ ಎಂದು ನಿಮ್ಮ ಪಾದಗಳಿಗೆ ನಮಸ್ಕರಿಸಿ ಕೇಳುತ್ತೇನೆ.ನಿಮ್ಮ ಮಗನಂತೆ ನಾನು, ನಿಮ್ಮ ಕಷ್ಟಕ್ಕೆ ನಾನು ನಿಲ್ಲುತ್ತೇನೆ. ನೀವು ಇಡೀ ರಾಜ್ಯಕ್ಕೆ ಹಾಲು, ತರಕಾರಿ ಕೊಟ್ಟಿದ್ದೀರಿ. ನಿಮಗಾಗಿ ದುಡಿಯಲು ನಾವು ಸಿದ್ಧ. ಈ ಜಿಲ್ಲೆಯ 5 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳನ್ನು ಗೆಲ್ಲಿಸಿ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಬೇಕು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು. ಟಿಕೆಟ್ ಸಿಗದವರಿಗೆ ನಿಗಮ ಮಂಡಳಿ ಹಾಗೂ ಇತರೆ ಸ್ಥಾನಮಾನ ನೀಡಿ ಅಧಿಕಾರ ನೀಡಲಾಗುವುದು. ಈ ಹಿಂದೆ ನಾವು ಎಲ್ಲರಿಗೂ ಅಧಿಕಾರ ಕೊಟ್ಟಿದ್ದೇವೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬಂತೆ ಕೆಲಸ ಮಾಡುತ್ತೇವೆ.
ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅವರಿಗೆ ಶಕ್ತಿ ನೀಡಿ. ರಾಹುಲ್ ಗಾಂಧಿ ಅವರು ದೇಶದುದ್ದಕ್ಕೂ ನಡೆಯುತ್ತಿದ್ದಾರೆ. ಯಾರಿಗಾಗಿ, ನಿಮಗಾಗಿ. ಅವರು ರಾಜ್ಯದಲ್ಲಿ ನಡೆಯುವಾಗ ಒಬ್ಬ ವಯಸ್ಸಾದ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇ ಕಾಯಿ ಕೊಟ್ಟರು. ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಬೆಳೆದಿದ್ದೇವೆ ತಗೊಳ್ಳಿ ಎಂದು ಕೊಟ್ಟರು. ರಾಹುಲ್ ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಹಗಲು ರಾತ್ರಿ, ಬಿಸಿಲು, ಮಳೆ, ಚಳಿ ಎನ್ನದೇ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಹೆಜ್ಜೆ ಹಾಕುತ್ತಿದ್ದಾರೆ. ಅವರಿಗೆ ನೀವು ಶಕ್ತಿ ನೀಡಬೇಕು. ಇಂದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಾಗಲಿದೆ. ಕರ್ನಾಟಕದ ಮೂಲಕ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನೀವು ಯಾವುದೇ ಕಾರಣಕ್ಕೂ ಯಾಮಾರಬೇಡಿ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ. ನಮ್ಮ ಸಮೀಕ್ಷೆ ಪ್ರಕಾರ 136ರಿಂದ 140 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ.
ಮುಂದಿನ ಕೆಲ ದಿನಗಳಲ್ಲಿ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಗೆ ಅರ್ಜಿ ಕಳುಹಿಸುತ್ತೇನೆ. ಪ್ರತಿ ಮೆನೆ ಮನೆಗೆ ಹೋಗಿ 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ಆರ್ಥಿಕ ನೆರವು ಯಾರಿಗೆ ಬೇಕು ಎಂದು ಅವರಿಂದ ಅರ್ಜಿ ತುಂಬಿಸಿ. ಆ ಮೂಲಕ ನಮ್ಮ ಕಾರ್ಯಕ್ರಮವನ್ನು ಪ್ರತಿ ಮನೆ ಮನೆಗೆ ತಲುಪಿಸಿ.
ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.