ಜನ ನೆಮ್ಮದಿಯಾಗಿ ಇರಬೇಕು ಎನ್ನುವುದಾರೆ 2023 ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ತೀರ್ಮಾನಿಸಿ: ಸಿದ್ದರಾಮಯ್ಯ

ದಕ್ಷಿಣ ಕನ್ನಡ:

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರದ ಹರೇಕಳದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಕರಾವಳಿಯ ಜನ ರಾಜಕೀಯವಾಗಿ ಪ್ರಬುದ್ಧರು. ಇಲ್ಲಿನ ಜನ ನೆಮ್ಮದಿಯಾಗಿ ಇರಬೇಕು ಎನ್ನುವುದಾರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ತೀರ್ಮಾನವನ್ನು ಮಾಡಬೇಕು. 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 8 ಸ್ಥಾನದಲ್ಲಿ 7 ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಿರಿ, ಉಡುಪಿಯಲ್ಲಿ 5 ರಲ್ಲಿ 3 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಿರಿ. ಇದು ಮತ್ತೆ ಮರುಕಳಿಸಬೇಕು. ಇಂದು ಎಲ್ಲಾ ಜಾತಿ, ದರ್ಮಗಳ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿಯಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ. ಎಲ್ಲ ಜನರಿಗೂ ನ್ಯಾಯವನ್ನು, ರಕ್ಷಣೆಯನ್ನು ನೀಡುವುದು ಕಾಂಗ್ರೆಸ್‌ ಮಾತ್ರ.

ಬಿಜೆಪಿಯವರು ಚುನಾವಣಾ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ಮೇಲೆ ತಾವು ನೀಡಿದ್ದ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. ನಮ್ಮದು ಬಹುತ್ವದ ದೇಶ. ಇಲ್ಲಿ ಅನೇಕ ಜಾತಿ, ದರ್ಮ, ಭಾಷೆ, ಸಂಸ್ಕೃತಿಯ ಜನರಿದ್ದಾರೆ. ದೇಶದಲ್ಲಿ 140 ಕೋಟಿ ಜನಸಂಖ್ಯೆ ಹೊಂದಿದ್ದೇವೆ. ಕೆಲವೇ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ನಂ.1 ಆಗುತ್ತೇವೆ. ಇಷ್ಟು ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು, ಎಲ್ಲರಿಗೂ ರಕ್ಷಣೆ ಸಿಗಬೇಕು. ಅಂಬೇಡ್ಕರರು ನೀಡಿರುವ ಸಂವಿಧಾನದಲ್ಲಿ ಯಾರು ಯಾವ ಧರ್ಮ ಬೇಕಾದರೂ ಅನುಸರಿಸುವ ಸ್ವಾತಂತ್ರ್ಯ ನೀಡಿದ್ದಾರೆ. ದೇಶದ ಬಹುತ್ವದ ರಕ್ಷಣೆಯ ವಿಚಾರಗಳನ್ನು ಸಂವಿಧಾನ ಒಳಗೊಂಡಿದೆ. ಆದರೆ ಬಿಜೆಪಿಗೆ ಈ ಸಂವಿಧಾನದಲ್ಲಿ ನಂಬಿಕೆಯಿಲ್ಲ. ಕಾರಣ ಅವರಿಗೆ ಸಮಾನ ಹಕ್ಕುಗಳು, ಸಮಾನ ಅವಕಾಶಗಳನ್ನು ನೀಡುವುದರಲ್ಲಿ ಒಲವಿಲ್ಲ. ಅಸಮಾನತೆಯ ಸಮಾಜ, ಜಾತಿ ವ್ಯವಸ್ಥೆ ಇರಬೇಕು ಹೀಗಿದ್ದಾಗ ಜಾತಿ ಧರ್ಮಗಳ ಆಧಾರದ ಮೇಲೆ ಜನರನ್ನು ಪರಸ್ಪರ ಎತ್ತಿಕಟ್ಟಿ, ಅಸಮಾನತೆಯನ್ನು ಸೃಷ್ಟಿಸಿ ಆ ಮೂಲಕ ಶೋಷಣೆ ಮಾಡಬಹುದು ಎಂಬುದು ಅವರ ಲೆಕ್ಕಾಚಾರ. ಎಲ್ಲರೂ ಸಮಾನರಾಗಿ, ಸಮಾನತೆಯ ಸಮಾಜ ನಿರ್ಮಾಣವಾದರೆ ಶೋಷಣೆಗೆ ಅವಕಾಶ ಆಗಲ್ಲ ಎಂಬುದು ಅವರ ಯೋಚನೆ.

ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಕಾರವಾರ ಜಿಲ್ಲೆಯ ಅನಂತ ಕುಮಾರ್‌ ಹೆಗ್ಡೆ ಅವರು ನಾವು ಅಧಿಕಾರಕ್ಕೆ ಬಂದಿರುವುದೇ ಈ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಹೇಳಿದ್ದರು. ಸಂವಿಧಾನದಲ್ಲಿ ನಂಬಿಕೆ, ಗೌರವ ಇಲ್ಲದವರು ಜನಪ್ರತಿನಿಧಿಯಾಗಿರಬಾರದು. ಇಂಥವರು ಗ್ರಾಮ ಪಂಚಾಯತ್‌ ಸದಸ್ಯನಾಗಿರಲು ಕೂಡ ನಾಲಾಯಕ್. ಅವರು ಹೀಗೆ ಹೇಳುವಾಗ ಅಮಿತ್‌ ಶಾ ಪಕ್ಷದ ಅಧ್ಯಕ್ಷರು, ಮೋದಿ ಪ್ರಧಾನಿಯಾಗಿದ್ದರು, ಇವರ ಮೇಲೆ ಯಾವುದಾದರೂ ಶಿಸ್ತಿನ ಕ್ರಮ ತೆಗೆದುಕೊಂಡರಾ? ಇದರ ಅರ್ಥ ಏನು? ಮೋದಿ ಮತ್ತು ಅಮಿತ್‌ ಶಾ ಅವರೇ ಅನಂತ ಕುಮಾರ್‌ ಹೆಗ್ಡೆ ಅವರ ಕೈಲಿ ಹೇಳಿಸಿದ್ದು, ಇಲ್ಲದಿದ್ರೆ ಅವರನ್ನು ಪಕ್ಷದಿಂದ ವಜಾ ಮಾಡಬೇಕಿತ್ತು ಅಂತಲ್ಲವಾ?

ಹೊನ್ನಾವರದ ಪರೇಶ್‌ ಮೇಸ್ತಾ ಎಂಬ ಯುವಕ ಸತ್ತಾಗ ಕಾಂಗ್ರೆಸ್‌ ನವರೇ ಕೊಲೆ ಮಾಡಿಸಿದ್ದು ಎಂದು ಅನಂತ ಕುಮಾರ್‌ ಹೆಗ್ಡೆ ಅಪಪ್ರಚಾರ ಮಾಡಿದರು. ಆ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ, ಆಗ ಕೇಂದ್ರದಲ್ಲಿ ನಮ್ಮ ಸರ್ಕಾರ ಇರಲಿಲ್ಲ. ಈಗ ಸಿಬಿಐ ವರದಿಯಲ್ಲಿ ಪರೇಶ್‌ ಮೇಸ್ತಾನದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ಬಂದಿದೆ. ಈಗ ಅನಂತ್‌ ಕುಮಾರ್‌ ಹೆಗ್ಡೆ ಏನ್‌ ಹೇಳ್ತಾರೆ? ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಹೀಗೆ ಅನೇಕ ಸಾವುಗಳನ್ನು ಕೊಲೆಗಳು ಎಂದು ಬೇರೆಯವರ ಮೇಲೆ ಎತ್ತುಕಟ್ಟುವ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಆರ್‌,ಎಸ್‌,ಎಸ್‌ ಗೆ ಮಾತ್ರ ಮುಖ್ಯಮಂತ್ರಿ ಅಲ್ಲ, 7 ಕೋಟಿ ಕನ್ನಡಿಗರಿಗೆ ಮುಖ್ಯಮಂತ್ರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗಳು ನಡೆದಾಗ ಒಂದು ಕಡೆ ಶವ ನೋಡಲು ಹೋಗಿ, ಅವರಿಗೆ ಪರಿಹಾರ ನೀಡುತ್ತಾರೆ, ಇನ್ನೊಂದು ಕಡೆ ಅಲ್ಪಸಂಖ್ಯಾತರ ಕೊಲೆ ಆಗಿದ್ದಲ್ಲಿ ನೋಡಲೂ ಹೋಗಿಲ್ಲ, ಪರಿಹಾರವನ್ನೂ ನೀಡಿಲ್ಲ. ಸರ್ಕಾರದ ಖಜಾನೆ ಯಾರಪ್ಪನ ಮನೆಯ ದುಡ್ಡಲ್ಲ. ಜನರ ತೆರಿಗೆ ಹಣ. ಬೊಮ್ಮಾಯಿ ಅವರು ಆರ್‌,ಎಸ್‌,ಎಸ್‌ ನವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.

