
ಮೈಸೂರು : ಕಾಂಗ್ರೆ ಸ್‌ಗೆ ಚುನಾವಣೆಗಳು ಬಂದಾಗ ಮಾತ್ರ ಬಡವರ ನೆನಪಾಗುತ್ತದೆ – ಟಿ.ಎಸ್.ಶ್ರೀವತ್ಸ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಚುನಾವಣೆ ಗಿಮಿಕ್; ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ.
*ಐದು ವರ್ಷಗಳ ಕಾಲ ಆಡಳಿತ ನಡೆಸಿದಾಗ ಉಚಿತ ವಿದ್ಯುತ್ ನೀಡಲಿಲ್ಲ,
*ಕಾಂಗ್ರೆ ಸ್‌ಗೆ ಚುನಾವಣೆಗಳು ಬಂದಾಗ ಮಾತ್ರ ಬಡವರ ನೆನಪಾಗುತ್ತದೆ. ಅಧಿಕಾರದಲ್ಲಿದ್ದಾಗ ಮರೆಯುತ್ತದೆ
ಮೈಸೂರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವುದು ಚುನಾವಣೆಯ ಗಿಮಿಕ್ ಆಗಿದೆ ಎಂದು ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಟೀಕಿಸಿದರು.
ಶುಕ್ರವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಬಡವರು ನೆನಪಾಗಲಿಲ್ಲ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ನೆನಪಾಗುತ್ತಿದೆ. ರಾಜ್ಯದ ಜನರನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕೆ ಇಲ್ಲ, ಸಲ್ಲದ ಗಿಮಿಕ್ ಆಮಿಷಗಳನ್ನು ಒಡ್ಡುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಆರಂಭಿಸಿರುವ ಪ್ರಜಾಧ್ವನಿ ಬಸ್ ಯಾತ್ರೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ ಯೋಜನೆಯನ್ನು ಜಾರಿಗೊಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಆದರೆ ಅವರದ್ದೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದೆ. ಆಗ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಯಾಕೇ ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡಲಿಲ್ಲ, ತಮ್ಮ ಸರಕಾರವಿದ್ದಾಗ ಈ ಯೋಜನೆ ಏಕೆ ಘೋಷಣೆ ಮಾಡಲಿಲ್ಲ. ಅಧಿಕಾರವಿದ್ದಾಗ ಜನರನ್ನು ಮರೆತ್ತಿದ್ದ ಅವರು, ಹಾಗೂ ಅವರ ಪಕ್ಷ, ಇದೀಗ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಈಗ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಮಾತನಾಡುತ್ತಿದ್ದಾರೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಅಂಗಡಿ ಮುಂಗಟ್ಟು ಮೇಲೆ ಎನ್‌ಐಎ ರೈಡ್ ಕುರಿತು ನೀಡಿರುವ ಹೇಳಿಕೆ ಹಾಗೂ ಕುಕ್ಕರ್ ಬ್ಲಾಸ್ಟ್ ಸಂದರ್ಭದಲ್ಲಿ ಈ ಪ್ರಕರಣವನ್ನು ಭಯೋತ್ಪಾಧಕ ಚಟುವಟಿಕೆ ಎಂದು ಹೇಗೆ ಪರಿಗಣಿಸುತ್ತೀರಿ ಎಂಬ ಕಾಂಗ್ರೆಸ್ ಮುಖಂಡರ ವಾದದ ಹಿಂದಿನ ಉದ್ದೇಶವೇನು ಎಂಬುದು ಜನರು ಅರ್ಥಮಾಡಿಕೊಂಡಿದ್ದಾರೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಕುಚೋದ್ಯದ ಹೇಳಿಕೆ ನೀಡುತ್ತಿದ್ದಾರೆ. ಇದಲ್ಲದೇ ಆದಿ ಚುಂಚನಗಿರಿ ಮಠ ಹಾಗೂ ಸಮುದಾಯದ ಪಂಥಗಳ ಕುರಿತು ನೀಡಿರುವ ಹೇಳಿಕೆ ನೀಡುತ್ತಿದ್ದಾರೆ. ಆದರೂ ಮುಸ್ಲಿಂ ಮತಗಳು ಕೈತಪ್ಪುತ್ತವೆ ಎಂಬ ಕಾರಣಕ್ಕೆ ಜೆಡಿಎಸ್ ನಾಯಕರು, ಅದರಲ್ಲೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅದನ್ನು ಪ್ರಶ್ನಿಸದೇ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿಯ ರಾಷ್ಟ್ರೀಯ ಎಂ. ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಆ ಮೂಲಕ ಇಂತಹವರಿಗೆ ಸಾರ್ವಜನಿಕರಿಂದ ಹಾಗೂ ಕಾನೂನಾತ್ಮಕವಾಗಿಯೂ ಬಿಜೆಪಿ ಪಾಠ ಕಲಿಸುವ ಎಚ್ಚರಿಕೆ ನೀಡಿದೆ ಎಂದರು.
ಪ್ರಜಾಧ್ವನಿ ಬಸ್ ಯಾತ್ರೆ ಕೇವಲ ರಾಜಕೀಯ ಗಿಮಿಕ್ ಆಗಿದೆ. ನಾ ನಾಯಕಿ ಎಂಬ ಕಾರ್ಯಕ್ರಮ ಆಯೋಜಿಸಿ ಹೆಣ್ಣು ಮಕ್ಕಳನ್ನು ಆಯೋಜಿಸಲು ಮುಂದಾಗಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ಮಹಿಳಾ ದೌರ್ಜನ್ಯ, ವ್ಯವಸ್ಥಿತ ಲವ್ ಜಿಹಾದ್ ಅನ್ನು ಪ್ರಶ್ನಿಸದ ಕಾಂಗ್ರೆಸ್ ಈಗ ಮಹಿಳೆ ಪರ ಎಂದು ಹೇಳುಕೊಳ್ಳುವುದು ಸರಿಯಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಗ್ರಾಮಾಂತರ ಅಧ್ಯಕ್ಷೆ ಮಂಗಳಸೋಮಶೇಖರ್, ನಗರ ವಕ್ತಾರ ಎಂ.ಮೋಹನ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇಅರಸ್ ಮತ್ತಿತರರು ಉಪಸ್ಥಿತರಿದ್ದರು.
———————-ಕೋಟ್—————————–
ಮೈಸೂರು ನಗರದಲ್ಲಿರುವ 1128 ಬೂತ್‌ಗಳ ಪೈಕಿ 830ರಲ್ಲಿ ಬಿಜೆಪಿ ಬೂತ್ ಅಭಿಯಾನ ಯಶಸ್ವಿಯಾಗಿದೆ . 18,481 ಸಾವಿರ ಮನೆಗಳ ಮೇಲೆ ಪಕ್ಷದ ಧ್ವಜವನ್ನು ಹಾರಿಸಲಾಗಿದೆ. 876 ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. 12,570 ಮಂದಿ ಪೇಜ್ ಪ್ರಮುಖರನ್ನು ನೇಮಿಸಲಾಗಿದೆ. ಮನ್‌ಕಿ ಬಾತ್ ಅನ್ನು ಬೂತ್‌ಗಳಲ್ಲಿ ಕೇಳಿಸುವ ವಿಚಾರಗಳನ್ನು ಇಟ್ಟುಕೊಂಡು ಅಭಿಯಾನ ನಡೆಸಲಾಗಿದೆ-
ಟಿ,ಎಸ್,ಶ್ರೀವತ್ಸ, ಬಿಜೆಪಿ ಮೈಸೂರು ನಗರಾಧ್ಯಕ್ಷರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.