ದೇಶಭಕ್ತಿ ಬಗ್ಗೆ ಭಾರೀ ಮಾತನಾಡುವ ಆರ್‌,ಎಸ್‌,ಎಸ್‌ ನವರ ನಿಜ ಇತಿಹಾಸ ಎಲ್ಲರೂ ತಿಳಿದಿರಬೇಕು. 1925ರಲ್ಲಿ ಸ್ಥಾಪನೆಯಾದ ಆರ್‌,ಎಸ್‌,ಎಸ್‌ ಮುಖಂಡರಲ್ಲಿ ಒಬ್ಬರಾದ್ರೂ ದೇಶಕ್ಕಾಗಿ ಜೈಲಿಗೆ ಹೋಗಿದ್ದಾರ? ಸತ್ತಿದ್ದಾರ? ತ್ಯಾಗ ಬಲಿದಾನ ಮಾಡಿದ್ದಾರ? ಇಂಥವರು ಕಾಂಗ್ರೆಸ್‌ ಗೆ ದೇಶಭಕ್ತಿಯ ಪಾಠ ಮಾಡುವುದು ಹಾಸ್ಯಾಸ್ಪದ. ಇಂದು ನಾವು ನೀವೆಲ್ಲಾ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಾ ಇದ್ದರೆ ಅದಕ್ಕೆ ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಹೋರಾಟ ಮಾಡಿದ ಕಾಂಗ್ರೆಸ್‌ ಪಕ್ಷ ಕಾರಣ. ಬಿಜೆಪಿಗೆ ದೇಶಭಕ್ತಿಯ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂವಿಧಾನ ರಚನೆ ವರೆಗೆ ಬಿಜೆಪಿಯ ಕೊಡುಗೆ ಶೂನ್ಯ.

ಇಂದು ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಪ್ರಯೋಗಶಾಲೆಯಾಗಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರು ಯಕ್ಷಗಾನದಲ್ಲಿ ಬಿಜೆಪಿ ವಿಚಾರಗಳನ್ನು ಬಿಂಬಿಸಬೇಕು ಎಂದು ಹೇಳಿದ್ದಾರಂತೆ. ಯಕ್ಷಗಾನ ಇಲ್ಲಿನ ಜನ ಆರಾಧಿಸುವ ಕಲೆ. ಇಂಥಾ ಕಲೆಯಲ್ಲಿ ಜಾತಿ, ಧರ್ಮ, ಹಿಂದುತ್ವ ತೂರಿಸಲು ಹೋರಾಟಿದ್ದಾರಲ್ವ ಮಾನ ಮರ್ಯಾದೆ ಇದೆಯಾ? ಸಂವಿಧಾನದ ಬಗ್ಗೆ ಗೌರವ ಇಲ್ಲದವರು ದೇಶ ಆಳಲು ಲಾಯಕ್ಕಾ?

ಅಧಿಕಾರಕ್ಕೆ ಬರುವ ಮೊದಲು ಮೋದಿ ಅವರು ಅಚ್ಚೇದಿನ್‌ ಆಯೇಗಾ ಅಂದಿದ್ದರು, ಈಗ ಒಮ್ಮೆಯಾದರೂ ನಿರುದ್ಯೋಗದ ಬಗ್ಗೆ ತಮ್ಮ ಮನ್‌ ಕಿ ಬಾತ್‌ ನಲ್ಲಿ ಮಾತನಾಡಿದ್ದಾರ? ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು, 8 ವರ್ಷದಲ್ಲಿ 16 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು, ಆಗಿದೆಯಾ? ಹೊರದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು. 15 ಪೈಸೆ ಆದರೂ ಹಾಕಿದ್ದಾರ? 2016ರಲ್ಲಿ ನರೇಂದ್ರ ಮೋದಿ ಅವರು 2022ನೇ ಇಸವಿಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಈ ಭಾಗದಲ್ಲಿ ಅಡಿಕೆ ಬೆಳೆಯುವ ರೈತರ ಆದಾಯ ದುಪ್ಪಟ್ಟಾಗಿದೆಯಾ? ಅಡಿಕೆಗೆ ಹಳದಿ ರೋಗ, ಎಲೆ ಚುಕ್ಕಿ ರೋಗ ಬಂದು ಬೆಳೆ ನಾಶವಾಗಿದೆ, ಇನ್ನೊಂದು ಕಡೆ ಭೂತಾನ್‌ ನಿಂದ 17,000 ಮೆಟ್ರಿಕ್‌ ಟನ್‌ ಅಡಿಕೆಯಿಂದ ಆಮದು ಮಾಡಿಕೊಂಡಿದ್ದಾರೆ ಇದರ ಜೊತೆ ಕಳ್ಳ ಮಾರ್ಗದ ಮೂಲಕ ದೇಶದೊಳಗೆ ಅಡಿಕೆ ಬಂದಿದೆ. ಹೀಗಾದರೆ ಅಡಿಕೆ ಬೆಳೆಗಾರರ ಆದಾಯ ದುಪ್ಪಟ್ಟಾಗುತ್ತ? ಇದರ ಬದಲು ರೈತರು ಕೃಷಿ ಕಾರ್ಯಗಳಿಗೆ ಖರ್ಚು ಮಾಡುವ ಬಂಡವಾಳ ದುಪ್ಪಟ್ಟಾಗಿದೆ.

ಮನಮೋಹನ್‌ ಸಿಂಗ್‌ ಅವರು ಇರುವಾಗ 419 ರೂ ಇದ್ದ ಗ್ಯಾಸ್‌ ಬೆಲೆ 1,150 ರೂ ಆಗಿದೆ. ಮಿಸ್ಟರ್‌ ನರೇಂದ್ರ ಮೋದಿಜಿ ಕಹಾ ಹೈ ಅಚ್ಚೇದಿನ್? ನ ಖಾವೂಂಗ ನ ಖಾನೇದೂಂಗ ಎಂದು ಮೋದಿ ಅವರು ಹೇಳಿದ್ದರು, ಇಲ್ಲಿನ ಬಿಜೆಪಿ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಗುತ್ತಿಗೆದಾರರು ಹೇಳಿದ್ದಾರೆ. ವಿಧಾನಸೌಧದ ಗೋಡೆಗಳು ಲಂಚ, ಲಂಚ ಎಂದು ಪಿಸುಗುಟ್ಟಲು ಶುರು ಮಾಡಿವೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 6-7-2021ರಲ್ಲಿ ಪತ್ರದ ಮೂಲಕ ಹೇಳಿದ್ದಾರೆ, ಒಂದು ವರ್ಷ 5 ತಿಂಗಳು ಆಗಿದೆ ಒಂದು ತನಿಖೆ ಮಾಡಿಸಿಲ್ಲ ಪುಣ್ಯಾತ್ಮ. ನ ಖಾವೂಂಗ ನ ಖಾನೆದೂಂಗ ಎನ್ನುವುದರಲ್ಲಿ ನಂಬಿಕೆ ಇದ್ದಿದ್ದರೆ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ವಜಾ ಮಾಡಬೇಕಿತ್ತು.

ಸಂತೋಷ್‌ ಪಾಟೀಲ್‌ ಎಂಬ ಬೆಳಗಾವಿಯ ಗುತ್ತಿಗೆದಾರನಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಈಶ್ವರಪ್ಪ ಅವರು ಲಂಚ ಕೊಟ್ಟಿಲ್ಲ ಎಂದು ಬಿಲ್‌ ಕೊಡಲಿಲ್ಲ. ಇದರಿಂದ ನೊಂದ ಆತ ಪಕ್ಕದ ಉಡುಪಿಯ ಹೋಟೆಲ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ತನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಡೆತ್‌ ನೋಟ್‌ ಬರೆದು ಸಾವಿಗೆ ಶರಣಾದರೂ ಈಶ್ವರಪ್ಪ ಅವರಿಗೆ ಮೂರೇ ತಿಂಗಳಲ್ಲಿ ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ. ಬಿಲ್‌ ಹಣ ಸಿಕ್ಕಿಲ್ಲ ಎಂದು ದೇವರಾಯನ ದುರ್ಗದಲ್ಲಿ ಗುತ್ತಿಗೆದಾರ ಪ್ರಸಾದ್‌ ಎಂಬುವವರು ಆತ್ಮಹತ್ಯೆಗೆ ಶರಣಾದರು. ಅದೇ ರೀತಿ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿ ಪ್ರದೀಪ್‌ ಎಂಬ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು, ಅವರ ಮನೆಗೆ ಪಕ್ಷದ ನಾಯಕರ ಜೊತೆ ಹೋಗಿದ್ದೆ, ಆತ ತನ್ನ ಸಾವಿಗೆ ಲಿಂಬಾವಳಿ ಕಾರಣ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ಶಿವಕುಮಾರ್‌ ಎಂಬ ಗುತ್ತಿಗೆದಾರ ಕಮಿಷನ್‌ ಕಿರುಕುಳದಿಂದ ನೊಂದು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇಂಥಾ ಸರ್ಕಾರ ಬೇಕಾ? ನಮ್ಮ ಸರ್ಕಾರದಲ್ಲಿ ಹೀಗೆ ಆಗಿತ್ತಾ? ಕೆ.ಆರ್‌ ಪುರಂನ ಇನ್ಸ್‌ ಪೆಕ್ಟರ್‌ ಅವರು ಸಾವೀಗೀಡಾದಾಗ ಅವರ ಮೃತದೇಹ ನೋಡಲು ಹೋಗಿದ್ದ ಸಚಿವ ಎಂಟಿಬಿ ನಾಗರಾಜ್‌ ಅವರು “ಪಾಪ 70 – 80 ಸಾಲ ಮಾಡಿ ವರ್ಗಾವಣೆ ಪಡೆದುಕೊಂಡು ಬಂದಿದ್ದ ಒತ್ತಡದಿಂದ ಸತ್ತಿದ್ದಾನೆ” ಎಂದು ಹೇಳಿದ್ದರು. ಇಂಥಾ ಭ್ರಷ್ಟ ಸರ್ಕಾರ 2023ರ ಚುನಾವಣೆಯಲ್ಲಿ ತಮಗೆ ಬೇಕಾ ಎಂದು ರಾಜ್ಯದ ಜನ ತೀರ್ಮಾನ ಮಾಡಬೇಕು.

ನಾವು 2013ರ ಚುನಾವಣೆಯಲ್ಲಿ 165 ಭವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ನಂತರ 158 ಭರವಸೆಗಳನ್ನು ಈಡೇರಿಸಿ, ಹೆಚ್ಚುವರಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಬಿಜೆಪಿ 2018ರ ಚುನಾವಣಾ ಪ್ರಣಾಳಿಕೆಯಲ್ಲಿ 600 ಭರಸವೆಗಳನ್ನು ನೀಡಿ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ನೀರಾವರಿಗೆ 1 ಲಕ್ಷದ 50 ಸಾವಿರ ಕೋಟಿ ಹಣವನ್ನು 5 ವರ್ಷಗಳಲ್ಲಿ ಖರ್ಚು ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು, ಈ ವರ್ಷದ ಮಾರ್ಚ್‌ ಕೊನೆಗೆ ಒಟ್ಟು ಖರ್ಚಾಗುವುದು 45,000 ಕೋಟಿ ಮಾತ್ರ. ನಾವು ನೀರಾವರಿಗೆ 50,000 ಕೋಟಿ ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿ 56,000 ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದೆವು. ಇಲ್ಲಿ ಬ್ಯಾರೇಜ್‌ ಕಂ ಬ್ರಿಡ್ಜ್‌ ನಮ್ಮ ಈ ಯೋಜನೆಯ ಒಂದು ಭಾಗ.

ಈ ಭಾಗದ ನಾಯಕರಾದ ರಮಾನಾಥ ರೈ, ಖಾದರ್‌, ಅಭಯ್‌ ಚಂದ್ರ ಜೈನ್ ಅವರು ನನ್ನ ಬಳಿ ಬಂದು ಎತ್ತಿನಹೊಳೆ ಯೋಜನೆಯನ್ನು ಮಾಡುವುದರಿಂದ ನಮಗೆ ನೇತ್ರಾವತಿ ನೀರಿಗೆ ತೊಂದರೆ ಆಗುತ್ತದೆ ಎಂದರು. ಅದಕ್ಕೆ ನಾನು ಪಶ್ಚಿಮ ವಾಹಿಸಿ ಯೋಜನೆಗೆ ಅನುದಾನ ನೀಡಿದ್ದೆ, ಅದನ್ನು ಖಾದರ್‌ ಅವರು ಬಳಕೆ ಮಾಡಿಕೊಂಡು ಬ್ಯಾರೆಜ್‌ ಕಂ ಬ್ರಿಡ್ಜ್‌ ರೂಪಿಸಿದ್ದಾರೆ.

ರಾಜ್ಯದ 2 ಲಕ್ಷದ 38 ಸಾವಿರ ರಾಸುಗಳಿಗೆ ಚರ್ಮಗಂಟು ರೋಗ ಬಂದಿದೆ. ಪ್ರತೀ ದಿನ 2 ಲಕ್ಷ ಲೀಟರ್‌ ಹಾಲು ನಷ್ಟವಾಗುತ್ತಿದೆ. ರಾಜ್ಯದ 25 ಜನ ಇದರ ಮೇಲೆ ಅವಲಂಬಿತರಾಗಿದ್ದಾರೆ. ಜೂನ್‌ ತಿಂಗಳಲ್ಲಿ 94 ಲಕ್ಷ ಲೀಟರ್‌ ಹಾಲು ಬರುತ್ತಿತ್ತು, ಇಂದು 76 ಲಕ್ಷ ಲೀಟರ್‌ ಹಾಲು ಬರುತ್ತಿದೆ. ಇದಕ್ಕೆ ಕಾರಣ ರೈತರು ಉಪಯೋಗಿಸುವ ಹಿಂಡಿ, ಬೂಸ, ಕೆಎಂಎಫ್‌ ಕೊಡುವ ಫೀಡ್ಸ್‌ ಬೆಲೆ ಜಾಸ್ತಿಯಾಗಿದೆ, ಜಾನುವಾರುಗಳಿಗೆ ರೋಗ ಬಂದಿದೆ. ಇದರಿಂದ ನಿತ್ಯ 6 ಕೋಟಿ 66 ಲಕ್ಷ ಸಂಪಾದನೆ ಕಡಿಮೆಯಾಗಿದೆ. ಪಶು ವೈದ್ಯಕೀಯ ಇಲಾಖೆಯಲ್ಲಿ ಕೇವಲ 28% ಮಾತ್ರ ಸಿಬ್ಬಂದಿಗಳಿದ್ದಾರೆ. 1 ಕೋಟಿ 29 ಲಕ್ಷ ರಾಸುಗಳ ಪೈಕಿ ಶೇ.50 ಜಾನುವಾರುಗಳಿಗೂ ಲಸಿಕೆ ಹಾಕಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದರು.

ವರದಿ : ನಂದಿನಿ ಮೈಸೂರು

Leave a Reply

Your email address will not be published. Required fields are marked *